Actor Darshan: ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಇಂದು (ಶುಕ್ರವಾರ, ಮೇ 15) ಜಾಮೀನು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಜಾಮೀನು ನಿರಾಕರಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸದಲ್ಲಿರುವ ನಟ ದರ್ಶನ್ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ತೀವ್ರ ವಿಳಂಬ ಆಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ದರ್ಶನ್ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ವಾದ - ವಿವಾದಗಳನ್ನು ಆಲಿಸಿ ಮಹತ್ವದ ತೀರ್ಪು ನೀಡಿದೆ.

"ಒಂದು ವರ್ಷ ಸಮಯಾವಕಾಶ ನೀಡುತ್ತೇವೆ. ಆ ನಿಗದಿತ ಸಮಯದ ಒಳಗೆ ವಿಚಾರಣೆ ಪೂರ್ಣಗೊಳಿಸದಿದ್ದರೆ ಆಗ ಜಾಮೀನಿಗೆ ಅವರು ಅರ್ಜಿ ಸಲ್ಲಿಸಿ, ಅದನ್ನ ಪರಿಶೀಲನೆ ಮಾಡೋಣ," ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಮೂಲಕ ಸದ್ಯಕ್ಕೆ ನಟ ದರ್ಶನ್ ಅವರಿಗೆ ನ್ಯಾಯಮೂರ್ತಿ ಪರ್ದೀವಾಲಾ ಅವರಿದ್ದ ಪೀಠ ಜಾಮೀನು ನಿರಾಕರಿಸಿ ಮಹತ್ವದ ತೀರ್ಪು ನೀಡಿದ್ದಾರೆ. ಅಂದರೆ 2027ರ ಮೇ 15ರ ವರೆಗೂ ದರ್ಶನ್ ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಾಗುತ್ತದೆ.
ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ನೇತೃತ್ವದ ಇಬ್ಬರು ನ್ಯಾಯಮೂರ್ತಿಗಳ ಪೀಠ ಈ ಆದೇಶ ನೀಡಿದ್ದು, ಇಂದಿನಿಂದಲೇ ವಿಚಾರಣೆಯನ್ನು ಆದ್ಯತೆಯ ಮೇರೆಗೆ ನಡೆಸಬೇಕು. ಜೈಲಿನಲ್ಲಿ ಇತರ ಕೈದಿಗಳಿಗೆ ನೀಡಲಾಗುವಂತೆ ದರ್ಶನ್ ಅವರಿಗೆ ಸಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ನ್ಯಾಯಾಲಯ ಸೂಚನೆ ನೀಡಿದೆ.
ಮುಂದಿನ ಒಂದು ವರ್ಷದವರೆಗೆ ದರ್ಶನ್ ಯಾವುದೇ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆದರೆ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ಆ ಬಳಿಕ ಅವರಿಗೆ ಜಾಮೀನು ಪರಿಗಣಿಸಬಹುದು ಎಂದು ಹೇಳಿದೆ. ಹಿಂದಿನ ವಿಚಾರಣೆಗಳಲ್ಲಿ ಜೈಲಿನಲ್ಲಿನ ಅಕ್ರಮಗಳು ಹಾಗೂ ಸಹ ಕೈದಿಗಳಿಂದ ಕಿರುಕುಳ ಮತ್ತು ಬೆದರಿಕೆ ಎದುರಿಸುತ್ತಿರುವುದಾಗಿ ದರ್ಶನ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಇದಾದ ಬಳಿಕ ಸುಪ್ರೀಂ ಕೋರ್ಟ್ ಜೈಲು ಅಧಿಕಾರಿಗಳಿಂದ ವರದಿ ಕೇಳಿತ್ತು. ವಿಶೇಷ ಸರ್ಕಾರಿ ಅಭಿಯೋಜಕರು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿ ದರ್ಶನ್ ಮಾಡಿದ್ದ ಎಲ್ಲ ಆರೋಪಗಳನ್ನು ವಿಡಿಯೋ ಸಾಕ್ಷ್ಯಗಳೊಂದಿಗೆ ತಳ್ಳಿಹಾಕಿದ್ದರು. ವಿಚಾರಣೆ ವೇಳೆ ಪ್ರಕರಣದಲ್ಲಿರುವ 270 ಸಾಕ್ಷಿದಾರರಲ್ಲಿ ಇದುವರೆಗೆ ಕೇವಲ 10 ಮಂದಿಯಷ್ಟೇ ವಿಚಾರಣೆಗೆ ಒಳಪಟ್ಟಿದ್ದಾರೆ ಎಂಬುದೂ ಗಮನಕ್ಕೆ ಬಂತು.
ವಿಚಾರಣೆಯಲ್ಲಿ ವಿಳಂಬ ಆಗುತ್ತಿರುವ ಕಾರಣ ಉಳಿದ ಸಾಕ್ಷಿದಾರರ ವಿಚಾರಣೆ ಮುಗಿಯುವವರೆಗೆ ಮಧ್ಯಂತರ ಜಾಮೀನು ನೀಡಬೇಕೆಂದು ದರ್ಶನ್ ಮನವಿ ಮಾಡಿದ್ದರು. ಈ ವಿಷಯದ ಕುರಿತು ವಿವರವಾದ ವರದಿ ಕೇಳಿದ್ದ ಸುಪ್ರೀಂ ಕೋರ್ಟ್ ಇಂದು ಅಂತಿಮ ಆದೇಶ ಹೊರಡಿಸಿದೆ.












Click it and Unblock the Notifications