ಇಟಲಿಯಿಂದ ಅಮೃತಸರಕ್ಕೆ ಬಂದ ಮತ್ತೊಂದು ವಿಮಾನದ 150 ಪ್ರಯಾಣಿಕರಿಗೆ ಕೊರೊನಾ
ಚಂಡಿಗಡ್ ಜನವರಿ 7: ಇಟಲಿಯಿಂದ ಪಂಜಾಬ್‌ನ ಅಮೃತಸರಕ್ಕೆ ಬಂದ ಮತ್ತೊಂದು ವಿಮಾನದಲ್ಲಿ 150 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಟಲಿಯಿಂದ ಹೊರಟಿದ್ದ 290 ಪ್ರಯಾಣಿಕರಲ್ಲಿ 150 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನೂ ನಿನ್ನೆ ಪಂಜಾಬ್‌ನ ಅಮೃತಸರದಲ್ಲಿ ಇಟಲಿಯಿಂದ ಬಂದ ವಿಮಾನದಲ್ಲಿದ್ದ ಪ್ರಯಾಣಿಕರಿಗೂ ಕೊರೊನಾ ಸೋಂಕು ಇರುವುದು ಕಂಡುಬಂದಿದೆ. ಇದು ಇಟಲಿಯಲ್ಲಿ ಕೊರೊನಾ ಪರೀಕ್ಷೆಯ ದೋಷವನ್ನು ತೋರಿಸುತ್ತಿದೆ. ನಿನ್ನೆ ಇಟಲಿಯಿಂದ ಅಮೃತಸರಕ್ಕೆ ಬಂದ 125 ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಮಿಲನ್‌ನಿಂದ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅಮೃತಸರದಲ್ಲಿ ನಿನ್ನೆ ಮಧ್ಯಾಹ್ನ ಇಳಿದ ನಂತರ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ವೇಳೆ 125 ಪ್ರಯಾಣಿಕರಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿಕೆ ಸೇಠ್ ಹೇಳಿದ್ದಾರೆ.
ಈ ವಿಮಾನದಲ್ಲಿ ಒಟ್ಟು 170 ಪ್ರಯಾಣಿಕರು ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಇಟಲಿಯು ಕೊರೊನಾ ಹೆಚ್ಚರುವ ಅಪಾಯದಲ್ಲಿರುವ ದೇಶಗಳಲ್ಲಿ ಒಂದಾಗಿರುವುದರಿಂದ, ಎಲ್ಲಾ 170 ಪ್ರಯಾಣಿಕರನ್ನು COVID-19 ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಅವರಲ್ಲಿ 125 ಪ್ರಯಾಣಿಕರಿಗೆ ಕೊರೊನಾ ದೃಢಪಟ್ಟಿದೆ. ಒಟ್ಟು 170 ಪ್ರಯಾಣಿಕರಲ್ಲಿ 19 ಮಕ್ಕಳಾಗಿರುವುದರಿಂದ ಅವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಪಾಸಿಟಿವ್ ವರದಿ ಬಂದ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಕಳುಹಿಸಲಾಗುವುದು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಹೊರಡಲು ಕಾಯುತ್ತಿರುವುದನ್ನು ಮತ್ತು ಪೊಲೀಸರು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಇಟಲಿಯಿಂದ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದರೆ ಇಟಲಿಯಲ್ಲಿ ಪರೀಕ್ಷೆ ನಡೆಸಿರಲಿಲ್ಲವೇ ಎಂದು ಅನೇಕ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎನ್ನುವ ಒತ್ತಾಯ ಹೇರಲಾಗಿದೆ. ಸುಳ್ಳು ವರದಿಗಳೊಂದಿಗೆ ಪ್ರಯಾಣಿಕರಿಗೆ ಪ್ರಯಾಣಿಸುವ ಅವಕಾಶ ನೀಡಲಾಗುತ್ತಿದಿಯೇ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ. ಇದರಿಂದ ಸಹ ಪ್ರಯಾಣಿಕರಿಗೆ, ವಿಮಾನ ನಿಲ್ದಾಣಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ದೇಶದ 27 ರಾಜ್ಯಗಳಲ್ಲಿ ಸುಮಾರು 3,007 ಓಮಿಕ್ರಾನ್ ಸೋಂಕು ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ 1,199 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲಿ 876, ದೆಹಲಿಯಲ್ಲಿ 465, ಕರ್ನಾಟಕದಲ್ಲಿ 333 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ಹಿಂದೆ ಐದನೇ ಸ್ಥಾನದಲ್ಲಿತ್ತು, ಅದಕ್ಕೂ ಮುನ್ನ ಎಂಟನೇ ಸ್ಥಾನದಲ್ಲಿತ್ತು. ಪ್ರತಿ ನಿತ್ಯ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಇದೇ ವೇಳೆ ದೇಶದಲ್ಲಿ ಮತ್ತೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಇದೀಗ 1,17,100 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ 1,17,100 ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ರೇಟ್ ಶೇ.7.74 ಇದೆ. ಕಳೆದ 24 ಗಂಟೆಯಲ್ಲಿ 302 ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 4,83,178ಕ್ಕೇರಿದೆ. ಸುಮಾರು 30,836 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಇದುವರೆಗೂ ಒಟ್ಟು 3,43,71,845 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ 3,71,363 ಸಕ್ರಿಯ ಪ್ರಕರಣಗಳಿದ್ದು, 149.66 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ.












Click it and Unblock the Notifications