ಬಂಡಿಪುರ ಕಾಡಂಚಿನ ಜನರ ನೆಮ್ಮದಿ ಕಸಿದ ಕಾಡುಪ್ರಾಣಿಗಳು

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ನವೆಂಬರ್ 13: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳಲ್ಲಿ ಕೃಷಿಯನ್ನೇ ನಂಬಿ ಬದುಕುತ್ತಿರುವ ಜನರಿಗೆ ಇದೀಗ ಚಿರತೆ, ಹುಲಿ ಸೇರಿದಂತೆ ವನ್ಯ ಪ್ರಾಣಿಗಳ ಭಯ ಆರಂಭವಾಗಿದೆ.

ಮೃಗಾಲಯದಲ್ಲಿ ಆತಂಕ ತಂದ ಹೆಜ್ಜೆಗುರುತು, ಹೊರಗಿಂದ ಮತ್ತೆ ಬಂತೆ ಚಿರತೆ!

ಈ ಬಾರಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿದ್ದರಿಂದ ಕಳೆದ ಕೆಲವು ವರ್ಷಗಳಿಂದ ಪಾಳು ಬಿದ್ದಿದ್ದ ಜಮೀನಿನಲ್ಲಿ ಬೆಳೆ ಬೆಳೆದು ಆರ್ಥಿಕವಾಗಿ ಸದೃಢತೆ ಕಂಡುಕೊಳ್ಳುವ ಕನಸು ಅವರದಾಗಿತ್ತು. ಆದರೆ ಕಾಡುಪ್ರಾಣಿಗಳ ಭಯದಿಂದ ಆ ಕನಸು ನನಸಾಗುವ ಭರವಸೆ ಇಲ್ಲದಂತಾಗಿದೆ.

Wild animals in Bandipur area Chamarajanagar district become a major problem in the region

ಕಾಡಾನೆಗಳು, ಕಾಡುಹಂದಿಗಳು ಜಮೀನಿಗೆ ನುಗ್ಗಿ ಫಸಲು ನಾಶ ಮಾಡಿದರೆ, ಚಿರತೆ ಕೊಟ್ಟಿಗೆಗೆ ನುಗ್ಗಿ ಜಾನುವಾರು, ನಾಯಿ ಸೇರಿದಂತೆ ಸಾಕುಪ್ರಾಣಿಗಳನ್ನು ಬಲಿ ಪಡೆಯುತ್ತಿದೆ. ಇದರ ಜತೆಗೆ ಹುಲಿಯೂ ಅಡ್ಡಾಡುತ್ತಿರುವ ಬಗ್ಗೆ ಹೆಜ್ಜೆ ಗುರುತು ಕಂಡು ಬಂದಿದ್ದು ಇದರಿಂದ ಹೆದರಿದ ಜನ ರಾತ್ರಿ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಬಂಡೀಪುರ ಹುಲಿಯೋಜನೆಯ ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಲ್ಲಿ ಫಸಲನ್ನು ಕಾಯಲು ರೈತರು ಜಮೀನಿನಲ್ಲೇ ವಾಸ್ತವ್ಯ ಹೂಡಿದ್ದು ಈ ವೇಳೆ ಹುಲಿಯನ್ನು ನೋಡಿದ್ದಾರೆ. ಹೆಗ್ಗವಾಡಿ, ಗುಡಿಮನೆ ಹಾಗೂ ಚಿರಕನಹಳ್ಳಿ ಗ್ರಾಮಗಳ ಬಳಿ ಭಾರೀ ಗಾತ್ರದ ಹುಲಿಯು ಅಡ್ಡಾಡುತ್ತಿರುವುದು ಭಯಕ್ಕೆ ಕಾರಣವಾಗಿದೆ.

ಈ ವ್ಯಾಪ್ತಿಯ ಕೆರೆಯ ಸಮೀಪ ದೊಡ್ಡ ಗಾತ್ರದ ಹುಲಿಯ ಹೆಜ್ಜೆಯ ಗುರುತುಗಳು ಕಂಡು ಬಂದಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮತ್ತೆ ಹುಲಿ ಕಂಡುಬಂದರೆ ಸೆರೆಹಿಡಿಯುವ ಭರವಸೆ ನೀಡಿದ್ದಾರೆ. ಆದರೆ ಜನ ಮಾತ್ರ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಕಾರಣ ಈ ಹುಲಿ ಯಾವಾಗ ಎಲ್ಲಿಂದ ಹೇಗೆ ಬರುತ್ತದೆ ಎಂಬುದನ್ನು ಹೇಳುವುದೇ ಕಷ್ಟವಾಗಿದೆ.

ಮತ್ತೊಂದೆಡೆ ಓಂಕಾರ್ ವಲಯದ ಅರಣ್ಯದ ಕಾಡಂಚಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಇಲ್ಲಿನ ರಾಘವಾಪುರ ಗ್ರಾಮದ ಜಮೀನುಗಳ ಸುತ್ತಲೂ ಈ ಚಿರತೆ ಸಂಚರಿಸುತ್ತಿದ್ದು, ಸಾಕುನಾಯಿಗಳನ್ನು ಬೇಟೆಯಾಡಿ ತಿನ್ನುತ್ತಿದೆ. ಯಾವಾಗ ದನದ ಕೊಟ್ಟಿಗೆಗೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯವೂ ರೈತರದ್ದಾಗಿದೆ. ಒಟ್ಟಾರೆ ಕಾಡುಪ್ರಾಣಿಗಳು ಇಲ್ಲಿನ ಗ್ರಾಮಗಳ ಜನರನ್ನು ಆತಂಕಕ್ಕೆ ತಳ್ಳಿದ್ದಂತೂ ನಿಜ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wild animals in Bandipur area Chamarajanagar district become a major problem in the region. The wild animals are continuously destroying crops of the farmers in the area.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ