ಬಂಡೀಪುರದ ಬಳಿ ಪಶ್ಚಿಮ ಬಂಗಾಳ ಪ್ರವಾಸಿಗರ ಬಸ್ ಪಲ್ಟಿ, 25 ಮಂದಿಗೆ ಗಾಯ
ಚಾಮರಾಜನಗರ, ಅಕ್ಟೋಬರ್, 25: ಪಶ್ಚಿಮ ಬಂಗಾಳದ ಪ್ರವಾಸಿಗರಿದ್ದ ಬಸ್ ಪಲ್ಟಿಯಾಗಿ 25 ಮಂದಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ಮೇಲುಕಾಮನಹಳ್ಳಿ ಇಳಿಜಾರಿನಲ್ಲಿ ನಡೆದಿದೆ.
ತಮಿಳುನಾಡಿನ ತೀರ್ಥಕ್ಷೇತ್ರ ನೋಡಿಕೊಂಡು ಬಂಡೀಪುರ ಮಾರ್ಗವಾಗಿ ಕರ್ನಾಟಕಕ್ಕೆ ಬರುತ್ತಿದ್ದ ವೇಳೆ ಇಳಿಜಾರಿನ ರಸ್ತೆಯಲ್ಲಿ ಬ್ರೇಕ್ ಪೇಲ್ಯೂರ್ ಆಗಿ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಡುಗೆ ಸಿಬ್ಬಂದಿ ಸೇರಿದಂತೆ 65 ಮಂದಿ ಈ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಪೈಕಿ ಅಪಘಾತದಲ್ಲಿ 25 ಮಂದಿ ಗಾಯಗೊಂಡಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿದ್ದ ಬಹುಪಾಲು ಮಂದಿ ಹಾಗೂ ಗಾಯಗೊಂಡ ಅನೇಕರು ಹಿರಿಯ ನಾಗರಿಕರಾಗಿದ್ದಾರೆ. ಗಾಯಗೊಂಡ ಎಲ್ಲರನ್ನೂ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಈ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ
ಇತ್ತೀಚೆಗಷ್ಟೇ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಟಿಟಿ ವಾಹನ ರಸ್ತೆ ಮಧ್ಯೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗೂಲ್ ಬಳಿ ನಡೆದಿತ್ತು.
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನದ ಬಳಿಕ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆಂದು ಬರುವಾಗ ಈ ದುರ್ಘಟನೆ ಸಂಭವಿಸಿತ್ತು. ಟಿಟಿ ವಾಹನದಲ್ಲಿ ಸುಮಾರು 15 ಜನ ಪ್ರಯಾಣಿಕರಿದ್ದು ಕೆಲವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿ ವಾಹನ ಮೂಲತಃ ಕಾರವಾರ ಜಿಲ್ಲೆಯ ಶಿರಸಿ ಮೂಲದ್ದಾಗಿದೆ ಎಂದು ತಿಳಿದುಬಂದಿತ್ತು.
ರಸ್ತೆ ಮಧ್ಯೆ ಪಲ್ಟಿಯಾದ ಟಿಟಿ ವಾಹನ ಸುಮಾರು 50 ಅಡಿಯಷ್ಟು ದೂರ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿತ್ತು. ವಾಹನ ಚಾಲಕ ಅತಿಯಾದ ವೇಗವಾಗಿ ಇದ್ದ ಕಾರಣದಿಂದಲೇ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಂತಹ ದುರ್ಘಟನೆ ಸಂಭವಿಸಿಲ್ಲ. ವಾಹನ ಪಟ್ಟಿಯಾದ ಕೂಡಲೇ ಸ್ಥಳೀಯರು ಗಾಡಿಯಲ್ಲಿದ್ದವರನ್ನು ಹೊರ ತಂದು ಯೋಗಕ್ಷೇಮ ವಿಚಾರಿಸಿದ್ದರು. ಕೆಲವರನ್ನು ಕೂಡಲೇ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಕರಣ ದಾಖಲಿಸಿಕೊಂಡಿದ್ದರು.












Click it and Unblock the Notifications