ಗುಂಡ್ಲುಪೇಟೆ: ಕೊನೆಗೂ ಬಲೆಗೆ ಬಿತ್ತು ಪುಂಡಾನೆ, ನೆಮ್ಮದಿಯ ನಿಟ್ಟುಸಿರು ಬಿಟ್ಟ ರೈತಾಪಿ ವರ್ಗ
ಚಾಮರಾಜನಗರ, ಜೂನ್, 07: ಕಾಡಂಚಿನ ಗ್ರಾಮಗಳಲ್ಲಿ ಬೆಳೆನಾಶ ಮಾಡಿ ರೈತರ ನಿದ್ರೆಗೆಡಿಸಿದ್ದ ಪುಂಡಾನೆಯನ್ನು ಬಂಡೀಪುರ ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ.
ಗುಂಡ್ಲುಪೇಟೆ ತಾಲೂಕಿನ ಲೊಕ್ಕೆರೆ ಅರಣ್ಯ ಪ್ರದೇಶದಲ್ಲಿ ಬಿದಿರು ತಿನ್ನುತ್ತಿದ್ದ ವೇಳೆ ಪುಂಡಾನೆಯನ್ನು ಜಯಪ್ರಕಾಶ್, ಪಾರ್ಥ ಸಾರಥಿ, ಗಜೇಂದ್ರ, ಹರ್ಷ ಎಂಬ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಗಿದೆ. ಕುಂದಕೆರೆ ಅರಣ್ಯ ವಲಯದ ಜಮೀನುಗಳಲ್ಲಿ ನಿತ್ಯವೂ ಈ ಪುಂಡಾನೆ ಬೆಳೆ ನಾಶ ಮಾಡುತ್ತಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಬಳಿಕ ಎಚ್ಚೆತ್ತ ಬಂಡೀಪುರ ಅರಣ್ಯ ಇಲಾಖೆ ಸಿಬ್ಬಂದಿ 4 ದಿನಗಳಿಂದ ಪುಂಡಾನೆ ಸೆರೆ ಕಾರ್ಯಾಚರಣೆ ಕೈಗೊಂಡಿದ್ದರು. ಕೊನೆಗೂ ಈ ಕಾರ್ಯಾಚರಣೆ ಯಶಸ್ವಿಯಾಗಿದ್ದಾರೆ.
ಪುಂಡಾನೆಗಳ ಸೆರೆಗೆ ಕೈಗೊಂಡ ಕ್ರಮಗಳು
ಹಾಗೆಯೇ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷವನ್ನು ನಿಯಂತ್ರಿಸಲು ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ನಾಡಿಗೆ ಬಂದ ಪುಂಡಾನೆಗಳನ್ನು ತ್ವರಿಯವಾಗಿ ಕಾಡಿಗೆ ಕಳುಹಿಸಲು ಬನ್ನೇರುಘಟ್ಟ ಮತ್ತು ರಾಮನಗರದಲ್ಲಿ ಎರಡು ಕಡೆ ಆನೆ ಕಾರ್ಯಪಡೆಗಳನ್ನು ರಚಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗಷ್ಟೇ ತಿಳಿಸಿದ್ದರು.
ನ್ಯಾಮತಿ: 16 ವರ್ಷದ ಬಾಲಕಿಯನ್ನು ಕೊಂದಿದ್ದ ಪುಂಡಾನೆ ಕೊನೆಗೂ ಸೆರೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನ
ಇತ್ತೀಚೆಗೆ ಜಿಲ್ಲೆಯಲ್ಲಿ ಆನೆ ದಾಳಿಗೆ ಬಲಿಯಾದ ವೀರಭದ್ರಯ್ಯ ಮತ್ತು ಕಾಳಯ್ಯ ಅವರ ನಿವಾಸಕ್ಕೆ ತೆರಳಿ ಮೃತರ ಕುಟುಂಬಕ್ಕೆ ಈಶ್ವರ ಖಂಡ್ರೆ ಅವರು ಸಾಂತ್ವನ ಹೇಳಿದ್ದರು. ಹಾಗೆಯೆ ಇದೇ ವೇಳೆ ಪರಿಹಾರದ ಚೆಕ್ ವಿತರಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಂತರ ಆನೆ ಹಾವಳಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಅರಣ್ಯ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಸಾಮಾನ್ಯವಾಗಿ ಆನೆಗಳು ಹಲಸಿನ ಹಣ್ಣು, ಕಬ್ಬು, ಕಾಫಿ ಬೀಜ ತಿನ್ನುವ ಸಲುವಾಗಿ ನಾಡಿಗೆ ಬರುತ್ತವೆ. ಇದನ್ನು ತಡೆಯಲು ಸೌರ ತಂತಿ ಬೇಲಿ ಮತ್ತು ಹ್ಯಾಂಗಿಂಗ್ ಸೌರಬೇಲಿ ಸದ್ಯದ ಪರಿಹಾರವಾಗಿದ್ದು, ಇದನ್ನು ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶದಲ್ಲಿ ಅಳವಡಿಸಲಾಗುವುದು. ಕಾವೇರಿ ವನ್ಯಜೀವಿ ತಾಣದ ಬಳಿ 132 ಕಿ.ಮೀ. ಬ್ಯಾರಿಕೇಡ್ ಹಾಕುವ ಕಾರ್ಯ ನಡೆಯುತ್ತಿದ್ದು, ಈ ಪೈಕಿ 89 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಶೀಘ್ರವೇ ಮುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದರು.
ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ಪ್ರದೇಶಗಳಲ್ಲಿ ಆನೆಗಳ ಉಪಟಳ ಹೆಚ್ಚಿದ್ದು, ಇಲ್ಲಿ ಜೀವಹಾನಿ ಆಗದ ರೀತಿಯಲ್ಲಿ ಕ್ರಮವಹಿಸಲು ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಅಲ್ಲದೆ ರಾಜ್ಯಾದ್ಯಂತ 641 ಕಿಲೋ ಮೀಟರ್ ಬ್ಯಾರಿಕೇಡ್ ಹಾಗೂ ಸೌರಬೇಲಿ ಹಾಕುವ ಯೋಜನೆಯಿದ್ದು, ಈ ಪೈಕಿ 360 ಕಿಲೋ ಮೀಟರ್ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದ್ದರು.
ರಾಜ್ಯದಲ್ಲಿ 629 ಆನೆಗಳಿದ್ದರೂ ಸಾವಿನ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಆದರೂ ಮಾನವನ ಜೀವ ಅಮೂಲ್ಯವಾಗಿದ್ದು, ಜೀವಹಾನಿ ತಪ್ಪಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎನ್ನುವ ಮಾಹಿತಿಯನ್ನು ನೀಡಿದ್ದರು.
2019- 20ರ ಸಾಲಿನಲ್ಲಿ ವನ್ಯಮೃಗಗಳ ದಾಳಿಯಿಂದ ರಾಜ್ಯದಲ್ಲಿ 50 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2020-21ರ ಅವಧಿಯಲ್ಲಿ 41 ಸಾವುಗಳು ಸಂಭವಿಸಿದ್ದರೆ, 2021- 22ರ ಅವಧಿಯಲ್ಲಿ 29 ಮತ್ತು 2022-23ರ ಅವಧಿಯಲ್ಲಿ 51 ಸಾವು ಸಂಭವಿಸಿವೆ. ಈ ಪೈಕಿ 29 ಮಂದಿ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ಹಂಚಿಕೊಂಡಿದ್ದರು.
ಪ್ರಸ್ತುತ ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿ ಆನೆ ಕಾರ್ಯಪಡೆ ಕಾರ್ಯಾಚರಣೆ ಮಾಡುತ್ತಿದ್ದು, ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದರು. ಹಾಗೆಯೇ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರತಿ ಕಿ.ಮೀಟರ್‌ಗೆ ಒಂದೂವರೆ ಕೋಟಿ ರೂಪಾಯಿ ವೆಚ್ಚವಾಗಲಿದೆ. ಆದರೆ ಹ್ಯಾಂಗಿಂಗ್ ಸೌರ ಬೇಲಿ ಮತ್ತು ಸೋಲಾರ್ ಬೇಲಿಗೆ ತಲಾ 6 ಲಕ್ಷ ರೂಪಾಯಿ ವೆಚ್ಚ ಆಗಲಿದೆ ಎಂದು ಮಾಹಿತಿ ನೀಡಿದ್ದರು.
ಸೌರ ಬೇಲಿಗಳ ಬದಲು ದಪ್ಪ ಕಲ್ಲಿನ ತಡೆಗೋಡೆಗಳನ್ನು ನಿರ್ಮಿಸಿದರೆ ಆನೆಗಳ ಹಾವಳಿ ತಪ್ಪಿಸಬಹುದು ಎಂಬ ಸಂಸದ ಸುರೇಶ್ ಅವರ ಸಲಹೆಗೆ ಪ್ರತಿಕ್ರಿಸಿದ ಸಚಿವರು, ರೈಲ್ವೆ ಬ್ಯಾರಿಕೇಡ್ ಮತ್ತು ಕಲ್ಲಿನ ತಡೆಗೋಡೆಗಳ ತುಲನಾತ್ಮಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಬೆಳೆ ಹಾನಿಗೆ ಸಮಾನವಾದ ಪರಿಹಾರ ದೊರಕಬೇಕು. ಕೆಲವು ಪ್ರಾಣಿಗಳು ದಾಳಿಯಿಂದ ಆಗುವ ಬೆಳೆ ಹಾನಿಗೆ ಪರಿಹಾರ ಲಭಿಸುತ್ತಿಲ್ಲ. ಅದೇ ರೀತಿ ಕೆಲವು ಬೆಳೆಗಳ ಹಾನಿಗೂ ಪರಿಹಾರ ಸಿಗುತ್ತಿಲ್ಲ. ಇದರಿಂದ ರೈತರಿಗೆ ತೊಂದರೆ ಆಗುತ್ತಿದ್ದು, ಎಲ್ಲ ಬೆಳೆಗಳು ಮತ್ತು ಎಲ್ಲಾ ಕಾಡುಪ್ರಾಣಿಗಳ ಹಾನಿಗೆ ಪರಿಹಾರ ನೀಡುವ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂದಿದ್ದರು.
ಇನ್ನು ಚಿರತೆಗಳ ಹಾವಳಿಯು ರಾಜ್ಯದ ಅನೇಕ ಕಡೆ ಅದರಲ್ಲೂ ರಾಮನಗರದಲ್ಲಿ ಹೆಚ್ಚಾಗಿದೆ. ಆದ್ದರಿಂದ ಚಿರತೆಗಳನ್ನು ಹಿಡಿದು ಅವುಗಳನ್ನು ಮರಳಿ ಕಾಡಿಗೆ ಕಳುಹಿಸಲು ಕ್ರಮ ವಹಿಸುವಂತೆ ಸೂಚಿಸಿದರು. ಮಾನವನ ರಕ್ತದ ರುಚಿ ಕಂಡ ಚಿರತೆ ಮತ್ತು ಹುಲಿಗಳು ಪದೇ ಪದೇ ದಾಳಿ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಪುನರ್ವಸತಿ ಕೇಂದ್ರಗಳಲ್ಲಿ ಪೋಷಿಸುವ ಅಗತ್ಯವಿದ್ದು, ಈ ಕಾರ್ಯವನ್ನು ಇಲಾಖೆ ನಿರ್ವಹಿಸುತ್ತಿದೆ ಎಂದಿದ್ದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು ಸೇರಿದಂತೆ ರಾಜ್ಯದ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications