ಪಂಜಾಬ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ: ರಾಹುಲ್ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದ ಸಿಧು
ಚಂಡೀಗಢ, ಫೆಬ್ರವರಿ 06: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಲು ಸಜ್ಜಾಗಿದೆ. ಘೋಷಣೆಗೂ ಮುನ್ನ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಭಾನುವಾರ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದು, "ರಾಹುಲ್ ಗಾಂಧಿ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ," ಎಂದು ತಿಳಿಸಿದ್ದಾರೆ.
ಇನ್ನು ರಾಹುಲ್ ಗಾಂಧಿಗೆ ಪಂಜಾಬ್‌ಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, "ನಿರ್ಧಾರ ಎಂಬ ಕ್ರಿಯೆಯಿಲ್ಲದೆ ಯಾವುದೇ ದೊಡ್ಡದನ್ನು ಸಾಧಿಸಲಾಗುವುದಿಲ್ಲ. ಪಂಜಾಬ್‌ಗೆ ಸ್ಪಷ್ಟತೆ ನೀಡಲು ಬಂದಿರುವ ನಮ್ಮ ಪ್ರಮುಖ ಬೆಳಕು ರಾಹುಲ್ ಜೀ ಅವರಿಗೆ ಆತ್ಮೀಯ ಸ್ವಾಗತ. ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ," ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಕಾಂಗ್ರೆಸ್ ಪಂಜಾಬ್ ಉಸ್ತುವಾರಿ ಹರೀಶ್ ಚೌಧರಿ, "ಫೆಬ್ರವರಿ 6 ರಂದು ಲುಧಿಯಾನದಲ್ಲಿ ತಮ್ಮ ವರ್ಚುವಲ್ ರ್‍ಯಾಲಿಯಲ್ಲಿ ರಾಹುಲ್ ಗಾಂಧಿಯವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ," ಎಂದಿದ್ದರು.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಶನಿವಾರ ತಮ್ಮ ಪಂಜಾಬ್ ಮಾದರಿಯು ರಾಜ್ಯದ ಜನರ ಜೀವನವನ್ನು ಬದಲಾಯಿಸಲು ಒಂದಾಗಿದೆ ಎಂದು ತಿಳಿಸಿದ್ದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ, "ನವಜೋತ್ ಸಿಂಗ್ ಸಿಧು ಸಮಸ್ಯೆಗಳ ರಾಜಕಾರಣದಿಂದ ವಿಮುಖರಾಗಿದ್ದಾರೆಯೇ?. ಸಿಧು ನೀತಿಗಳಿಂದ ವಿಮುಖರಾಗಿದ್ದಾರೆಯೇ? ಸಿಧು ಬಜೆಟ್ ಹಂಚಿಕೆಯಿಂದ ವಿಮುಖರಾಗಿದ್ದಾರೆಯೇ? ಸಿಧು ತಮ್ಮ ವ್ಯಾಪಾರ ಅಥವಾ ಮದ್ಯದ ಅಂಗಡಿಯನ್ನು ತೆರೆದಿದ್ದಾರೆಯೇ?," ಎಂದು ಪ್ರಶ್ನೆ ಮಾಡಿದ್ದರು.
"ನನ್ನ ಪಂಜಾಬ್ ಮಾದರಿಯು ಒಂದಾಗಿದೆ. ಮಕ್ಕಳು, ಯುವಕರು ಮತ್ತು ರಾಜ್ಯದ ಜನರ ಜೀವನವನ್ನು ಬದಲಿಸುವುದೇ ನನ್ನ ಪಂಜಾಬ್ ಮಾದರಿ. ಇಂದು ಪಂಜಾಬ್ ಒಂದು ಪ್ರಮುಖ ವಿಷಯವನ್ನು ನಿರ್ಧರಿಸಬೇಕಾಗಿದೆ. 60 ಶಾಸಕರಿದ್ದರೆ (ಕಾಂಗ್ರೆಸ್‌ಗೆ) ಸಿಎಂ ಆಯ್ಕೆಯಾಗುತ್ತಾರೆ. 60 ಶಾಸಕರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸರ್ಕಾರ ರಚನೆಯ ಮಾರ್ಗಸೂಚಿಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಪಕ್ಷದ ವರಿಷ್ಠರು ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದ್ದರು. ಭಾನುವಾರ ಪಂಜಾಬ್‌ನಲ್ಲಿ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲು ಸಜ್ಜಾಗಿದೆ. ಫೆಬ್ರವರಿ 20 ರಂದು ಪಂಜಾಬ್ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರಾಗಬಹುದು?
ಪಂಜಾಬ್‌ನಲ್ಲಿ ಇನ್ನು ಕೆಲವೇ ವಾರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿದೆ. ಈಗಾಗಲೇ ಎಎಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈ ನಡುವೆ ಆಡಳಿತಾರೂಢ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಕೂಗು ಕೇಳಿ ಬಂದಿದೆ. ಈ ಹಿನ್ನೆಲೆ ಪಂಜಾಬ್ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ವಿಚಾರದಲ್ಲಿ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯು ಹೇಳಿದೆ. ಈ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಚರಣ್‌ಜೀತ್ ಸಿಂಗ್ ಚನ್ನಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್‌ಎಸ್) ಮೂಲಕ ಈ ಸಮೀಕ್ಷೆಯು ನಡೆಯುತ್ತದೆ. ಮೊಬೈಲ್ ಸಂಪರ್ಕ ಹೊಂದಿರುವ ಸುಮಾರು 1.5 ಕೋಟಿ ಮತದಾರರಿಗೆ ಐವಿಆರ್‌ಎಸ್ ಸಂದೇಶವನ್ನು ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಮತದಾರರಿಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ. ಒಂದನೇ ಆಯ್ಕೆ ನವಜೋತ್ ಸಿಂಗ್ ಸಿಧು, ಎರಡನೇ ಆಯ್ಕೆ ಚರಣ್‌ಜೀತ್ ಸಿಂಗ್ ಚನ್ನಿ ಹಾಗೂ ಮೂರನೇ ಆಯ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಬೇಡ ಎಂಬುವುದಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications