ಯಳಂದೂರಿನಲ್ಲಿ ಪುಟ್ಟ ಕಂದಮ್ಮಗಳ ಕಚ್ಚಿದ ನಾಯಿ
ಚಾಮರಾಜನಗರ, ಜುಲೈ 20: ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿದ ಬೀದಿನಾಯಿಯೊಂದು ಎಲ್ಲೆಂದರಲ್ಲಿ ಕಚ್ಚಿದ ಪರಿಣಾಮ ಮೂರು ಮಕ್ಕಳಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಜುಲೈ 19 ರಂದು ನಡೆದಿದೆ.
ಕೃಷ್ಣಪುರದ ಸಹನಾ (2), ಕೊಮಾರನಪುರದ ರಕ್ಷಿತಾ (3) ಮತ್ತು ವಡೆಗೆರೆಯ ರಿತೀಶ್ (4) ನಾಯಿ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡ ಮಕ್ಕಳಾಗಿದ್ದಾರೆ.

ಕೃಷ್ಣಪುರದಲ್ಲಿ ಸಹನಾ ಎಂಬ ಮಗು ಮನೆ ಮುಂದೆ ಆಟವಾಡುತ್ತಿದ್ದಾಗ ನಾಯಿ ಆಕೆಯ ಮೇಲೆ ದಾಳಿ ಮಾಡಿ ಕುತ್ತಿಗೆ ಮತ್ತು ಕೆನ್ನೆಗೆ ಕಚ್ಚಿ ಕುತ್ತಿಗೆ ಹಿಡಿದು ಎಳೆದೊಯ್ಯಲು ಮುಂದಾಗಿದೆ. ಮಗು ಚೀರುತ್ತಿದ್ದ ಶಬ್ದ ಕೇಳಿ ಓಡಿ ಬಂದ ಅಕ್ಕಪಕ್ಕದವರು ನಾಯಿಗೆ ಹೊಡೆದು ಮಗುವನ್ನು ರಕ್ಷಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಓಡಿದ ನಾಯಿ ಕೊಮಾರನಪುರಕ್ಕೆ ಹೋಗಿ ಅಲ್ಲಿ ಮನೆ ಬಳಿ ಆಟವಾಡುತ್ತಿದ್ದ ರಕ್ಷಿತಾ ಎಂಬ ಬಾಲಕಿ ಮೇಲೆ ಏಕಾಏಕಿ ದಾಳಿ ಮಾಡಿ ತೊಡೆ, ಕಾಲಿಗೆ ಕಚ್ಚಿದೆ.
ಮಗು ಜೋರಾಗಿ ಚೀರಿದ್ದರಿಂದ ಮನೆಯವರು ಸೇರಿದಂತೆ ಅಕ್ಕಪಕ್ಕದವರು ಓಡಿ ಬಂದಿದ್ದಾರೆ. ಬಳಿಕ ದೊಣ್ಣೆಯಿಂದ ಹೊಡೆದು ಅದನ್ನು ಓಡಿಸಿದ್ದಾರೆ. ನಾಯಿ ಮಗುವಿನ ತೊಡೆ ಭಾಗಕ್ಕೆ ಕಚ್ಚಿ ಮಾಂಸ ಖಂಡವನ್ನೇ ಕಿತ್ತು ಹಾಕಿದೆ. ಇದರಿಂದ ಮಗುವಿಗೆ ಗಂಭೀರ ಗಾಯವಾಗಿದೆ.

ಅಷ್ಟೇ ಅಲ್ಲ, ವಡಗೆರೆ ಗ್ರಾಮದ ರಿತೇಶ್ ಎಂಬ ಬಾಲಕನ ಮೊಣಕಾಲು, ತೊಡೆಗೆ ಕಚ್ಚಿ ಗಾಯಗೊಳಿಸಿದೆ. ಮನೆಯವರು ಸ್ಥಳಕ್ಕೆ ಬರುವ ವೇಳೆಗೆ ಕಾಲ್ಕಿತ್ತ ನಾಯಿ ಬಳಿಕ ಅಲ್ಲಿಂದ ಯಾವ ಕಡೆ ತೆರಳಿದೆ ಎಂಬುದು ಗೊತ್ತಾಗಿಲ್ಲ. ಇದೊಂದು ಹುಚ್ಚುನಾಯಿ ಎಂಬುದು ಊರವರ ಅಭಿಪ್ರಾಯ.
ನಾಯಿ ಕಡಿತಕ್ಕೊಳಗಾಗಿ ಗಾಯಗೊಂಡ ಮೂರು ಮಕ್ಕಳನ್ನು ಯಳಂದೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ದಿನದಲ್ಲಿ ಮೂರು ಮಕ್ಕಳಿಗೆ ನಾಯಿ ಕಚ್ಚಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ನಾಯಿ ಎಲ್ಲಿದೆಯೋ ಯಾವಾಗ ದಾಳಿ ಮಾಡಿಬಿಡುತ್ತದೆಯೋ ಎಂಬ ಆತಂಕದಲ್ಲಿ ಜನ ದಿನ ಕಳೆಯುವಂತಾಗಿದೆ.
ಘಟನೆ ನಡೆದ ಬಳಿಕ ಗ್ರಾಮಸ್ಥರು ಎಚ್ಚೆತ್ತುಕೊಂಡಿದ್ದು, ಹುಚ್ಚು ನಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications