ಚಾಮರಾಜನಗರದಲ್ಲಿ ಅದ್ಧೂರಿ ದಸರಾ: ಈ ಬಾರಿಯ ಉದ್ಘಾಟಕರು ಇವರೇ ನೋಡಿ..!
ಚಾಮರಾಜನಗರ, ಸೆಪ್ಟೆಂಬರ್ 24: ಚಾಮರಾಜನಗರ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ ಮಾಡಲಾಗಿದ್ದು, ಈ ಬಾರಿ ವಿಶೇಷವಾಗಿ, ವಿಜೃಂಭಣೆಯಿಂದ ಗಡಿ ಜಿಲ್ಲೆಯ ದಸರಾ ಆಚರಣೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಚಾಮರಾಜನಗರ ದಸರಾ ಆಚರಣಾ ಸಮಿತಿ ಸಭೆ ನಡೆದಿದ್ದು, ಅಕ್ಟೋಬರ್ 7,8 ಹಾಗೂ 9 ರಂದು ದಸರಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ಚಾಮರಾಜನಗರ ದಸರಾ ಉದ್ಘಾಟನೆಯನ್ನು ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋಶಿವರಾಜ್ ಕುಮಾರ್ ಉದ್ಘಾಟಿಸುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಡಳಿತ ಒಂದು ಬಾರಿ ಮಾತುಕತೆ ನಡೆಸಿದ್ದು, ಇನ್ನೆರೆಡು ದಿನಗಳಲ್ಲಿ ಖಚಿತ ಪಡಿಸುವುದಾಗಿ ಶಿವರಾಜ್ ಕುಮಾರ್ ತಿಳಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

ಚಾಮರಾಜನಗರ ದಸರಾ ಈ ಬಾರಿ ಮತ್ತಷ್ಟು ಕಳೆಗಟ್ಟಲಿದ್ದು ಎರಡು ಆನೆಗಳನ್ನು ಕರೆತಂದು ಮೆರವಣಿಗೆ ಮಾಡಲು ಕೂಡ ಚಿಂತನೆ ನಡೆಸಲಾಗಿದೆ. ಜೊತೆಗೆ, ಚಾಮರಾಜ ಒಡೆಯರ್ ಜನಿಸಿದ ಜನನ ಮಂಟಪದಲ್ಲಿ ಚಾಮರಾಜೇಶ್ವರ ದರ್ಬಾರ್ ಕೂಡ ನಡೆಸಲಿದ್ದು, ಹಳೇ ಸಂಪ್ರದಾಯಕ್ಕೆ ಜಿಲ್ಲಾಡಳಿತ ಮತ್ತೆ ನಾಂದಿ ಹಾಡಲು ಮುಂದಾಗಿದೆ.
ಸರ್ಕಾರದಿಂದ ದಸರಾಗೆ ಎರಡು ಕೋಟಿ ರೂಪಾಯಿ ನಿಗದಿಯಾಗಿದ್ದು, ಇಡೀ ನಗರವನ್ನು ಜಗಮಗೊಳಿಸಲು ಆಕರ್ಷಕ ಲೈಟಿಂಗ್ ವ್ಯವಸ್ಥೆ, ಜನಪ್ರಿಯ ಗಾಯಕರಿಂದ ಸಂಗೀತ ಸುಧೆ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸಲು ವಿಶೇಷ ದೀಪಾಲಂಕಾರ ಮಾಡಲು ಚಾಮರಾಜನಗರ ಜಿಲ್ಲಾಡಳಿತ ತೀರ್ಮಾನಿಸಿದೆ.
ಇನ್ನು ದಸರಾ ಪೂರ್ವ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್, ಚಾಮರಾಜನಗರ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ದೀಪಾಲಂಕಾರವನ್ನು ಹೆಚ್ಚು ಜನರನ್ನು ಸೆಳೆಯುವ ರೀತಿಯಲ್ಲಿ ಕೈಗೊಳ್ಳಬೇಕು. ಪ್ರಮುಖ ವೃತ್ತಗಳಲ್ಲಿ ವಿಶೇಷವಾಗಿ ದೀಪಾಲಂಕಾರ ವ್ಯವಸ್ಥೆಯಾಗಬೇಕಿದ್ದು, ಇದಕ್ಕಾಗಿ ಹೆಚ್ಚಿನ ಅನುದಾನ ನಿಗದಿಮಾಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ವಿಶೇಷ ಗಮನ ನೀಡುವಂತೆ ಸಚಿವರು ತಿಳಿಸಿದರು.
ಈ ವೇಳೆ ಉಪಸ್ಥಿತರಿದ್ದ ಎಂಎಸ್‍ಐಎಲ್ ಅಧ್ಯಕ್ಷ, ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ವಿದ್ಯುತ್ ದೀಪಾಲಂಕಾರ ಎಲ್ಲಾ ಕಡೆಯಲ್ಲೂ ಇರಬೇಕು. ದೀಪಾಲಂಕಾರ ಹೆಚ್ಚು ಜನರ ಗಮನ ಸೆಳೆಯಲಿದೆ. ದಸರಾ ಹಬ್ಬದಲ್ಲಿ ವ್ಯಾಪಕವಾಗಿ ಎಲ್ಲಾ ಭಾಗಗಳಲ್ಲಿಯೂ ದೀಪಾಲಂಕಾರ ಇರುವಂತೆ ನೋಡಿಕೊಳ್ಳಬೇಕು ಎಂದರು.












Click it and Unblock the Notifications