Get Updates
Get notified of breaking news, exclusive insights, and must-see stories!

Male Mahadeshwara Hills: ಮಲೆಮಹದೇಶ್ವರ ಬೆಟ್ಟದ ಪಾಲಾರ್ ಹಾಡಿಯಲ್ಲಿ ವಿದ್ಯುದ್ದೀಪ ಬೆಳಗುವುದು ಯಾವಾಗ..?

ಚಾಮರಾಜನಗರ, ಮಾರ್ಚ್ 31: ತಲೆಮಾರುಗಳಿಂದ ಅರಣ್ಯದಂಚಿನಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ಕಾಡನ್ನೇ ಆಶ್ರಯಿಸಿ ಜೀವನ ನಡೆಸಿಕೊಂಡು ಬಂದಿರುವ ಅರಣ್ಯವಾಸಿಗಳ ಬದುಕು ಇವತ್ತಿಗೂ ಹಸನಾಗಿಲ್ಲ. 5ಜಿ ಯುಗದಲ್ಲಿ ಇನ್ನು ಕೂಡ ಯಾವುದೇ ಸೌಲಭ್ಯಗಳಿಲ್ಲದೆ ಆದಿ ಮಾನವರಂತೆ ಬದುಕುತ್ತಿರುವವರು ನಮ್ಮ ನಿಮ್ಮ ನಡುವೆ ಇದ್ದಾರೆ. ಜೊತೆಗೆ ಅವರೆಲ್ಲರೂ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದಿದ್ದರೂ ವಿದ್ಯುತ್ ಮುಖ ನೋಡದೆ ಕತ್ತಲಲ್ಲೇ ಕಾಲ ಕಳೆಯುತ್ತಿದ್ದಾರೆ ಎನ್ನುವುದು ಬೇಸರ ತರಿಸುತ್ತದೆ.

ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿರುವ ಈ ಸಂದರ್ಭದಲ್ಲಿ ವಿದ್ಯುತ್ ನ್ನು ನೋಡದೆ ಕತ್ತಲಲ್ಲೇ ಜೀವನ ಮಾಡುತ್ತಿರುವವರು ಬಹಳಷ್ಟು ಮಂದಿಯಿದ್ದಾರೆ. ಅವರೆಲ್ಲರೂ ಬಡವರಾಗಿದ್ದಾರೆ. ಹೋರಾಡಿ ಪಡೆಯುವ ಶಕ್ತಿಯಿಲ್ಲದವರಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಕಾಡಿನ ನಡುವಿನ ಬದುಕಿನಲ್ಲಿಯೇ ಅವರು ಕಳೆದು ಹೋಗಿದ್ದಾರೆ. ಅಂಥವರನ್ನು ಗುರುತಿಸಿ ಅವರಿಗೊಂದು ಒಳ್ಳೆಯ ಬದುಕನ್ನು ಕಟ್ಟಿಕೊಡದೆ ಹೋದ ಮೇಲೆ ಸರ್ಕಾರಗಳು ಅಭಿವೃದ್ಧಿ ಬಗ್ಗೆ ಎಷ್ಟೇ ಮಾತನಾಡಿದರೂ ಅದೆಲ್ಲವೂ ನಗಣ್ಯವೇ.

When Will The Electric Light Be Lit In Palar Areas Of Mahadeshwara Hills

ಇವತ್ತು ಸಸ್ಯಸಂಪತ್ತಿನಿಂದ ಕಂಗೊಳಿಸುವ ಚಾಮರಾಜನಗರ ಜಿಲ್ಲೆಯ ಬೆಟ್ಟಗುಡ್ಡಗಳ ನಡುವೆ, ಅರಣ್ಯದಂಚಿನಲ್ಲಿ ಆದಿವಾಸಿಗಳು ಬದುಕು ಕಟ್ಟಿಕೊಂಡಿದ್ದಾರೆ. ಅರಣ್ಯದ ನಡುವಿನ ಬದುಕಿಗೆ ಹೊಂದಿಕೊಂಡಿರುವುದರಿಂದ ಅವರು ಅರಣ್ಯ ಬಿಟ್ಟು ಬರುವ ಪರಿಸ್ಥಿತಿಯಲ್ಲಿಲ್ಲ. ಜತೆಗೆ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವುದರಿಂದ ಅರಣ್ಯ ಕಾಯ್ದೆಗಳ ಪ್ರಕಾರ ಅಲ್ಲಿಗೆ ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಅವಕಾಶವಿಲ್ಲ. ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಿ ಅವರ ಬದುಕನ್ನು ಹಸನು ಮಾಡುವುದಕ್ಕೆ ಯಾರೂ ಮುಂದಾಗದ ಕಾರಣದಿಂದಾಗಿ ಅವರೆಲ್ಲರೂ ನಮ್ಮೊಡನೆ ಇದ್ದರೂ ನಮ್ಮಂತೆ ಇರಲಾಗದೆ ಆದಿ ಮಾನವರಂತೆ ಜೀವಿಸುವಂತಾಗಿದೆ.

ಮಲೆಮಹದೇಶ್ವರ ಬೆಟ್ಟದಂಚಿನ ಪಾಲಾರ್ ಗ್ರಾಮ

ತಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುವಂತೆ ಬೇಡಿಕೊಂಡು ಲಕ್ಷಾಂತರ ಜನರು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಬರುತ್ತಾರೆ. ಅವರೆಲ್ಲರೂ ಮಲೆಮಹದೇಶ್ವರನ ದರ್ಶನ ಮಾಡಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿದಕ್ಕಾಗಿ ಕಾಣಿಕೆಗಳನ್ನು ಅರ್ಪಿಸಿ ಹೋಗುತ್ತಾರೆ. ಪ್ರತಿ ತಿಂಗಳೂ ಕೋಟ್ಯಂತರ ರೂ ಕಾಣಿಕೆ ದೇಗುಲದಲ್ಲಿ ಸಂಗ್ರಹವಾಗುತ್ತದೆ. ಆದರೆ ಇದೆಲ್ಲದರ ನಡುವೆ ದೀಪದ ಬುಡವೇ ಕತ್ತಲು ಎಂಬಂತೆ ಮಲೆಮಹದೇಶ್ವರ ಬೆಟ್ಟದಂಚಿನಲ್ಲಿ ತಲತಲಾಂತರಗಳಿಂದ ಜೀವನ ಮಾಡಿಕೊಂಡು ಬಂದಿರುವ ಪಾಲಾರ್ ನಿವಾಸಿಗಳನ್ನು ಮಹದೇಶ್ವರನೂ ಕಾಪಾಡಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಲೆಮಹದೇಶ್ವರ ಬೆಟ್ಟದ ಪಾಲಾರ್ನ ಆದಿವಾಸಿ ಬಡಾವಣೆಯ ನಿವಾಸಿಗಳು ಪರಿಸ್ಥಿತಿ ಹೇಗೆ ಆಗಿದೆ ಎಂದರೆ? ಇಲ್ಲಿಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ನೀರಿಗಾಗಿ ಕಿ.ಮೀ.ಗಟ್ಟಲೆ ಅಲೆಯ ಬೇಕಾಗಿದೆ. ಇಡೀ ಊರು ಕತ್ತಲೆಯಲ್ಲಿಯೇ ಮುಳುಗುತ್ತಿದೆ. ಸುಮಾರು ಎಂಬತ್ತು ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿಗೆ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ನೂರಾರು ಕಿ.ಮೀ. ದೂರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿಲ್ಲ. ಕೇವಲ 50 ಮೀಟರ್ ಅಷ್ಟೇ ದೂರವಿರುವುದು.

ವಿದ್ಯುತ್‌ಗೆ ಅರಣ್ಯ ಇಲಾಖೆ ತಡೆ

ಈ ವಿಚಾರ ಕೇಳಿದರೆ ಅಚ್ಚರಿಯಾಗಬಹುದು ಏಕೆಂದರೆ ಕೇವಲ 50 ಮೀಟರ್ ದೂರದಿಂದ ವಿದ್ಯುತ್ ಸಂಪರ್ಕ ಪಡೆಯಲು ಸ್ವಾತಂತ್ರ್ಯ ಬಂದು 77 ವರ್ಷವಾದರೂ ಸಾಧ್ಯವಾಗಿಲ್ವಾ? ಹಾಗಾದರೆ ಸಮಸ್ಯೆ ಆಗಿರುವುದೇನು? ಎಂಬುದನ್ನು ನೋಡುತ್ತಾ ಹೋದರೆ ಇಲ್ಲಿ ತಕರಾರು ಮಾಡುತ್ತಿರುವುದು ಅರಣ್ಯ ಇಲಾಖೆಯಾಗಿದೆ. ಅರಣ್ಯ ವ್ಯಾಪ್ತಿಗೆ ಒಳಪಡುವುದರಿಂದ ವಿದ್ಯುತ್ ಸಂಪರ್ಕಕ್ಕೆ ಅವಕಾಶ ನೀಡುತ್ತಿಲ್ಲ. ಸಂಬಂಧಿಸಿದವರು ಇದಕ್ಕೊಂದು ಪರಿಹಾರ ಹುಡುಕಬಹುದಿತ್ತು. ಆದರೆ ಅದನ್ನು ಯಾರು ಮಾಡದ ಕಾರಣದಿಂದ ಸಮಸ್ಯೆ ಉಲ್ಭಣಿಸಿದೆ.

When Will The Electric Light Be Lit In Palar Areas Of Mahadeshwara Hills

ಪಾಲಾರ್ನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರವಿದೆ. 50ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ. ಮನೆಗಳಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳಿಗೆ ಓದಿಕೊಳ್ಳಲು ತೊಂದರೆಯಾಗುತ್ತಿದೆ. ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಇತ್ತೀಚೆಗೆ ನಿವಾಸಿಗಳು ಸೆಸ್ಕ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಿದ ಪರಿಣಾಮ ಸೆಸ್ಕ್ ಇಲಾಖೆಯ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ.

ಪಾಲಾರ್ ಹಾಡಿಗೆ ಬೆಳಕು ವಿದ್ಯುತ್ ಬರುತ್ತಾ?

ಇದರಿಂದ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಭಯದಿಂದ ಜೀವನ ನಡೆಸುವಂತಹ ಪರಿಸ್ಥಿತಿ ಜನರದ್ದಾಗಿದೆ. ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ, ನಮಗೆ ವಿದ್ಯುತ್ ವ್ಯವಸ್ಥೆ ಏಕೆ ಮಾಡಿಕೊಡುತ್ತಿಲ್ಲ ಎನ್ನುವುದು ಇಲ್ಲಿನವರ ಅಳಲಾಗಿದೆ. ಇನ್ನು ಗೋಪಿನಾಥಂನಲ್ಲಿರುವ ಖಾಸಗಿ ರೆಸಾರ್ಟ್ಗೆ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಲಾಗಿದೆ. ಆದರೆ, ನಮಗೆ ಅನುಮತಿ ನೀಡುತ್ತಿಲ್ಲ ಎಂಬುದು ಅರಣ್ಯವಾಸಿ ಸೇವಾ ಟ್ರಸ್ಟ್ನ ಕಾರ್ಯಾಧ್ಯಕ್ಷ ನಾಗೇಂದ್ರ ಅವರ ಪ್ರಶ್ನೆಯಾಗಿದೆ.

ಸದ್ಯಕ್ಕೆ ನಾವು ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದೇವೆ. ನಮಗೆ ಸರ್ಕಾರ ಮೂಲ ಸೌಲಭ್ಯಗಳನ್ನು ನೀಡದ ಮೇಲೆ ನಾವು ಏಕೆ ಚುನಾವಣೆಯಲ್ಲಿ ಭಾಗವಹಿಸಬೇಕು ಎಂಬುದು ಹಾಡಿ ನಿವಾಸಿಗಳ ಪ್ರಶ್ನೆಯಾಗಿದೆ. ಅಲ್ಲದೆ ವಿದ್ಯುತ್ ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುವುದಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಲಾರ್ ಹಾಡಿಗಳ ನಿವಾಸಿಗಳು ಮಾಡಿದ್ದಾರೆ. ಸಂಬಂಧಿಸಿದವರು ಈ ವಿಚಾರದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+