ಕಾಂಗ್ರೆಸ್ಸಿಗೆ ನವಜೋತ್ ಸಿಧು ನೀಡಿದ್ದ ರಾಜೀನಾಮೆ ವಾಪಸ್: ಆದರೆ ಒಂದು ಷರತ್ತು!
ಚಂಡೀಗಢ, ನವೆಂಬರ್ 5: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಹಿಂಪಡೆದಿದ್ದೇನೆ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹೊಸ ಅವಕಾಶವನ್ನು ನೀಡಿದ್ದು, ಹೊಸ ಅಡ್ವೊಕೇಟ್ ಜನರಲ್ ನೇಮಕವಾದ ನಂತರ ತಮ್ಮ ಕಚೇರಿಗೆ ಹಿಂತಿರುಗುತ್ತೇನೆ ಎಂದು ಹೇಳಿದ್ದಾರೆ.
ಪಂಜಾಬ್‌ನ ಅಡ್ವೊಕೇಟ್ ಜನರಲ್ ಹುದ್ದೆಯಿಂದ ಎಪಿಎಸ್ ಡಿಯೋಲ್ ರನ್ನು ತೆಗೆದುಹಾಕುವಂತೆ ಸಿಧು ಬೇಡಿಕೆಯಿಟ್ಟಿದ್ದಾರೆ. ಆದರೆ ಇತ್ತೀಚಿಗಷ್ಟೇ ಡಿಯೋಲ್ ಸಲ್ಲಿಸಿದ ರಾಜೀನಾಮೆಯನ್ನು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ತಿರಸ್ಕರಿಸಿದ್ದರು ಎಂದು ವರದಿಯಾಗಿದೆ.
ಪಂಜಾಬ್ ಕಾಂಗ್ರೆಸ್ನಲ್ಲಿ ಮುಗಿಯದ ಆಂತರಿಕ ಕಲಹ, ಚನ್ನಿ ವಿರುದ್ಧ ಸಿಧು ಗುಡುಗು
ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ನವಜೋತ್ ಸಿಂಗ್ ಸಿಧು "ನಾನು ನನ್ನ ರಾಜೀನಾಮೆಯನ್ನು ಹಿಂಪಡೆದಿದ್ದೇನೆ" ಎಂದು ಹೇಳಿದರು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭೇಟಿಯ ಮೂರು ವಾರಗಳ ನಂತರದಲ್ಲಿ ಈ ಬಗ್ಗೆ ಸಿಧು ಘೋಷಿಸಿದ್ದಾರೆ. ಅಲ್ಲದೇ "ಯಾವಾಗ ಹೊಸ ಅಡ್ವೊಕೇಟ್ ಜನರಲ್ ರನ್ನು ನೇಮಕಗೊಳಿಸುತ್ತಾರೋ ಆಗ ನಾನು ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ ಅಧಿಕಾರ ವಹಿಸಿಕೊಳ್ಳುತ್ತೇನೆ" ಎಂದು ಸಿಧು ತಿಳಿಸಿದ್ದಾರೆ.
ಸೋಮವಾರ ರಾಜೀನಾಮೆ ಸಲ್ಲಿಸಿದ್ದ ಡಿಯೋಲ್:
2015ರ ಹತ್ಯೆ ಮತ್ತು ಪೊಲೀಸ್ ಫೈರಿಂಗ್ ಪ್ರಕರಣದಲ್ಲಿ ಇಬ್ಬರು ಆರೋಪಿತ ಪೊಲೀಸರ ಪ್ರತಿನಿಧಿ ಎಂದು ಡಿಯೋಲ್ ವಿರುದ್ಧ ನವಜೋತ್ ಸಿಂಗ್ ಸಿಧು ಆರೋಪಿಸಿದ್ದರು. ಡಿಯೋಲ್ ಅವರನ್ನು ಅಡ್ವೊಕೇಟ್ ಜನರಲ್ ಸ್ಥಾನದಿಂದ ತೆಗೆದು ಹಾಕುವಂತೆ ನಿರಂತವಾಗಿ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆ ಸೋಮವಾರ ಡಿಯೋಲ್ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿರಿಗೆ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಆದರೆ ಅವರ ರಾಜೀನಾಮೆ ಅಂಗೀಕಾರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ರಾಜ್ಯ ಸರ್ಕಾರ ಇನ್ನೂ ಸ್ಪಷ್ಟಪಡಿಸಬೇಕಿದೆ. ಇದನ್ನು ಸ್ವೀಕರಿಸಲು ಚನ್ನಿ ನಿರಾಕರಿಸಿದ್ದು, ಸಿದ್ದು ಅವರನ್ನು ಇನ್ನಷ್ಟು ಕೆರಳಿಸಿದೆ ಎಂದು ಮೂಲಗಳು ತಿಳಿಸಿವೆ.
ಡಿಯೋಲ್ ಆಯ್ಕೆಗೆ ಏಕೆ ವಿರೋಧ?:
ಎಪಿಎಸ್ ಡಿಯೋಲ್ ಅವರು ಸಿಖ್ ಧಾರ್ಮಿಕ ಗ್ರಂಥವಾದ ಗುರು ಗ್ರಂಥ ಸಾಹಿಬ್ ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡಿನ ದಾಳಿಗೆ ಸಂಬಂಧಿಸಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಮಾಜಿ ಪೊಲೀಸ್ ಮುಖ್ಯಸ್ಥ ಸುಮೇಧ್ ಸೈನಿ ಪರ ವಕೀಲರಾಗಿದ್ದರು.
ಸಹೋಟಾರನ್ನು ತೆಗೆದು ಹಾಕುವಂತೆ ಒತ್ತಾಯ:
ಪಂಜಾಬ್ ಅಡ್ವೊಕೇಟ್ ಜನರಲ್ ಡಿಯೋಲ್ ಹೊರತಾಗಿ, ಐಪಿಎಸ್ ಸಹೋಟಾರನ್ನು ಕೂಡ ಪಂಜಾಬ್ ಪೊಲೀಸ್ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕುವಂತೆ ನವಜೋತ್ ಸಿಂಗ್ ಸಿಧು ಒತ್ತಾಯಿಸುತ್ತಿದ್ದಾರೆ. ಇದೇ ಸಹೋಟಾ 2015ರಲ್ಲಿ ಅಂದಿನ ಅಕಾಲಿ ಸರ್ಕಾರವು ಅತ್ಯಾಚಾರ ಪ್ರಕರಣಗಳ ತನಿಖೆಗಾಗಿ ರಚಿಸಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು. "ಸುಮೇಧ್ ಸೈನಿ ಅವರಿಗೆ ಜಾಮೀನು ಕೊಡಿಸಿದ ವಕೀಲರು ಅಡ್ವೊಕೇಟ್ ಜನರಲ್ ಆಗಿದ್ದರೆ, ಐಪಿಎಸ್ ಸಹೋಟಾರಂತಹ ವ್ಯಕ್ತಿ ಡಿಜಿಪಿ ಆಗಲು ಹೇಗೆ ಸಾಧ್ಯ," ಎಂದು ನವಜೋತ್ ಸಿಂಗ್ ಸಿಧು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಚರಂಜಿತ್ ಚನ್ನಿ ಬಗ್ಗೆ ಸಿಧು ಮಾತು:
"ನಾನು ಈ ವಿಷಯಗಳ ಬಗ್ಗೆ ಹೊಸ ಮುಖ್ಯಮಂತ್ರಿಗೆ ನೆನಪಿಸುತ್ತಿದ್ದೇನೆ. ಡ್ರಗ್ಸ್ ಮತ್ತು ಸರ್ಕಾರಕ್ಕೆ ಅಗೌರವ ತರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲುವವರು ಯಾರು. ಅದು ನಮ್ಮ ರಾಹುಲ್ ಗಾಂಧಿಯವರೇ ಆಗಿದ್ದು, ನಾವು ಈ ಸಮಸ್ಯೆಗಳನ್ನು ಬಗೆಹರಿಸಬೇಕಿದೆ," ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಇದೇ ವರ್ಷ ಮತ್ತೊಬ್ಬ ಮುಖ್ಯಮಂತ್ರಿಯನ್ನು ಬದಲಿಸುವುದಾದರೆ ಎಐಸಿಸಿ ಆದೇಶ ಏನಾಗಿರುತ್ತದೆ ಎಂದು ಸಿಧು ಪ್ರಶ್ನೆ ಮಾಡಿದ್ದಾರೆ.
ಸಪ್ಟೆಂಬರ್ ತಿಂಗಳಿನಲ್ಲಿ ಸಿಧು ರಾಜೀನಾಮೆ:
ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಂತೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಿತ್ತಾಟ ಶುರುವಾಗಿತ್ತು. ನವಜೋತ್ ಸಿಂಗ್ ಸಿಧು ತಮ್ಮ ಪ್ರತಿಸ್ಪರ್ಧಿ ಅಮರೀಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ತೆರವಾದ ಸಿಎಂ ಸ್ಥಾನಕ್ಕೆ ಆಯ್ಕೆಯಾದ ಚರಂಜಿತ್ ಸಿಂಗ್ ಚನ್ನಿಯವರ ಹೊಸ ನೇಮಕಾತಿಗಳಿಂದ ಕೆರಳಿದ ನವಜೋತ್ ಸಿಂಗ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಕಮಿತಿ ಅಧ್ಯಕ್ಷ ಸ್ಥಾನಕ್ಕೆ ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ರಾಜೀನಾಮೆ ಸಲ್ಲಿಸಿದ್ದರು.