ಮಧು ಕರಣಿಸು ಎಂದು ಮಲೆ ಮಾದಪ್ಪನ ಮೊರೆ ಹೋದ ಯುವಕರ ಗ್ಯಾಂಗ್
ಚಾಮರಾಜನಗರ, ಅಕ್ಟೋಬರ್, 30: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಯುವಕರ ದಂಡೇ ಬೆಟ್ಟಕ್ಕೆ ಹರಿದು ಬರುತ್ತಿದೆ. ಹಾಗಾದರೆ ಯುವಕರು ಬೆಟ್ಟಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಹರಿದುಬರಲು ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವಕರು ವಧು ಸಿಗಲೆಂದು ಇಷ್ಟಾರ್ಥ ಇಟ್ಟುಕೊಂಡು ಬರಿಗಾಲು ಪಾದಯಾತ್ರೆ ನಡೆಸಿದ್ದಾರೆ.

ಹೊಸಮಾಲಂಗಿಯಲ್ಲಿ 62 ಮಂದಿ ಯುವಕರಿಗೆ ಮದುವೆ ಆಗಿಲ್ಲ, ಎಷ್ಟು ಹುಡುಕಿದರೂ ವಧು ಸಿಗುತ್ತಿಲ್ಲ. ಮಾದಪ್ಪ ಕರುಣೆ ತೋರಿಸಿ ನಮಗೆ ಮದುವೆ ಮಾಡಿಸಲೆಂದು ಯಾತ್ರೆ ಹೊರಟ್ಟಿದ್ದೇವೆ ಎಂದು ಮನು ಎಂಬ ಯಾತ್ರಿಕರೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ 29ರಿಂದ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಆರಂಭಗೊಂಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಕ್ಷೇತ್ರ ಕಂಗೊಳಿಸುತ್ತಿದೆ. ದೇವರಿಗೆ ವಿಶೇಷ ಪೂಜೆ, ಅಭಿಷೇಕಗಳು ಸಾಂಪ್ರದಾಯಿಕವಾಗಿ ಜರುಗುತ್ತಿದೆ.
ರಾಜ್ಯ ಅಷ್ಟೇ ಅಲ್ಲದೆ, ತಮಿಳುನಾಡಿನಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಭಕ್ತರಿಗೆ ತೊಂದರೆಯಾಗದಂತೆ ನಿರಂತರ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಎತ್ತ ನೋಡಿದರತ್ತ ಭಕ್ತ ಸಮೂಹವೇ ಕಂಡುಬರುತ್ತಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ: ಕಳೆದ ಬಾರಿಯೂ ಸಹ ದೀಪಾವಳಿ ಹಾಗೂ ಕಾರ್ತಿಕ ಮಾಸದ ಪ್ರಯುಕ್ತ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ಸುಮಾರು 100ಕ್ಕೂ ಅಧಿಕ ಯುವಕರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗಿದ್ದರು.
ಕೋಡಹಳ್ಳಿ ಗ್ರಾಮದಿಂದ ಬುತ್ತಿ ಕಟ್ಟಿಕೊಂಡು, ಬೆತ್ತ ಹಿಡಿದು ಮಹದೇಶ್ವರನ ನಾಮಸ್ಮರಣೆ ಮಾಡುತ್ತಾ ಸುಮಾರು 4 ದಿನಗಳ ಕಾಲ 160 ಕಿ.ಮೀ ಪಾದಯಾತ್ರೆಯನ್ನು ಯುವಕರು ಆರಂಭಿಸಿದ್ದರು. ಈ ತಂಡ ಹಿಂದಿನಿಂದ ಬೆಳೆದು ಬಂದ ಧಾರ್ಮಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಹೆಣ್ಣು ಸಿಗದೆ ಮದುವೆ ಆಗದ ಕಾರಣ ಪಾದಯಾತ್ರೆ ಮಾಡುವ ಮೂಲಕ ಮಧು ಸಿಗಲೆಂದು ಮಾದಪ್ಪನ ಮೊರೆ ಹೋಗಿದ್ದರು.
ಈ ಸಂದರ್ಭದಲ್ಲಿ ಪಾದಯಾತ್ರೆ ಹೊರಟ ಯುವಕರು ಮಾತನಾಡಿ, ಪ್ರಸ್ತುತ ಬರಗಾಲ ಇರುವ ಹಿನ್ನೆಲೆಯಲ್ಲಿ ಇದನ್ನು ಹೋಗಲಾಡಿಸಲು ನಾಡಿಗೆ ಉತ್ತಮ ಮಳೆ ಬೆಳೆಯಾಗಿ, ರೋಗ ರುಜಿನ ಬರದೆ ಆರೋಗ್ಯಕರವಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಲು ಪಾದಯಾತ್ರೆ ಹೊರಡಲಾಗಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳ ಮದುವೆಗೆ ಹೆಣ್ಣು ಕೊಡಲು ಸಮಾಜವು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಹೆಣ್ಣು ಸಿಗಲೆಂದು ಮಾದಪ್ಪನ ಬಳಿಗೆ ತೆರಳಿ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.
ಪಾದಯಾತ್ರೆಯಲ್ಲಿ ಕೋಡಹಳ್ಳಿ ಗ್ರಾಮದ ಯುವಕರಾದ ಜವರ, ಮಹೇಶ್, ಮಹದೇವ, ಕೆಂಪ, ನಿಲೇಶ್, ಸ್ವಾಮಿ, ಸಿದ್ದರಾಜು, ಕೃಷ್ಣ, ಮಾಧು, ಕುಮಾರ, ಪ್ರಸಾದ್ ಸೇರಿದಂತೆ 100ಕ್ಕೂ ಅಧಿಕ ನೀಲಗಾರರು ಹಾಗೂ ಮಹದೇಶ್ವರ ಗುಡ್ಡರು ಭಾಗವಹಿಸಿದ್ದರು.












Click it and Unblock the Notifications