Breaking: ನಟಿ, ಬಿಜೆಪಿ ನಾಯಕಿ ಸೋನಾಲಿ ಪೋಗಟ್ (42) ನಿಧನ
ಚಂಡೀಗಢ, ಆಗಸ್ಟ್ 23: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಬಿಗ್ ಬಾಸ್ ಖ್ಯಾತಿಯ ನಟಿ ಸೋನಾಲಿ ಫೋಗಟ್ ಮಂಗಳವಾರ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಅವರಿಗೆ 42 ವರ್ಷ ವಯಸ್ಸಾಗಿತ್ತು. ಸೋನಾಲಿ ತನ್ನ ಕೆಲವು ಸಹೋದ್ಯೋಗಿಗಳೊಂದಿಗೆ ಗೋವಾಗೆ ತೆರಳಿದ್ದರು. 2019 ರ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆದಂಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು.
ಸೋನಾಲಿ ಫೋಗಟ್ ತನ್ನ ಟಿಕ್‌ಟಾಕ್ ವಿಡಿಯೋಗಳಿಂದ ಹೆಚ್ಚು ಪ್ರಚಾರ ಗಳಿಸಿದ್ದರು. ಬಿಜೆಪಿಗೆ ಸೇರುವ ಮೊದಲು ಅವರು 2006 ರಲ್ಲಿ ಟಿವಿ ನಿರೂಪಕಿಯಾಗಿ ಟೆಲಿವಿಷನ್ ಲೋಕಕ್ಕೆ ಪಾದಾರ್ಪಣೆ ಮಾಡಿದರು. ರಿಯಾಲಿಟಿ ಶೋ ಬಿಗ್ ಬಾಸ್ 2020 ರ 14 ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು.

ಅವರು 2008 ರಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿಯ ಮಲಿಹಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಹರಿಯಾಣ, ದೆಹಲಿ ಮತ್ತು ಚಂಡೀಗಢದಂತಹ ಹಲವಾರು ರಾಜ್ಯಗಳಲ್ಲಿ ಪಕ್ಷದ ಬುಡಕಟ್ಟು ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು.
ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ಬಿಜೆಪಿಗೆ ಸೇರ್ಪಡೆಗೊಂಡು, ಕಳೆದ ತಿಂಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಉಪಚುನಾವಣೆಯಲ್ಲಿ ಆದಂಪುರದಿಂದ ಸೋನಾಲಿ ಫೋಗಟ್ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳಿದ್ದವು. ಇದರ ನಡುವೆ ಬಿಷ್ಣೋಯ್ ಕಳೆದ ವಾರ ಸೋನಾಲಿ ಫೋಗಟ್ ಅವರನ್ನು ಭೇಟಿ ಮಾಡಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಓಂ ಪ್ರಕಾಶ್ ಧನಕರ್, ಸೋನಾಲಿ ಫೋಗಟ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹಿಸಾರ್‌ನಲ್ಲಿರುವ ಪಕ್ಷದ ಜಿಲ್ಲಾಧ್ಯಕ್ಷ ಕ್ಯಾಪ್ಟನ್ ಭೂಪೇಂದರ್, "ಅವರು ಗೋವಾದಲ್ಲಿ ತಮ್ಮ ಕೆಲವು ಸ್ನೇಹಿತರೊಂದಿಗೆ ಇದ್ದರು. ಅವರು ಹೃದಯಾಘಾತದಿಂದ ನಸುಕಿನಲ್ಲಿ ನಿಧನರಾದರು ಎಂದು ನಾವು ಒಂದು ಗಂಟೆಯ ಹಿಂದೆ ವಿಷಯ ತಿಳಿಯಿತು. ಗೋವಾದಲ್ಲಿ ಕೆಲವು ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗುತ್ತಿದೆ, ನಂತರ ಆಕೆಯ ಮೃತದೇಹವನ್ನು ಹರಿಯಾಣಕ್ಕೆ ತರಲಾಗುವುದು" ಎಂದರು.
ಸೋನಾಲಿ ಫೋಗಟ್ ಬಗ್ಗೆ ಸಂಕ್ಷಿಪ್ತ ವಿವರ:
ಸೋನಾಲಿ ಫೋಗಟ್ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಕಳೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸೋನಾಲಿ ಫೋಗಟ್ ಬಿಜೆಪಿ ನಾಯಕಿ ಮಾತ್ರವಲ್ಲದೆ ನಟಿಯೂ ಆಗಿದ್ದರು. ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿದ್ದಾರೆ. ಬಿಗ್ ಬಾಸ್ 14 ರಲ್ಲೂ ಸೋನಾಲಿ ಫೋಗಟ್ ಕಾಣಿಸಿಕೊಂಡಿದ್ದರು. ಇವರು ಟಿಕ್‌ಟಾಕ್‌ನ ತಾರೆಯೂ ಆಗಿದ್ದಾರೆ.
ಸೋನಾಲಿ ಫೋಗಟ್ 21 ಸೆಪ್ಟೆಂಬರ್ 1979 ರಂದು ಹರಿಯಾಣದ ಫತೇಹಾಬಾದ್‌ನಲ್ಲಿ ಜನಿಸಿದರು. ಆಕೆಗೆ 43 ವರ್ಷ ವಯಸ್ಸಾಗಿತ್ತು. ಸೋನಾಲಿ ಫೋಗಟ್ ಹುಟ್ಟಿದ್ದು ಹರಿಯಾಣದಲ್ಲಿ. ಸೋನಾಲಿ ಫೋಗಟ್ ಅವರ ತಂದೆ ರೈತ. ಫೋಗಟ್ ಹರಿಯಾಣದ ಫತೇಹಾಬಾದ್‌ನ ಭೂತಾನ್ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಅವರಿಗೆ ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ.
ಸೋನಾಲಿ ಫೋಗಟ್ 2006 ರಲ್ಲಿ ಹಿಸಾರ್ ದೂರದರ್ಶನದಲ್ಲಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ, ಸೋನಾಲಿ ಫೋಗಟ್ 2008 ರಲ್ಲಿ ಬಿಜೆಪಿಗೆ ಸೇರಿದ್ದರು. ಅಂದಿನಿಂದ ಸೋನಾಲಿ ಫೋಗಟ್ ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದರು. ಸೋನಾಲಿ ಫೋಗಟ್ ಅವರು 'ಅಮ್ಮ' ಟಿವಿ ಧಾರಾವಾಹಿಯಲ್ಲಿ ನವಾಬ್ ಶಾ ಅವರ ಪತ್ನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಲ್ಲದೇ 'ಬಂದೂಕ್ ಆಲಿ ಜತಾನಿ' ಎಂಬ ಹರ್ಯಾನ್ವಿ ಹಾಡಿನಲ್ಲೂ ಸೋನಾಲಿ ಕಾಣಿಸಿಕೊಂಡಿದ್ದಾರೆ. ಸೋನಾಲಿ 'ದಿ ಸ್ಟೋರಿ ಆಫ್ ಬದ್ಮಾಶ್‌ಗಢ್' ವೆಬ್ ಸರಣಿಯಲ್ಲೂ ಕಾಣಿಸಿಕೊಂಡಿದ್ದಾರೆ.
Recommended Video
ಸೋನಾಲಿ ಫೋಗಟ್ ತನ್ನ ಅಕ್ಕನ ಸೋದರ ಮಾವ ಸಂಜಯ್ ಫೋಗಟ್ ಅವರನ್ನು ವಿವಾಹವಾದರು. 2016 ರಲ್ಲಿ, ಸೋನಾಲಿ ಫೋಗಟ್ ಅವರ ಪತಿ ಸಂಜಯ್ ಫೋಗಟ್ ಫಾರ್ಮ್ ಹೌಸ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಬಿಗ್ ಬಾಸ್-14 ರಲ್ಲೂ ಸೋನಾಲಿ ಪತಿಯ ಸಾವಿನ ಬಗ್ಗೆ ಪ್ರಸ್ತಾಪಿಸಿದ್ದರು. ತೋಟದ ಮನೆಯಲ್ಲಿ ಪತಿ ತೀರಿಕೊಂಡಾಗ ಅವರ ಜೊತೆ ಇರಲಿಲ್ಲ ಎಂದು ಸೋನಾಲಿ ಬೇಸರ ವ್ಯಕ್ತಪಡಿಸಿದ್ದರು. ಆಗ ತಾನು ಮುಂಬೈನಲ್ಲಿದ್ದೆ ಎಂದು ಸೋನಾಲಿ ಹೇಳಿದ್ದರು. ಪತಿಯ ಸಾವಿನಿಂದ ನನಗೆ ತುಂಬಾ ಆಘಾತವಾಗಿದೆ ಎಂದು ಸೋನಾಲಿ ಬಿಗ್ ಬಾಸ್‌ನಲ್ಲಿ ಹೇಳಿದ್ದರು.












Click it and Unblock the Notifications