Union Budget 2024: ಚಾಮರಾಜನಗರ ಜಿಲ್ಲೆ ಜನರ ಪ್ರಮುಖ ನಿರೀಕ್ಷೆಗಳೇನು?-ಮಾಹಿತಿ ತಿಳಿಯಿರಿ
ಚಾಮರಾಜನಗರ, ಜನವರಿ, 30: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದು ಅವರು ಅನುಮೋದನೆ ಮಾಡಲಿರುವ ಕೇಂದ್ರ ಬಜೆಟ್ ಇದಾಗಿದೆ. ಹಾಗೆಯೇ ಈ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಹಾಗಾದರೆ ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆ ಜನರ ನಿರೀಕ್ಷೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಆಯಾ ಜಿಲ್ಲೆಗಳಿಗೆಂದೇ ಪ್ರತ್ಯೇಕವಾಗಿ ಪ್ರಮುಖವಾಗಿ ರೈಲ್ವೆ ಯೋಜನೆಗಳು ಇರಲಿದ್ದು, ಕಳೆದ 5 ವರ್ಷದ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಯೋಜನೆಯಾಗಲೀ, ಹೊಸ ರೈಲಾಗಲೀ ದೊರೆತಿಲ್ಲ ಎನ್ನುವುದು ಜಿಲ್ಲೆ ಜನರು ಹೇಳುತ್ತಿದ್ದಾರೆ. ಚಾಮರಾಜನಗರ ಕರ್ನಾಟಕದ ಗಡಿಜಿಲ್ಲೆಯಾಗಿದೆ. ಇಲ್ಲಿಂದ ತಮಿಳುನಾಡಿನ ಮೇಟುಪಾಳ್ಯಂಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂಬ ಐದು ದಶಕಗಳ ಕನಸಿನ ಯೋಜನೆಯಾಗಿದೆ. ದಿಂಬಂ ಅರಣ್ಯ ಪ್ರದೇಶದಲ್ಲಿ ರೈಲು ಹಳಿ ಹಾಕಲು ಕೇಂದ್ರ ಅರಣ್ಯ ಪರಿಸರ ಇಲಾಖೆ ಒಪ್ಪಿಗೆ ನೀಡದ ಹಿನ್ನೆಲೆ ಇದು ಮೂಲೆಗುಂಪಾಗಿದೆ.

ಬೆಂಗಳೂರಿನ ಹೆಜ್ಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿಲೋ ಮೀಟರ್ ಉದ್ದದ, 1330 ಕೋಟಿ ರೂಪಾಯಿ ವೆಚ್ಚದ ನೂತನ ರೈಲ್ವೆ ಮಾರ್ಗವನ್ನು ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಇದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂಪಾಯಿಗಳನ್ನೂ ನೀಡಿದ್ದರು.
ಇದು ಅನುಷ್ಠಾನಕ್ಕೆ ಬಂದರೆ ಮೈಸೂರಿನಿಂದ ಚಾಮರಾಜನಗರಕ್ಕೇ ಬಂದು ವಾಪಸ್ ಹೋಗುವ ರೈಲು ಮಾರ್ಗ ಬೆಂಗಳೂರಿಗೆ ವಿಸ್ತರಣೆ ಆಗಲಿದೆ. ಆದರೆ ಯುಪಿಎ ಸರ್ಕಾರದ ಬಳಿಕ ಅಧಿಕಾರಕ್ಕೆ ಬಂದ ಎನನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಈ ಯೋಜನೆಗೆ ಯಾವುದೇ ಅನುದಾನ ನೀಡಲಿಲ್ಲ. ಎರಡನೇ ಅವಧಿಯಲ್ಲಾದರೂ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಒಂದಷ್ಟು ಅನುದಾನ ನಿರೀಕ್ಷಿಸಲಾಗಿತ್ತು. ಆದರೆ ಅದು ಸಹ ಈಡೇರಲಿಲ್ಲ.
ಕೇಂದ್ರ ಬಜೆಟ್ ಅನುಮೋದಿಸಿದಾಗಲೆಲ್ಲ ಜಿಲ್ಲೆಯ ಜನರು ರೈಲ್ವೆ ಅಭಿವೃದ್ಧಿಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಐದೂ ವರ್ಷಗಳ ರೈಲ್ವೆ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಯ ರೈಲ್ವೆಗೆಂದೇ ಯಾವುದೇ ರೀತಿಯ ಘೋಷಣೆಯನ್ನಾಗಲೀ, ಅನುದಾನವನ್ನಾಗಲೀ ಕೊಟ್ಟಿಲ್ಲ. ಪ್ರತಿ ಬಾರಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಖಾತೆಯಿಂದ ಚಾಮರಾಜನಗರಕ್ಕೆ ಯಾವುದಾದರೂ ಹೊಸ ರೈಲು ಅಥವಾ ರೈಲ್ವೆ ಸ್ವಚ್ಛತಾ ಕಾರ್ಯಾಗಾರ ದೊರೆಯಬಹುದೆಂಬ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ.
ಚಾಮರಾಜನಗರವು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣ ಆಗಿದ್ದು, ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಬಹಳ ಅನುಕೂಲ ಆಗುತ್ತಿತ್ತು. ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡದಿಂದ ಮೈಸೂರಿಗೆ ಬರುವ ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಣೆ ಮಾಡಬೇಕೆಂದು ಪ್ರಯಾಣಿಕರ ಬೇಡಿಕೆಯಾಗಿತ್ತು. ಈ ಬಗ್ಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಸಹ ಮನವಿ ಸಲ್ಲಿಸಿದ್ದರೂ ಇದು ಜಾರಿಯಾಗಿಲ್ಲ.
ಚಾಮರಾಜನಗರದಿಂದ ನಂಜನಗೂಡಿಗೆ 35 ಕಿಲೋ ಮೀಟರ್ ದೂರವಿದೆ. ಈ ಮಾರ್ಗದಲ್ಲಿ ಯಾವುದೇ ಕ್ರಾಸಿಂಗ್ ಪಾಯಿಂಟ್ ಇಲ್ಲ. ಆದ್ದರಿಂದ ರೈಲು ವಿಳಂಬವಾಗಿ ಹೊರಟಾಗ, ರೈಲ್ವೆ ವ್ಯಾಗನ್‌ಗಳು ಸಂಚರಿಸಿದಾಗ ರೈಲುಗಳು ನಂಜನಗೂಡು ಅಥವಾ ನಗರದಲ್ಲೇ ತಡವಾಗಿ ಹೊರಡಬೇಕಾಗಿದೆ. ಕವಲಂದೆ ನಿಲ್ದಾಣ ಮೇಲ್ದರ್ಜೆಗೇರಿಸಿ, ರೈಲ್ವೆ ಕ್ರಾಸಿಂಗ್ ಪಾಯಿಂಂಟ್ ಮಾಡಿದರೆ ತುಂಬಾ ಅನುಕೂಲ ಆಗಲಿದೆ ಎಂದು ಹಿಂದಿನ ಸಂಸದ ದಿ.ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಅದು ಕೂಡ ಈಡೇರಿಲ್ಲ.
ಚಾಮರಾಜನಗರದಿಂದ ಮೈಸೂರಿಗೆ ಪ್ರತಿ ನಿತ್ಯ ಬೆಳಗ್ಗೆ 10:30ರ ನಂತರ ಮಧ್ಯಾಹ್ನ 3 ಗಂಟೆಯವರೆಗೆ ರೈಲು ಸಂಚಾರ ಇಲ್ಲ. ಈ ಅವಧಿಯಲ್ಲಿ ಮತ್ತೊಂದು ಹೆಚ್ಚುವರಿ ರೈಲನ್ನು ಓಡಿಸಬೇಕು ಎನ್ನುವ ಬೇಡಿಕೆಗೂ ಬೆಲೆ ಇಲದಾಂತಾಗಿದೆ. ಚಾಮರಾಜನಗರದಲ್ಲಿ ಸ್ವಚ್ಛತಾ ಘಟಕ ಸಹ ಇಲ್ಲ. ಮೈಸೂರಿನಲ್ಲಿರುವ ಸ್ವಚ್ಛತಾ ಘಟಕದಲ್ಲಿ ಈಗ ಹೆಚ್ಚು ಒತ್ತಡವಿದ್ದು, ಅನೇಕ ರೈಲುಗಳು ಅಲ್ಲೇ ನಿಲ್ಲಬೇಕಾಗಿದೆ. ಅದಕ್ಕೆ ಸ್ಥಳಾವಕಾಶವೂ ಇಲ್ಲದಂತಾಗಿದೆ.
ಇಲ್ಲಿ ಸ್ವಚ್ಛತಾ ಘಟಕ ಸ್ಥಾಪಿಸಿದರೆ, ಮೈಸೂರಿನಲ್ಲಿ ನಿಲ್ಲುವ ರೈಲುಗಳು ಚಾಮರಾಜನಗರಕ್ಕೆ ಬರುತ್ತವೆ. ಪ್ರಯಾಣಿಕರಿಗೂ ಇದರಿಂದ ತುಂಬಾ ಅನುಕೂಲ ಆಗುತ್ತದೆ. ಅಲ್ಲದೇ ಇಲ್ಲಿನ ನಿಲ್ದಾಣದಲ್ಲಿ ರೈಲುಗಳೂ ತಂಗಲು ಅವಕಾಶ ಆಗುತ್ತದೆ ಎಂಬ ಕಾರಣದಿಂದ ಚಾಮರಾಜನಗರದಲ್ಲಿ ರೈಲುಗಳ ಸ್ವಚ್ಛತಾ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಅದು ಸಹ ಈಡೇರಿಲ್ಲ.
ಚಾಮರಾಜ ನಗರದಿಂದ ಬೆಂಗಳೂರಿಗೆ ಸೀಮಿತವಾಗಿ ಎಕ್ಸ್‌ಪ್ರೆಸ್ ರೈಲೊಂದನ್ನು ಮಂಜೂರು ಮಾಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿತ್ತು. ಕಳೆದ ಐದು ವರ್ಷಗಳ ಬಜೆಟ್‌ನಲ್ಲಿ ರೈಲ್ವೆಯ ಈ ಬೇಡಿಕೆಗಳಲ್ಲಿ ಕೆಲವಾದರೂ ಜಾರಿ ಆಗಬಹುದೆಂದು ಜಿಲ್ಲೆಯ ಸಾರ್ವಜನಿಕರು ಆಶಾಭಾವನೆ ಹೊಂದಿದ್ದರು. ಆದರೆ ಅವು ಯಾವು ಈಡೇರಿಲ್ಲ.
ಚಾಮರಾಜನಗರದಲ್ಲಿ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು (ನೈಪರ್) ಬಜೆಟ್‌ನಲ್ಲಿ ಮಂಜೂರು ಮಾಡಿಕೊಡುವಂತೆ ಹಿಂದಿನ ಸಂಸದ ದಿ.ಆರ್.ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಸ್ಥೆ ದೇಶದ 7 ರಾಜ್ಯಗಳಲ್ಲಿ ಸ್ಥಾಪನೆಯಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಲ್ಲ. ಈ ಸಂಸ್ಥೆ ಸಹ ಜಿಲ್ಲೆಗೆ ಬರಲಿಲ್ಲ.
2024ರ ಬಜೆಟ್‌ನಲ್ಲಿ ನಿರೀಕ್ಷೆಗಳು
*ಬೆಂಗಳೂರಿನ ಹೆಜ್ಜಾಲದಿಂದ ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಚಾಮರಾಜನಗರಕ್ಕೆ ಮಂಜೂರಾಗಿರುವ ರೈಲ್ವೆ ಮಾರ್ಗಕ್ಕೆ ಅನುದಾನ ನೀಡಿ ಕಾಮಗಾರಿ ಆರಂಭಿಸುವುದು.
*ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸುವುದು. ಮುಖ್ಯವಾಗಿ ಹುಬ್ಬಳ್ಳಿ-ಧಾರ ವಾಡದಿಂದ ಮೈಸೂರಿಗೆ ಬರುವ, ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಣೆ ಮಾಡಬೇಕು.
*ಚಾಮರಾಜನಗರದಿಂದ ಬೆಂಗಳೂರಿಗೆ ಸೀಮಿತವಾಗಿ ಎಕ್ಸ್‌ಪ್ರೆಸ್ ರೈಲೊಂದನ್ನು ಮಂಜೂರು ಮಾಡಬೇಕು.
*ಚಾಮರಾಜನಗರದಲ್ಲಿ ರೈಲು ಸ್ವಚ್ಛಗೊಳಿಸುವ ಕಾರ್ಯಾಗಾರ ಸ್ಥಾಪನೆ ಮಾಡಬೇಕು.
*ಕವಲಂದೆಯಲ್ಲಿ ರೈಲ್ವೆ ಕ್ರಾಸಿಂಗ್ ಪಾಯಿಂಟ್ ನಿರ್ಮಾಣ ಮಾಡಬೇಕು.
*ಚಾಮರಾಜನಗರದಲ್ಲಿ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ ಮಾಡಬೇಕು. ಚಾಮರಾಜನಗರಕ್ಕೆ ರೈಲ್ವೆ ಮಾರ್ಗವಿದೆ. ಮೈಸೂರಿಗೆ ಮೂರ್ನಾಲ್ಕು ರೈಲುಗಳು ಸಂಚರಿಸುತ್ತವೆ. ಇದನ್ನು ಹೊರತುಪಡಿಸಿದರೆ, ಪ್ರಯಾಣಿಕರಿಗೆ ಇವುಗಳಿಂದ ಹೆಚ್ಚಿನ ಅನುಕೂಲ ಆಗುತ್ತಿಲ್ಲ. ಶಾಲೆ, ಕಚೇರಿ ಸಮಯಕ್ಕೆ ರೈಲುಗಳಿಲ್ಲ. ಹೆಚ್ಚಿನ ಜನರು ಬಸ್‌ಗಳನ್ನೇ ಅವಲಂಭಿಸಬೇಕಾಗಿದೆ. ಕೇಂದ್ರ ಸರ್ಕಾರ ಚಾಮರಾಜನಗರಕ್ಕೆ ಹೆಚ್ಚಿನ ರೈಲುಗಳ ಸೇವೆ ವಿಸ್ತರಣೆ ಮಾಡಬೇಕಾಗಿದೆ ಎನ್ನುವುದು ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ.












Click it and Unblock the Notifications