ಭರಚುಕ್ಕಿ ಜಲಪಾತದ ಬಳಿ ಅಪಾಯದ ಸ್ಥಳದಲ್ಲಿ ಫೋಟೋಗಾಗಿ ಹುಚ್ಚಾಟ ಮೆರೆದ ಪ್ರವಾಸಿಗರು- ಮುಂದೇನಾಯ್ತು ಗೊತ್ತಾ?
ಚಾಮರಾಜನಗರ, ಜುಲೈ, 29: ಈಗಾಲೇ ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಜಲಮೂಲಗಳು ಉಕ್ಕಿ ಹರಿಯುತ್ತಿದ್ದು, ಈ ಅದ್ಭುತ ದೃಶ್ಯಗಳನ್ನು ಸವಿಯಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಅಲ್ಲಿ ಕೆಲವರು ಇಂತಹ ತಾಣಗಳಲ್ಲಿ ಹುಚ್ಚಾಟ ಮೆರೆದು ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳಿವೆ. ಅಂತಹದ್ದೇ ಘಟನೆ ಇದೀಗ ಭರಚಿಕ್ಕಿ ಜಲಪಾತದ ಬಳಿ ನಡೆದಿದೆ.
ಕಾವೇರಿ ಹೊರಹರಿವು ಹೆಚ್ಚಾಗಿರುವ ಹಿನ್ನೆಲೆ ಕೊಳ್ಳೇಗಾಲದ ಭರಚುಕ್ಕಿ ಜಲಪಾತ ಮೈ ದುಂಬಿ ಹರಿಯುತ್ತಿದ್ದು, ಈ ಮೂಲಕ ಮನಮೋಹಕ ಜಲಸಿರಿ ಸೃಷ್ಟಿಯಾಗಿದೆ. ಈ ಜಲವೈಯ್ಯಾರ ಕಾಣಲು ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಹಲವರು ಫೋಟೋಗಾಗಿ ಹುಚ್ಚಾಟವನ್ನು ಮೆರೆಯುತ್ತಿದ್ದಾರೆ. ಇನ್ನು ಭರಚುಕ್ಕಿ ಜಲಪಾತದ ತುದಿಗೆ ತೆರಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹುಚ್ಚಾಟ ಮೆರೆಯುತ್ತಿದ್ದವರಿಗೆ ಪೊಲೀಸರು ಬಸ್ಕಿ ಹೊಡೆಸಿ ಪಾಠ ಕಲಿಸಿದ ಘಟನೆ ನಡೆದಿದೆ.

ಭರಚುಕ್ಕಿ ಜಲಪಾತದ ನೀರು ಧುಮ್ಮಿಕ್ಕುವ ಹಿಂಭಾಗಕ್ಕೆ ಬಂದು ಫೋಟೋ ಕ್ರೇಜ್‌ಗಾಗಿ ಅಪಾಯಕಾರಿ ಸ್ಥಳದಲ್ಲಿ ಕೆಳಗಿಳಿಯುತ್ತಿದ್ದ ಮಾಹಿತಿ ಅರಿತ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಯುವಕರನ್ನು ಹಿಂದಕ್ಕೆ ಕರೆಸಿ ಬಸ್ಕಿ ಹೊಡೆಸಿದ್ದಾರೆ. ಬಳಿಕ ಒಂದು ಫೋಟೋಗಾಗಿ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದು 15ಕ್ಕೂ ಹೆಚ್ಚು ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಕಾಣದಂತೆ ಮಾಯವಾದ ಹೊಗೆನಕಲ್ ಫಾಲ್ಸ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರೆಯುತ್ತಿರುವ ಪರಿಣಾಮ ಅನೇಕ ಜಲಮೂಲಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾಗೆಯೇ ಭಾರತದ ನಯಾಗರ ಎಂದೇ ಕರೆಯುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಕಾವೇರಿ ಅಕ್ಷರಶಃ ರುದ್ರ ತಾಂಡವ ಆಡುತ್ತಿದ್ದು, ಸಾಗರದ ಮಾದರಿ ಇಡೀ ಪರಿಸರ ಗೋಚರಿಸುತ್ತಿದೆ.
ಕಲ್ಲು ಬಂಡೆಗಳ ಮೇಲೆ ಧುಮ್ಮಿಕ್ಕುತ್ತಿದ್ದ ನೀರು ಈಗ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಧುಮ್ಮಿಕ್ಕುವ ದೃಶ್ಯ ಕಣ್ಮರೆಯಾಗಿದ್ದು, ಜಲಪಾತವೇ ಕಾವೇರಿ ಆರ್ಭಟಕ್ಕೆ ಮುಳುಗಡೆಯಾಗಿದೆ. ನಯಾಗರ ಜಲಪಾತದಂತೆ ಕಲ್ಲು ಬಂಡೆಗಳಿಂದ ಧುಮ್ಮಿಕ್ಕುತ್ತಿದ್ದ ನೀರು ಈಗ ಡ್ರೋಣ್ ದೃಶ್ಯದಲ್ಲಿ ಸಾಗರದಂತೆ ಗೋಚರಿಸುತ್ತಿದ್ದು, 1.20 ಲಕ್ಷ ಕ್ಯೂಸೆಕ್ ನೀರಿನ ಹರಿವಿದ್ದು, ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದೆ.
ಕರ್ನಾಟಕದ ರೀತಿ ತಮಿಳುನಾಡಿನಲ್ಲೂ ಕಾವೇರಿ ಪ್ರವಾಹ ಭೀತಿ ಎದುರಾಗಿದ್ದು, ಧರ್ಮಪುರಿ, ಕೃಷ್ಣಗಿರಿ, ಸೇಲಂ, ಈರೋಡ್, ನಾಮಕ್ಕಲ್, ಕರೂರ್, ತಿರುಚಿ, ತಂಜಾವೂರು ಭಾಗಗಳಲ್ಲಿ ಎಚ್ಚರಿಕೆ ವಹಿಸುವಂತೆ ಅಲ್ಲಿನ ಸಿಡಬ್ಲೂಸಿ ಎಂಜಿನಿಯರ್ ಪನ್ನೀರಸೆಲ್ವಂ ಹೇಳಿದ್ದಾರೆ.
ಕೊಳ್ಳೇಗಾಲ ಭಾಗದಲ್ಲಿ ಪ್ರವಾಹ ಭೀತಿ: ಕಾವೇರಿ ಹೊರಹರಿವು ಹೆಚ್ಚಾದಂತೆ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ, ಸರಗೂರು, ಅಗ್ರಹಾರ, ಹಳೇ ಹಂಪಾಪುರ ಸೇರಿದಂತೆ 9 ಊರುಗಳಲ್ಲಿ ಆತಂಕ ಎದುರಾಗಿದ್ದು, ಕಾಳಜಿ ಕೇಂದ್ರಗಳಿಗೆ ಜನರೆಲ್ಲರೂ ಬರುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಜಾನುವಾರುಗಳಿಗಾಗಿ ಗೋಶಾಲೆ ತೆರೆಯಲಾಗುತ್ತಿದೆ.












Click it and Unblock the Notifications