ಪಂಜಾಬ್: ಸುಖ್ಬೀರ್ ಸಿಂಗ್ ಬಾದಲ್ ಆಸ್ತಿ 5 ವರ್ಷದಲ್ಲೇ 100 ಕೋಟಿ ರೂ. ಹೆಚ್ಚಳ!
ಚಂಡೀಗಢ, ಫೆಬ್ರವರಿ 18: ಪಂಜಾಬ್ ವಿಧಾನಸಭೆ ಚುನಾವಣಾ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಪ್ರಜಾಸತ್ತಾತ್ಮಕ ಸುಧಾರಣಾ ಸಮಿತಿ ವರದಿಯೊಂದನ್ನು ಪ್ರಕಟಿಸಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದ ಯಾವ ನಾಯಕರ ಆಸ್ತಿ ಎಷ್ಟರ ಮಟ್ಟಿಗೆ ವ್ಯತ್ಯಾಸವಾಗಿದೆ ಎಂಬುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಿರೋಮಣಿ ಅಕಾಲಿ ದಳದ ಸುಖ್ಬೀರ್ ಸಿಂಗ್ ಬಾದಲ್ ಒಟ್ಟು ಆಸ್ತಿಯ ಮೌಲ್ಯವು ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಏರಿಕೆ ಆಗಿದೆ ಎಂದು ಎಡಿಆರ್ ನೀಡಿರುವ ವರದಿಯಲ್ಲಿ ಹೇಳಲಾಗಿದೆ.
ಪಂಜಾಬ್ ಚುನಾವಣೆ: ಫೆಬ್ರವರಿ 18ರ ಸಂಜೆ 6 ಗಂಟೆಗೆ ಪ್ರಚಾರ ಅಂತ್ಯ
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಆಸ್ತಿಯಲ್ಲಿ 5 ಕೋಟಿ ರೂಪಾಯಿ ಇಳಿಕೆಯಾಗಿದ್ದು, 2017ರಿಂದ ಈವರೆಗೆ ಹೋಲಿಸಿದರೆ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆಸ್ತಿಯಲ್ಲಿ 20 ಕೋಟಿ ರೂಪಾಯಿ ಹೆಚ್ಚಳವಾಗಿದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ 101 ಶಾಸಕರ ಅಫಿಡವಿಟ್ ಅನ್ನು ವಿಶ್ಲೇಷಿಸಿ ಬುಧವಾರ ಎಡಿಆರ್ ವರದಿಯನ್ನು ಬಿಡುಗಡೆಗೊಳಿಸಿದೆ.

2022ರಲ್ಲಿ 9.45 ಕೋಟಿ ಆಸ್ತಿ ಘೋಷಿಸಿರುವ ಚನ್ನಿ
ಕಳೆದ 2017ರ ಪಂಜಾಬ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚರಂಜಿತ್ ಸಿಂಗ್ ಚನ್ನಿ 14.51 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರು. ಆದರೆ 2022ರ ವಿಧಾನಸಭೆ ಚುನಾವಣೆ ವೇಳೆ 9.45 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅಲ್ಲಿಗೆ ಕಳೆದ ಐದು ವರ್ಷದಲ್ಲಿ 5.06 ಕೋಟಿ ರೂಪಾಯಿ ಆಸ್ತಿ ಕಡಿಮೆಯಾಗಿದೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಆಸ್ತಿಯಲ್ಲೂ 1.25 ಕೋಟಿ ರೂಪಾಯಿ ಇಳಿಕೆಯಾಗಿದೆ. 2017ರಲ್ಲಿ ನವಜೋತ್ ಸಿಂಗ್ ಸಿಧು 45.90 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಈ ಬಾರಿ ತಾವು 44.65 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಐದು ವರ್ಷದಲ್ಲಿ ಶಾಸಕರ ಆಸ್ತಿ 2.76 ಕೋಟಿ ಏರಿಕೆ
ಕಳೆದ 2017ರಲ್ಲಿ ಗೆಲುವು ಸಾಧಿಸಿದ 101 ಶಾಸಕರು ಇದಕ್ಕೂ ಹಿಂದೆ ಸಲ್ಲಿಸಿದ ಅಫಿಡವಿಟ್ ಮತ್ತು ಈ ಬಾರಿ ಸಲ್ಲಿಸಿದ ಅಫಿಡವಿಟ್ ಅನ್ನು ವಿಶ್ಲೇಷಿಸಿ ಎಡಿಆರ್ ವರದಿಯನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಪಕ್ಷ ಮತ್ತು ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದ ಶಾಸಕರ ಸರಾಸರಿ ಆಸ್ತಿಯು 2017ರಲ್ಲಿ 13.34ರಷ್ಟಿದ್ದು, ಈ ಹೊತ್ತಿಗೆ ಅದು 16.10ರಷ್ಟು ಏರಿಕೆಯಾಗಿದೆ. ಐದು ವರ್ಷಗಳಲ್ಲಿ ಈ 101 ಶಾಸಕರು ಆಸ್ತಿಯಲ್ಲಿ ಸರಾಸರಿ 2.76ರಷ್ಟು ಏರಿಕೆಯಾಗಿದೆ ಎಂಬುದನ್ನು ಎಡಿಆರ್ ವರದಿ ಉಲ್ಲೇಖಿಸಿದೆ.

ಸುಖ್ಬೀರ್ ಸಿಂಗ್ ಬಾದಲ್ ಆಸ್ತಿಯಲ್ಲಿ 100 ಕೋಟಿ ಹೆಚ್ಚಳ
ಕಳೆದ ಐದು ವರ್ಷಗಳಲ್ಲಿ ಅತಿಹೆಚ್ಚು ಆಸ್ತಿ ಸಂಪಾದಿಸಿದ ಶಾಸಕರ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಶಿರೋಮಣಿ ಅಕಾಲಿ ದಳ ಪಕ್ಷದ ಶಾಸಕ ಸುಖ್ಬೀರ್ ಸಿಂಗ್ ಬಾದಲ್ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ಬಾದಲ್ ಒಟ್ಟು ಆಸ್ತಿ ಮೌಲ್ಯವು 102 ಕೋಟಿ ರೂಪಾಯಿ ಆಗಿತ್ತು. ಅದೇ 2022ರಲ್ಲಿ ಅವರ ಆಸ್ತಿ ಮೌಲ್ಯ 202 ಕೋಟಿ ರೂಪಾಯಿ ಆಗಿದೆ. ಇವರ ಜೊತೆಗೆ ಮನಪ್ರೀತ್ ಸಿಂಗ್ ಬಾದಲ್ ಆಸ್ತಿಯಲ್ಲಿ 32 ಕೋಟಿ ರೂಪಾಯಿ ಏರಿಕೆಯಾಗಿದ್ದು, 40 ರಿಂದ 72 ಕೋಟಿ ಹೆಚ್ಚಳವಾಗಿದೆ. ಆಮ್ ಆದ್ಮಿ ಪಕ್ಷದ ಶಾಸಕ ಅಮನ್ ಅರೋರಾ ಆಸ್ತಿಯಲ್ಲಿ 29 ಕೋಟಿ ರೂಪಾಯಿ ಏರಿಕೆಯಾಗಿದೆ ಎಂದು ಎಡಿಆರ್ ವರದಿ ಹೇಳಿದೆ.

ಯಾವ ಪಕ್ಷದಲ್ಲಿ ಎಷ್ಟು ಶಾಸಕರ ಆಸ್ತಿ ಏರಿಕೆ
2017ರಲ್ಲಿ ಗೆಲುವು ಸಾಧಿಸಿ ಈ ಬಾರಿ ಚುನಾವಣೆಗೆ ಮರುಸ್ಪರ್ಧೆ ಮಾಡುತ್ತಿರುವ ಶಾಸಕರ ಆಸ್ತಿಯ ಸರಾಸರಿ ಏರಿಕೆಯನ್ನು ಎಡಿಆರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐದು ವರ್ಷದಲ್ಲಿ ಕಾಂಗ್ರೆಸ್ ಪಕ್ಷದ 67 ಶಾಸಕರ ಆಸ್ತಿಯಲ್ಲಿ 1.47 ಕೋಟಿ ರೂಪಾಯಿ ಏರಿಕೆಯಾಗಿದೆ. ಅದೇ ರೀತಿ ಶಿರೋಮಣಿ ಅಕಾಲಿ ದಳದ ಶಾಸಕರ ಸರಾಸರಿ ಆಸ್ತಿ ಮೌಲ್ಯದಲ್ಲಿ 8.18 ಕೋಟಿ ರೂಪಾಯಿ ಏರಿಕೆಯಾಗಿದೆ. ಆಮ್ ಆದ್ಮಿ ಪಕ್ಷದ 10 ಶಾಸಕರ ಸರಾಸರಿ ಆಸ್ತಿ ಮೌಲ್ಯದಲ್ಲಿ 3.21 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಶಾಸಕರ ಸರಾಸರಿ ಆಸ್ತಿ ಮೌಲ್ಯದಲ್ಲಿ 20.41 ಕೋಟಿ ರೂಪಾಯಿ ಏರಿಕೆ ಆಗಿದೆ.