ಹಳ್ಳಿಯ ಬೀದಿ ಬೀದಿಗಳಲ್ಲಿ ಶಿವ, ಹನುಮ, ರಾಕ್ಷಸ: ಇದು ಗುಂಡ್ಲುಪೇಟೆಯ ಹೊಸ ತೊಡಕು ಸಂಭ್ರಮ
ಚಾಮರಾಜನಗರ, ಮಾರ್ಚ್ 23: ಯುಗಾದಿ ಬಂತೆಂದರೆ ಪ್ರಕೃತಿಯಲ್ಲಿ ನವೋಲ್ಲಾಸದ ಸಂಭ್ರಮ. ಅದೇ ರೀತಿ, ಹಿಂದೂಗಳ ಹೊಸ ವರ್ಷವಾದ ಯುಗಾದಿಯನ್ನು ಹಳೇ ಮೈಸೂರು ವಿಶೇಷವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಬಣ್ಣದ ರಂಗಿನಿಂದ ಸ್ವಾಗತಿಸುವುದು ನಡೆದುಬಂದ ವಾಡಿಕೆಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಯುಗಾದಿಯಂದು ಹೊನ್ನೇರು ಕಟ್ಟಿ ಕೃಷಿ ಚಟುವಟಿಕೆ ಆರಂಭಿಸಿದರೇ ಹೊಸ ತೊಡಕು ಅಥವಾ ವರ್ಷತೊಡಕಿನಂದು ಹಿರಿಯರಾದಿಯಾಗಿ ಬಣ್ಣದ ಓಕುಳಿ ಆಡಿ ಯುಗಾದಿಯನ್ನು ಸಂಭ್ರಮಿಸುತ್ತಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಂತೂ ಇನ್ನೂ ವಿಶೇಷವಾಗಿ ಆಚರಣೆ ಮಾಡಲಿದ್ದು, ಪ್ರತಿ ವರ್ಷವೂ ಸ್ಥಳೀಯರು ವಿಭಿನ್ನ ವೇಷ ಹಾಕುತ್ತಾರೆ.

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬಣ್ಣದ ಓಕುಳಿ ಜೊತೆಗೆ ಕಳೆದ 3-4 ದಶಕಗಳಿಂದ ಹುಲಿ, ಕರಡಿ, ಜೋಕರ್ಗಳು, ಅಣಕು ಪಂಚಾಂಗ ಶ್ರವಣದ ವೇಷಧಾರಿಗಳು ಪ್ರತಿ ಮನೆ ಮನೆಗೂ ತೆರಳಿ ದವಸ-ಧಾನ್ಯ ಇಲ್ಲವೇ ಹಣ ಪಡೆಯುವ ಕುತೂಹಲಕಾರಿ ಪದ್ಧತಿ ಇದೆ.
ಕರಡಿ ವೇಷಧಾರಿಗಳು ಮೈಗೆ ಕಪ್ಪು ಬಣ್ಣ ಬಳಿದುಕೊಂಡು ಎತ್ತಿಗೆ ಕಟ್ಟುವ ಗೆಜ್ಜೆಗಳನ್ನು ಕಟ್ಟಿಕೊಳ್ಳುತ್ತಾರೆ. ಹುಲಿ ವೇಷಧಾರಿಗಳು ಹಳದಿ- ಕಪ್ಪು ಬಣ್ಣಗಳ ಪಟ್ಟೆಗಳನ್ನು ಲೇಪಿಸಿಕೊಂಡು ಜನರ ಮುಂದೆ ವಿವಿಧ ಕಸರತ್ತುಗಳನ್ನು ಮಾಡುತ್ತಾರೆ. ಪಾಳೇಗಾರರ ಯುದ್ಧ, ಪಂಚಾಂಗ ಶ್ರವಣದ ಅಣಕು, ಮೋಡಿ ವಿದ್ಯೆಯ ಅಣಕುಗಳನ್ನು ಮಾಡುತ್ತಾರೆ.

ಉಳಿದಂತೆ, ಪೊಲೀಸ್, ಕಳ್ಳ, ರಾಕ್ಷಸ, ಹನುಮ, ಒಂಟೆ ವೇಷಧಾರಿಗಳು ಆಗಾಗ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಹಣ ಕೇಳುತ್ತಾರೆ. ಒಂದು ವೇಳೆ ಹಣ ಕೊಡದಿದ್ದರೆ ಮೈಗೆಲ್ಲಾ ಕಪ್ಪು ಬಣ್ಣ ಹಚ್ಚಿ ರಂಪವನ್ನೇ ಮಾಡುತ್ತಾರೆ.ವರ್ಷಕ್ಕೊಮ್ಮೆ ನಡೆಯುವ ಈ ಸಂಭ್ರಮವನ್ನು ಸಾಮಾನ್ಯವಾಗಿ ಎಲ್ಲರೂ ಮನರಂಜನೆ ಎಂದೇ ಭಾವಿಸುತ್ತಾರೆ.
ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಮಿಠಾಯಿ ಡಬ್ಬಿ, ತಕ್ಕಡಿಗಳನ್ನು ಹಾರಿಸುವ ಕರಡಿ, ಕೋತಿ ವೇಷಧಾರಿಗಳು ಬಳಿಕ ಮಾಲೀಕರನ್ನು ಸತಾಯಿಸಿ ಹಿಂತಿರುಗಿಸುತ್ತಾರೆ. ಬಣ್ಣ ಹಚ್ಚಿಸಿಕೊಳ್ಳದವರು ಕರಡಿ ವೇಷಧಾರಿಗಳನ್ನು ಕಂಡರೆ ನಿಜವಾಗಿಯೂ ಕರಡಿ ಬಂತು ಎಂದು ಬೆದರಿ ಓಡುವ ದೃಶ್ಯ ಈ ಊರಲ್ಲಿ ಸರ್ವೇ ಸಾಮಾನ್ಯವಾಗಿರುತ್ತದೆ. ಒಟ್ಟಾರೆ ವರ್ಷಕೊಮ್ಮೆ ಬರುವ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ.

ಚಾಮರಾಜನಗರದಲ್ಲಿ ಯುಗಾದಿ ಸಂಭ್ರಮ
ಈ ಎಲ್ಲಾ ಸಂಭ್ರಮ ಹೊಸತೊಡಕು ದಿನವಾದರೆ, ಹಿಂದೂಗಳ ಪ್ರಕಾರ ವರ್ಷದ ಮೊದಲ ದಿನ ಯುಗಾದಿಯಂದು ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿ ಜಮೀನುಗಳಿಗೆ ಗೊಬ್ಬರ ಸಿಂಪಡಿಸುವ ಮೂಲಕ ಹೊಸ ವರ್ಷದ ಮೊದಲ ದಿನ ಕೃಷಿ ಚಟುವಟಿಕೆ ಆರಂಭಿಸುತ್ತಾರೆ. ಈ ಮೂಲಕ ಬೆಳೆ-ಬೆಲೆ ಚೆನ್ನಾಗಿ ಬಂದು ರೋಗ-ರುಜಿನ ಮಾಯವಾಗಿ ನೆಮ್ಮದಿಯ ಜೀವನ ಸಿಗಲೆಂದು ಬೇಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.
ರೈತರು ಯುಗಾದಿ ಹಬ್ಬದಂದು ಬ್ರಾಹ್ಮಿ ಮಹೂರ್ತದಲ್ಲಿ ಎತ್ತುಗಳನ್ನು ತೊಳೆದು ಅವುಗಳ ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಗಣಗಲೆ ಹೂವು, ಮಂಡೆ ಹುರಿ ಕಟ್ಟುತ್ತಾರೆ. ಜೊತೆಗೆ ಎತ್ತಿನಗಾಡಿಯನ್ನು ಬಾಳೆಕಂದು, ಮಾವಿನ ಸೊಪ್ಪಿನಿಂದ ಅಲಂಕರಿಸುತ್ತಾರೆ. ಕೊಟ್ಟಿಗೆ ಗೊಬ್ಬರಕ್ಕೆ ಪೂಜೆ ಸಲ್ಲಿಸಿ ಬಳಿಕ ಆಯಾ ಗ್ರಾಮಗಳ ಗ್ರಾಮದೇವತೆಗೆ ನಮಸ್ಕರಿಸಿ ತಮ್ಮ ತಮ್ಮ ಜಮೀನುಗಳಿಗೆ ಗೊಬ್ಬರವನ್ನು ಸಿಂಪಡಿಸಿ ಬರುತ್ತಾರೆ.
ನೂತನ ವರ್ಷದ ಮೊದಲ ದಿನ ರೈತರು ಆ ವರ್ಷದ ಕೃಷಿ ಚಟುವಟಿಕೆ ವಿಧಿವತ್ತಾಗಿ ಅಡಿಯಿಡುವ ಸಂಪ್ರದಾಯ ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು ಇಂದಿಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ವಿಶೇಷ ಆಚರಣೆ ಜೀವಂತವಾಗಿದೆ. ಈ ವರ್ಷದ ಯುಗಾದಿಯ ದಿನ ಕೂಡ ಚಾಮರಾಜನಗರದ ಬಹುತೇಖ ಹಳ್ಳಿಗಳಲ್ಲಿ ಜನರು ಈ ವಿಧಿವಿಧಾನವನ್ನು ಪೂರೈಸಿದ್ದಾರೆ. ಈ ಮೂಲಕ ಹಿಂದಿನ ಆಚರಣೆಗಳನ್ನು ಇಂದಿಗೂ ಜೀವಂತ ಇರುವಂತೆ ಮಾಡುತ್ತಿದ್ದಾರೆ.












Click it and Unblock the Notifications