ಮಲೆ ಮಾದಪ್ಪನಿಗೆ ರೈತನಿಂದ ವಿಶೇಷ ಹರಕೆ; 15ಕ್ಕೂ ಹೆಚ್ಚು ಕುರಿಗಳಿಂದ ಮೂರು ಪ್ರದಕ್ಷಿಣೆ
ಚಾಮರಾಜನಗರ, ಡಿಸೆಂಬರ್, 03: ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಸ್ವಾಮಿ ಅಸಂಖ್ಯಾತ ಭಕ್ತರ ಆರಾಧ್ಯ ದೈವ. ಅದರಂತೆಯೇ ರೈತನೋರ್ವ ಕುರಿಗಳ ಜೊತೆ ಬಂದು ಹರಕೆ ತೀರಿಸಿ ಗಮನ ಸೆಳೆದಿದ್ದಾರೆ.
ಮಂಡ್ಯ ಮೂಲದ ರೈತ ಮಾದೇಗೌಡ ಎಂಬವರು ತಮ್ಮ 15ಕ್ಕೂ ಹೆಚ್ಚು ಕುರಿಗಳನ್ನು ವಾಹನದಲ್ಲಿ ತಂದು ಮಲೆ ಮಾದೇಶ್ವರ ಬೆಟ್ಟದ ರಾಜಗೋಪುರದ ಮುಂಬಾಗ ಭಕ್ತರ ಜೊತೆ ದೇವಾಲಯದ ಸುತ್ತಲೂ ಮೂರು ಪ್ರದಕ್ಷಿಣೆ ಮೆರವಣಿಗೆ ಮಾಡುವ ಮೂಲಕ ಮಾದಪ್ಪನ ಹರಕೆ ತೀರಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದು ವಿವಿಧ ಹರಕೆಗಳನ್ನು ತೀರಿಸಲು ಮತ್ತು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಲ್ಲಿ ಬೇಡಿಕೊಂಡು ಇಷ್ಟಾರ್ಥ ಫಲಿಸಿದ ನಂತರ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುವ ಪದ್ಧತಿ ಇದೆ.
ಅದರಂತೆಯೇ ಇಂದು ಮಂಡ್ಯ ಜಿಲ್ಲೆಯ ರೈತ ಮಾದೇಗೌಡ ತನ್ನ 15ಕ್ಕೂ ಹೆಚ್ಚು ಕುರಿಗಳನ್ನು ತೊಳೆದು ಸ್ವಚ್ಛಗೊಳಿಸಿ ಮಲೆ ಮಹದೇಶ್ವರನಿಗೆ 3 ಪ್ರದಕ್ಷಿಣೆ ಹಾಕಿಸಿದ್ದಾರೆ. ಇನ್ನು, ಕುರಿಗಳ ಜೊತೆ ಮಾದಪ್ಪನಿಗೆ ಪ್ರದಕ್ಷಿಣೆ ಹಾಕುವುದನ್ನು ಕಂಡ ಭಕ್ತರು ಮಹದೇಶ್ವರನಿಗೆ ಘೋಷಣೆ ಕೂಗಿ ಭಕ್ತಿ ಮೆರೆದಿದ್ದಾರೆ.
ಮಲೆ ಮಾದಪ್ಪನ ಬೆಟ್ಟದಲ್ಲಿ ಹುಂಡಿ ಎಣಿಕೆ
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ (ಡಿಸೆಂಬರ್ 01) ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 23 ದಿನಗಳ ಅವಧಿಯಲ್ಲಿ 2 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ (ಡಿಸೆಂಬರ್ 01) ಬೆಳಗ್ಗೆ 8 ಗಂಟೆಗೆ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ಪ್ರಾರಂಭಿಸಲಾಗಿದ್ದು, ಎಣಿಕೆ ಕಾರ್ಯವು ಸಂಜೆ 7 ಗಂಟೆಯವರೆಗೂ ನಡೆಯಿತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ, ಹಾಗೂ ಸರ್ಕಾರಿ ರಜೆ ದಿನಗಳು, ದೀಪಾವಳಿ ಜಾತ್ರಾ ಮಹೋತ್ಸವ ಕಾರ್ತಿಕ ಸೋಮವಾರ ಹಿನ್ನೆಲೆ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಹಣ ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 2,00,41,724 ರೂಪಾಯಿ ಸಂಗ್ರಹವಾಗಿದೆ. ಕಳೆದ ತಿಂಗಳು ಚಿನ್ನದ ಮೌಲ್ಯಮಾಪಕರಿಗೆ ಅನಾರೋಗ್ಯ ಇದ್ದ ಹಿನ್ನೆಲೆ ಈ ಬಾರಿ ಮೌಲ್ಯಮಾಪನ ಮಾಡಲಾಗಿದೆ. ಕಳೆದ ತಿಂಗಳು ಚಿನ್ನ 24 ಗ್ರಾಂ, ಬೆಳ್ಳಿ ಒಂದು ಕೆ.ಜಿ. 915 ಗ್ರಾಂ ಸಂಗ್ರಹವಾಗಿದೆ. ಈ ಬಾರಿ ಚಿನ್ನ 76 ಗ್ರಾಂ ಮತ್ತು ಬೆಳ್ಳಿ ಒಂದು ಕೆ.ಜಿ. 514 ಗ್ರಾಂ ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಅಧೀಕ್ಷಕ ನಾಗೇಶ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.












Click it and Unblock the Notifications