ಚಾಮರಾಜನಗರ: ವಧು ಸಿಗಲೆಂದು ಮಾದಪ್ಪನೆಡೆಗೆ ಯುವಕರ ಪಾದಯಾತ್ರೆ
ಚಾಮರಾಜನಗರ, ನವೆಂಬರ್ 04: ದೀಪಾವಳಿ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ಸುಮಾರು 100ಕ್ಕೂ ಅಧಿಕ ಯುವಕರು ಮಲೆ ಮಹದೇಶ್ವರ ಬೆಟ್ಟಕ್ಕೆ ಶುಕ್ರವಾರ ಬೆಳಗ್ಗೆ ಪಾದಯಾತ್ರೆ ಹೊರಟಿದ್ದಾರೆ.
ಕೋಡಹಳ್ಳಿ ಗ್ರಾಮದಿಂದ ಬುತ್ತಿ ಕಟ್ಟಿಕೊಂಡು, ಬೆತ್ತ ಹಿಡಿದು ಮಹದೇಶ್ವರನ ನಾಮಸ್ಮರಣೆ ಮಾಡುತ್ತಾ ಸುಮಾರು 4 ದಿನಗಳ ಕಾಲ 160 ಕಿ.ಮೀ ಪಾದಯಾತ್ರೆಯನ್ನು ಯುವಕರು ಆರಂಭಿಸಿದ್ದಾರೆ. ಈ ತಂಡ ಹಿಂದಿನಿಂದ ಬೆಳೆದು ಬಂದ ಧಾರ್ಮಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಹೆಣ್ಣು ಸಿಗದೆ ಮದುವೆ ಆಗದ ಕಾರಣ ಪಾದಯಾತ್ರೆ ಮಾಡುವ ಮೂಲಕ ಮಧು ಸಿಗಲೆಂದು ಮಾದಪ್ಪನ ಮೊರೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಪಾದಯಾತ್ರೆ ಹೊರಟ ಯುವಕರು ಮಾತನಾಡಿ, ಪ್ರಸ್ತುತ ಬರಗಾಲ ಇರುವ ಹಿನ್ನೆಲೆಯಲ್ಲಿ ಇದನ್ನು ಹೋಗಲಾಡಿಸಲು ನಾಡಿಗೆ ಉತ್ತಮ ಮಳೆ ಬೆಳೆಯಾಗಿ, ರೋಗ ರುಜಿನ ಬರದೆ ಆರೋಗ್ಯಕರವಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಲು ಪಾದಯಾತ್ರೆ ಹೊರಡಲಾಗಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳ ಮದುವೆಗೆ ಹೆಣ್ಣು ಕೊಡಲು ಸಮಾಜವು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಹೆಣ್ಣು ಸಿಗಲೆಂದು ಮಾದಪ್ಪನ ಬಳಿಗೆ ತೆರಳಿ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಕೋಡಹಳ್ಳಿ ಗ್ರಾಮದ ಯುವಕರಾದ ಜವರ, ಮಹೇಶ್, ಮಹದೇವ, ಕೆಂಪ, ನಿಲೇಶ್, ಸ್ವಾಮಿ, ಸಿದ್ದರಾಜು, ಕೃಷ್ಣ, ಮಾಧು, ಕುಮಾರ, ಪ್ರಸಾದ್ ಸೇರಿದಂತೆ 100ಕ್ಕೂ ಅಧಿಕ ನೀಲಗಾರರು ಹಾಗೂ ಮಹದೇಶ್ವರ ಗುಡ್ಡರು ಭಾಗವಹಿಸಿದ್ದರು.
ವಿದ್ಯುತ್,ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು ಪ್ರತಿಭಟನೆ
ವಿದ್ಯುತ್ ಮತ್ತು ರೈಲ್ವೆ ಇಲಾ ಖೆಗಳನ್ನು ಖಾಸಗೀಕರಣ ಮಾಡಲು ಹೊರಟಿ ರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು)ಸಂಘಟನೆಯ ಕಾರ್ಯಕರ್ತರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇಗುಲದ ಎದುರು ಜಮಾಯಿಸಿದ ಸಿಐಟಿಯು ಸಂಘಟ ನೆಯ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ಮೆರವಣಿಗೆ ಹೊರಟು ಸಂಪಿಗೆ ರಸ್ತೆಯ ಮೂಲಕ ರೈಲ್ವೆ ನಿಲ್ದಾಣ ತಲುಪಿದರು. ಅಲ್ಲಿಯೂ ಕೂಡ ಕೆಲಕಾಲ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಎಲ್ಲಾ ಇಲಾಖೆಗಳನ್ನು ಲೂಟಿ ಕೋರರಿಗೆ ಮಾರಾಟ ಮಾಡಲು ಮುಂದಾಗಿದೆ. ವಿದ್ಯುತ್ ನಿಂದ ವರ್ಷಕ್ಕೆ 10 ಸಾವಿರ ಕೋಟಿ ಆದಾಯ ಬರುತ್ತಿದೆ. ಅದನ್ನು ಬಂಡವಾಳದಾರರಿಗೆ ಮಾರಾಟ ಮಾಡಲು ಹೊರಟಿದೆ. ದೇಶದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸಮಸ್ಯೆ ಎದ್ದುಕಾಣುತ್ತಿದೆ.
ಇಂತಹ ಸಮಯದಲ್ಲಿ ರೈಲು ಮತ್ತು ಬಸ್ ಸಂಖ್ಯೆಗಳನ್ನು ಹೆಚ್ಚುಮಾಡಿದರೆ ನಿರುದ್ಯೋಗಿ ಗಳಿಗೆ ಉದ್ಯೋಗ ಸಿಗಲಿದೆ. ಅದನ್ನು ಮಾಡಲು ಸಾಧ್ಯವಾಗದ ಸರ್ಕಾರ, ಬಂಡವಾಳದಾರನಿಗೆ ಈ ಎರಡು ಇಲಾಖೆಯನ್ನು ಮಾರಾಟ ಮಾಡಲು ಹೊರಟಿದೆ. ಎಲ್ಲಾ ರಾಷ್ಟ್ರೀಕೃತ ಇಲಾಖೆಗಳನ್ನು ಖಾಸಗಿಕರಣ ಮಾಡುವ ಮೂಲಕ ದೇಶದ ಮಾನ ಹರಾಜು ಮಾಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗಿಕರಣದಿಂದಾಗಿ ರೈತರ ಪಂಪ್ ಸೆಟ್ ಗಳಿಗೆ 10ಎಚ್‌ಪಿ ವರೆಗೆ ಸಿಗುತ್ತಿರುವ ಉಚಿತ ವಿದ್ಯುತ್ ಸಿಗುವುದಿಲ್ಲ. ನಗದು ವರ್ಗಾವಣೆ ಹೆಸರಲ್ಲಿ ರೈತರ ಪಂಪ್ಸೆಟ್, ಗೃಹಬಳಕೆ, ನೇಕಾರಿಕೆ ಇನ್ನಿತರೆ ಬಳಕೆಗೆ ಸಿಗುತ್ತಿರುವ ಸಬ್ಸಿಡಿ ಸಿಗುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ 2022ಅನ್ನು ವಾಪಸ್ಸು ಪಡೆಯಬೇಕು.
ಖಾಲಿ ಇರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ಹುದ್ದೆಗಳನ್ನು ಭರ್ತಿ ಮಾಡಬೇಕು. ರೈಲ್ವೆ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ರೂಪಿಸಬೇಕು. ಜನತೆಯ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೈಲ್ವೆ ಮತ್ತು ವಿದ್ಯುತ್ ಇಲಾಖೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಇದೇ ತಿಂಗಳು 26,27,28 ರಂದು ರಾಜಭವನ ಮುತ್ತಿಗೆ ಹಾಕುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರಾಮಕೃಷ್ಣ, ಸಿದ್ದರಾಜು, ಸುರೇಶ್, ಸುಜಾತ, ನಾಗಮಣಿ,ಶಾಹಿದಾಬಾನು, ತುಳಸಮ್ಮ, ಪಾರ್ವತಮ್ಮ, ಮೀನಾ, ಮೀನಾಕ್ಷಿ, ಸೂಜಿಯ, ದೇವಮ್ಮ, ಗೌರಿ ಸೇರಿದಂತೆ ಇತರರು ಇದ್ದರು.












Click it and Unblock the Notifications