ಬಿಜೆಪಿ ಸರ್ಕಾರ 600 ಭರವಸೆಗಳಲ್ಲಿ ಒಂದನ್ನಾದ್ರೂ ಈಡೇರಿಸಿದ್ಯಾ?: ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ
ಚಾಮರಾಜನಗರ, ಜೂನ್, 06: ಬಿಜೆಪಿ ನಾಯಕರು ಕಾಂಗ್ರೆಸ್ ಜಾರಿ ಮಾಡಿರುವ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಲೇ ಇದ್ದಾರೆ. ಇದಕ್ಕೆ ಇದೀಗ ತಿರುಗೇಟು ನೀಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, ಬಿಜೆಪಿಯವರ ಸ್ಥಿತಿ ತಾನು ಕಳ್ಳ-ಪರರನ್ನು ನಂಬ ಎಂಬಂತಾಗಿದೆ ಎಂದು ಕಿಡಿಕಾರಿದರು. ಅಲ್ಲದೆ ಬಿಜೆಪಿ ಸರ್ಕಾರವು ಕೊಟ್ಟಿದ್ದ 600 ಭರವಸೆಗಳನ್ನು ಈಡೇರಿಸಿದೆಯಾ ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ಯಂತೀಂದ್ರ ಸಿದ್ದರಾಮಯ್ಯನವರ ಪ್ರತಿಕ್ರಿಯೆಯನ್ನು ಗಮನಿಸಿದರೆ ಸುಮ್ನೆ ಟೀಕೆ ಮಾಡದಲ್ಲಮ್ಮ ಮಚ್ಚಾ.. ನಮ್ಗೂ ನಿಮ್ಮ ತಪ್ಪುಗಳನ್ನು ಎತ್ತಿಹಿಡಿಯುವುದು ಗೊತ್ತಿದೆ ಎಂದು ಹೇಳಿದ ರೀತಿ ಕಾಣುತ್ತದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶಾಸಕ ಗಣೇಶ್ ಪ್ರಸಾದ್ ಆಯೋಜನೆ ಮಾಡಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿ, ಅವರಂತೆ ಸುಳ್ಳು ಭರವಸೆಗಳನ್ನು ಕಾಂಗ್ರೆಸ್ ಕೊಟ್ಟಿದೆ ಎಂದುಕೊಂಡಿದ್ದರು. ಆದರೆ ಎಲ್ಲಾ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಿದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.
ಬಿಜೆಪಿ ಸರ್ಕಾರ 600 ಭರವಸೆಗಳನ್ನು ಕೊಟ್ಟಿತ್ತು. ಆದರೆ ಯಾವುದನ್ನೂ ಈಡೇರಿಸಿರಲಿಲ್ಲ, ಪ್ರಧಾನಿ ಮೋದಿ ಅವರು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಅದರ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದು ಇನ್ನೂ 1 ತಿಂಗಳು ಕಳೆದಿಲ್ಲ. ಆಗಲೆ ಬಿಜೆಪಿಗರು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕಡೆ ಧರ್ಮ ಇತ್ತು, ಅವರ ಕಡೆ ಅಧರ್ಮ ಇತ್ತು. ನಮ್ಮದು ಪ್ರಾಮಾಣಿಕ ಸೇವೆ, ಅವರದ್ದು 40% ಭ್ರಷ್ಟಾಚಾರ. ನಮ್ಮದು ಬಡವರ ಪರ ಸರ್ಕಾರ ಅವರದ್ದು, ಶ್ರೀಮಂತರ ಪರ ಒಲವು ತೋರುವ ಸರ್ಕಾರವಾಗಿತ್ತು ಎಂದರು.
ಈ ಎಲ್ಲಾ ಅಂಶಗಳನ್ನು ನಾವು ಮತದಾರರಿಗೆ ತಿಳಿಸಿದ್ದೆವು. ಜನರು ನಮಗೆ ಆಶೀರ್ವಾದ ಮಾಡಿದರು. ಈಗ ಕಾರ್ಯಕರ್ತರ ಮೇಲೆ ಹೆಚ್ಚು ಜವಬ್ದಾರಿ ಇದ್ದು, ಲೋಕಾಸಭೆ ಚುನಾವಣೆಯೊಳಗೆ ಎಲ್ಲಾ ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸಬೇಕು. ಹಾಗೆಯೇ ಕಾಂಗ್ರೆಸ್ ಸಾಧನೆ ಬಗ್ಗೆ ಹೇಳಬೇಕು ಎಂದರು. ಹಾಗೆಯೆ ಬಿಜೆಪಿ ನಾಯಕರು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರನ್ನು ಕೆರಳಿಸುತ್ತಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನಾವು ಪ್ರಾಮಾಣಿಕ ಸೇವೆ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.
ಎನ್.ಹೆಚ್.ಕೊನರೆಡ್ಡಿ ಹೇಳಿದ್ದೇನು?
ಹಾಗೆಯೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಅನುಷ್ಠಾನ ದೇಶದಲ್ಲಿಯೇ ಐತಿಹಾಸಿಕ ನಿರ್ಣಯ. ಐದು ಗ್ಯಾರಂಟಿಯನ್ನು ಒಟ್ಟಿಗೆ ಜಾರಿಗೆ ಮಾಡುವ ನಿರ್ಧಾರ ತೆಗೆದುಕೊಳ್ಳಲು ತಾಕತ್ ಬೇಕು ಎಂದು ನವಲಗುಂದ ವಿಧಾನಸಭಾ ಮತಕ್ಷೇತ್ರದ ಶಾಸಕ ಎನ್.ಹೆಚ್.ಕೊನರೆಡ್ಡಿ ಕಾಂಗ್ರೆಸ್ ಸರ್ಕಾರವನ್ನು ಕೊಂಡಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ಗ್ಯಾರಂಟಿಯನ್ನು ಒಟ್ಟಿಗೆ ಜಾರಿಗೆ ಮಾಡುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡಿದ್ದಾರೆ. ಜನ ಸಾಮಾನ್ಯರು ಯಾರು ಕೂಡಾ ಕಾಂಗ್ರೆಸ್ ನೀಡಿದ ಗ್ಯಾರಂಟಿ ಜಾರಿಗೆ ಕುರಿತಾಗಿ ಅನುಮಾನ ಪಡುವುದು ಬೇಡ ಎಂದು ತಿಳಿಸಿದರು.
ಈ ಮೊದಲೇ ನಮ್ಮ ಕೇಂದ್ರದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸುರ್ಜೇವಾಲಾ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 100ಕ್ಕೆ 100ರಷ್ಟು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಅದರಂತೆ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡು ಐದು ಗ್ಯಾರಂಟಿ ಒಟ್ಟಿಗೆ ಜಾರಿ ಮಾಡಲು ಮುಂದಾಗಿದ್ದಾರೆ ಎಂದರು.












Click it and Unblock the Notifications