ವಯನಾಡಿನಲ್ಲಿ ಭೂ ಕುಸಿತ ದುರಂತದಲ್ಲಿ ಸಿಲುಕಿದವರಿಗೆ ರಾಜ್ಯದ ವೈದ್ಯರಿಂದ ತುರ್ತು ಸೇವೆ
ಚಾಮರಾಜನಗರ, ಆಗಸ್ಟ್, 01: ಈಗಾಗಲೇ ಕೇರಣದ ವಯನಾಡಿನಲ್ಲಿ ಭೂಕುಸಿತದಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಇನ್ನು ಇದೀಗ ಕೇರಳದ ವಯನಾಡು ಭೂ ಕುಸಿತ ದುರಂತದಲ್ಲಿ ಸಿಲುಕಿದ್ದವರಿಗೆ ರಾಜ್ಯದಿಂದ ಆರೋಗ್ಯ ನೆರವು ಸಿಕ್ಕಿದ್ದು, ಚಾಮರಾಜನಗರ ಮತ್ತು ಮೈಸೂರು ವೈದ್ಯರು ಕೇರಳದಲ್ಲಿ ತುರ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.
ಕೇರಳ ವಯನಾಡು ಗುಡ್ಡ ಕುಸಿತ ಸಂಬಂಧ ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದಿಂದ 13 ಮಂದಿ ವೈದ್ಯರ ತಂಡವನ್ನು ನಿಯೋಜನೆ ಮಾಡಲಾಗಿದ್ದು, ಬುಧವಾರದಿಂದಲೇ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.

ಗುಂಡ್ಲುಪೇಟೆ ಟಿಎಚ್‍ಓ ಡಾ.ಅಲೀಂ ಪಾಷಾ ನೇತೃತ್ವದಲ್ಲಿ ಚಾಮರಾಜನಗರದಿಂದ ಡಾ.ಮಹೇಶ್, ಡಾ.ತ್ರಿವೇಣಿ, ಡಾ.ಶ್ರೀಧರ್, ಡಾ.ಟೀನಾ, ಡಾ.ರಾಜು, ಡಾ.ಸಂದೀಪ್, ಮಹದೇವಸ್ವಾಮಿ, ಬಸವೇಗೌಡ ಹಾಗೂ ಮೈಸೂರು ಜಿಲ್ಲೆಯಿಂದ ಡಾ.ನಾಗೇಶ್ವರರಾವ್, ಡಾ.ಶ್ರೀನಿವಾಸ್, ಡಾ.ಶೇಷಾದ್ರಿ, ಉಮೇಶ್ ಬಾಬು ಸೇರಿದಂತೆ ಒಟ್ಟು 13 ಮಂದಿಯನ್ನು ಮೈಸೂರು ವಿಭಾಗೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ನಿದೇರ್ಶಕರು ತುರ್ತು ಸೇವೆಗೆ ನಿಯೋಜನೆ ಮಾಡಿದ್ದಾರೆ.
ಗುಂಡ್ಲುಪೇಟೆ ಟಿಎಚ್‍ಓ ಡಾ.ಅಲೀಂ ಪಾಷಾ ನೇತೃತ್ವದ ತಂಡ ಕಲ್ಪೆಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದೆ.ವಯನಾಡಿನ ಮೆಪ್ಪಾಡಿಯ ಡಾ.ಮೂಪಾನ್ಸ್ ಮೆಡಿಕಲ್ ಕಾಲೇಜಿಗೆ ಇತರೆ ವೈದ್ಯರು ಗುರುವಾರ ಬೆಳಗ್ಗೆ ಭೇಟಿ ನೀಡಿ, ಅಲ್ಲಿಯ ವೈದ್ಯರ ತಂಡದ ಜೊತೆಗೆ ಸಮಾಲೋಚನೆ ನಡೆಸುವ ಜೊತೆಗೆ ಆಸ್ಪತ್ರೆಯ ವಿವಿಧ ವಾರ್ಡ್‍ಗಳಲ್ಲಿ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಿದ್ದಾರೆ. ಜೊತೆಗೆ ಕಾಳಜಿ ಕೇಂದ್ರಗಳಿಗೂ ತೆರಳಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.
ಕೇರಳ ರಾಜ್ಯದ ಮೇಪಾಡಿ ಗ್ರಾಮದಲ್ಲಿರುವ ಸೇಂಟ್ ಜೋಸೆಫ್ ಹೈಸ್ಕೂಲಿನಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಇರುವ ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿಗೆ ಸಂಬಂದಪಟ್ಟ 10 ಮಂದಿಯನ್ನು ಟೆಂಪೋ ಟ್ರಾವೆಲ್ ವಾಹನದ ಮೂಲಕ ಕರೆದುಕೊಂಡು ಬರಲಾಗಿದೆ. ಬಳಿಕ ಗುಂಡ್ಲುಪೇಟೆ ತಾಲ್ಲೂಕಿನ ಕೋಡಹಳ್ಳಿ ಗ್ರಾಮ ಮತ್ತು ಚಾಮರಾಜನಗರ ತಾಲ್ಲೂಕು ಕೇಂದ್ರಕ್ಕೆ ನಿರಾಶ್ರಿತರನ್ನು ಬಿಡಲು ವ್ಯವಸ್ಥೆ ಮಾಡಲಾಗಿದೆ.
ಶವಗಳಿಗೆ ಕೊನೇ ನಮನ ಸಲ್ಲಿಸಿದ ಸ್ಥಳೀಯರು: ಕೇರಳ ಭೂ ಕುಸಿತದಲ್ಲಿ ಮೃತಪಟ್ಟವರಿಗೆ ಮೇಪ್ಪಾಡಿಯಲ್ಲಿ ಸ್ಥಳೀಯರು ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.
ಭೂ ಕುಸಿತದಿಂದ ಹತ್ತಾರು ಕಿಲೋ ಮೀಟರ್ ದೂರದ ಚಾಲಿಯಾರ್ ನದಿಯಲ್ಲಿ ಸಿಲುಕಿದ್ದ ಶವಗಳನ್ನು ಹೊತ್ತುಬಂದ ಸಾಲು ಸಾಲು ಆ್ಯಂಬುಲೆನ್ಸ್‌ಗಳಿಗೆ ಸ್ಥಳೀಯರು ಸಾಲಾಗಿ ನಿಂತು ಪುಷ್ಪ ನಮನ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ.
ಯಾರೂ ಊಹಿಸದಂತೆ ಜರುಗಿದ ದುರಂತದಲ್ಲಿ ಮಡಿದವರಿಗೆ ಮೇಪ್ಪಾಡಿ ವೃತ್ತದಲ್ಲಿ ಹೂವು ಹಿಡಿದು ನಿಂತ ಹತ್ತಾರು ಮಂದಿ ಆ್ಯಂಬುಲೆನ್ಸ್‌ಗಳು ತೆರಳುವಾಗ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸುವ ಕರುಳು ಹಿಡಿದಂತಾಯಿತು. ಕೇರಳ ಭೂ ಕುಸಿತದಲ್ಲಿ ಕನ್ನಡಿಗರು ಸಹ ಮರಣ ಅಪ್ಪಿದ್ದು, ಶೋಧಕಾರ್ಯ ಮುಂದುವರೆದಿದೆ. ಚಾಮರಾಜನಗರ ಅಧಿಕಾರಿಗಳ ತಂಡ ಕೇರಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಾದಲ್ಲಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications