ಸಿ.ಟಿ.ರವಿಯವರೇ ಸುಮ್ನೆ ಪುಂಗ್ಬೇಡಿ, 5 ವರ್ಷ ಸಿದ್ದರಾಮಯ್ಯನವರೇ ಸಿಎಂ-ಶಾಸಕ
ಚಾಮರಾಜನಗರ, ಸೆಪ್ಟೆಂಬರ್, 09: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಕೇಳಿಬಂದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇದ್ದಾರೆ. ಇದರ ಬೆನ್ನಲ್ಲೆ ಸಿಎಂ ಬದಲಾವಣೆಯ ಚರ್ಚೆಗಳು ಆಗುತ್ತಿದ್ದು, ಈ ಬಗ್ಗೆ ಮಾತನಾಡಿದ ಸಿಟಿ ರವಿ ಅವರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರದಲ್ಲಿ ತಿರುಗೇಟು ನೀಡಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಹುಟ್ಟಿದ ಕಾಲದಿಂದಲೂ ಸಿಎಂ ಬದಲು ಅಂಥಾನೇ ಹೇಳಿಕೊಂಡು ಬರುತ್ತಿದ್ದಾರೆ. ಅವರು ಈ ಬಗ್ಗೆ ಎಷ್ಟು ಬಾರಿ ಹೇಳಿಲ್ಲ ಎಂದು ಏಕವಚನದಲ್ಲಿ ಎಂಎಲ್‌ಸಿ ಸಿ.ಟಿ.ರವಿ ವಿರುದ್ಧ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುಡುಗಿದರು.

ಸಿಎಂ ಬದಲಾವಣೆ ಅದು ರವಿಯ ಕನಸಿನ ಮಾತು. ಅದೆಲ್ಲ ಸಾಧ್ಯವೇ ಇಲ್ಲ. ಅವನ ಕೈಯಲ್ಲಿ ತಾನೇ ಗೆಲ್ಲಲು ಆಗಿಲ್ಲ, ಎಂಎಲ್‌ಸಿ ಆಗ್ಬಿಟ್ಟು ಇಷ್ಟೆಲ್ಲಾ ಬುರುಡೆ ಬಿಡುತ್ತಾನೆ ಎಂದು ಆಕ್ರೊಶ ಹೊರಹಾಕಿದರು.
ಕಾಂಗ್ರೆಸ್ ಪಕ್ಷವನ್ನು ಏನು ಮಾಡಲು ಆಗುವುದಿಲ್ಲ. ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ನಮ್ಮಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ, ಸಿಎಂ ಖುರ್ಚಿ ಖಾಲಿ ಇಲ್ಲ, ಸಿಎಂ ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ ಎಂದರು.
ಸಭೆಗಳಿಗೆ ಸತತ ಗೈರಾದಕ್ಕೆ ಬಿಎಸ್ಪಿ ಸದಸ್ಯ ಅನರ್ಹ: ಚಾಮರಾಜನಗರ ನಗರಸಭೆಯ 9 ಸಭೆಗಳಿಗೆ ಗೈರಾದಿದ್ದಕ್ಕೆ ಬಿಎಸ್ಪಿಯಿಂದ ಆಯ್ಕೆಯಾಗಿದ್ದ ಪ್ರಕಾಶ್ ಅವರನ್ನು ಅನರ್ಹ ಮಾಡಿ ಡಿಸಿ ಶಿಲ್ಪಾನಾಗ್ ಕಳೆದ ಶುಕ್ರವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಸದಸ್ಯ ಅನರ್ಹ ವಿಚಾರಕ್ಕೆ ಬಿಜೆಪಿ ಮುಖಂಡರು ಕಿಡಿಕಾರಿದ್ದು, ನಗರಸಭೆ ಅಧ್ಯಕ್ಷ ಚುನಾವಣೆ ಪೂರ್ವದಲ್ಲಿ ಡಿಸಿ ಅವರು ಅನರ್ಹ ಮಾಡುವ ಮೂಲಕ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆ. ಶನಿವಾರ, ಭಾನುವಾರ ಕೋರ್ಟ್‌ಗಳಿಗೆ ರಜೆಯಿರುವ ಕಾರಣ ಬೇಕಂತಲೇ ಈ ಅನರ್ಹ ಆದೇಶ ಹೊರಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕಮಾರ್ ಕಿಡಿಕಾರಿದರು.
ಅನಾರೋಗ್ಯದಿಂದ ಸಭೆಗೆ ಹಾಜರಾಗಿರಲಿಲ್ಲ: ಬಿಜೆಪಿಯನ್ನು ಬೆಂಬಲಿಸಿದೆ ಎನ್ನುವ ಒಂದೇ ಕಾರಣಕ್ಕೆ ನನ್ನನ್ನ ಅನರ್ಹ ಮಾಡಲಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಬೇಕಂತಲೇ ಜಿಲ್ಲಾಧಿಕಾರಿ ಶಿಲ್ಪಾನಾಗ್ ನನ್ನನ್ನು ಅನರ್ಹಗೊಳಿಸಿದ್ದಾರೆ ಎಂದು ನಗರಸಭೆ ಅನರ್ಹ ಸದಸ್ಯ ಪ್ರಕಾಶ್ ಗಂಭೀರ ಆರೋಪ ಮಾಡಿದರು.
ಜಿಲ್ಲಾಧಿಕಾರಿ ನೋಟಿಸ್ ನೀಡಿಲ್ಲ, ಅದು ಅಲ್ಲದೆ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಈ ಎಲ್ಲಾ ವಿಚಾರವನ್ನು ಡಿಸಿ ತಿಳಿದಿದ್ದರು. ಆದರೂ, ಬೇಕಂತಲೇ ನನ್ನನ್ನು ಅನರ್ಹ ಮಾಡಿದ್ದಾರೆ. ನಾನು ಈಗ ನ್ಯಾಯಾಲಯ ಮೆಟ್ಟಿಲೇರಿದ್ದೇನೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಚಾಮರಾಜನಗರದ 27ನೇ ವಾರ್ಡ್‌ನ ಸದಸ್ಯರಾಗಿರುವ ಪ್ರಕಾಶ್ ನಗರಸಭೆಯ 9 ಸಭೆಗಳಿಗೂ ಗೈರಾಗಿದ್ದರು. ಈ ಹಿನ್ನೆಲೆ ಅವರನ್ನು ಅನರ್ಹ ಮಾಡಿ ಡಿಸಿ ಕಳೆದ ಶುಕ್ರವಾರ ಆದೇಶಿಸಿದ್ದರು.












Click it and Unblock the Notifications