ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆಗಿದ್ದಕ್ಕೆ ಶಿವಣ್ಣ ಅಸಮಾಧಾನ
ಚಾಮರಾಜನಗರ, ಮಾರ್ಚ್, 23: ಬಿಜೆಪಿ ಟಿಕೆಟ್ ಘೋಷಣೆಯಾದ ಬಳಿಕ ಕೋಟೆ ಶಿವಣ್ಣ ಅವರ ಅಸಮಾಧಾನ ಸ್ಫೋಟವಾಗಿದ್ದು, ಇಂದು (ಮಾರ್ಚ್ 23) ಚಾಮರಾಜನಗರದ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರ ಸಭೆ ನಡೆಸಿದ್ದು, ಬೆಂಬಲಿಗರು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಭೆ ಬಳಿಕ ಕೋಟೆ ಶಿವಣ್ಣ ಮಾಧ್ಯಮವರೊಂದಿಗೆ ಮಾತನಾಡಿ, ಬಿಜೆಪಿಯು ದಲಿತ ಎಡಗೈ ಸಮುದಾಯಕ್ಕೆ ಪದೇ ಪದೇ ಅನ್ಯಾಯ ಮಾಡುತ್ತಿದೆ. ಅನ್ಯಾಯವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೊಡಲಿಲ್ಲ, ತಾವು ಬಂಡಾಯವಾಗಿ ಸ್ಪರ್ಧೆ ಮಾಡುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ ಎಂದು ಹೇಳಿದರು.

ಸಮುದಾಯದ ಎಲ್ಲಾ ಮುಖಂಡರ ಅಭಿಪ್ರಾಯ ಪಡೆದು ಎರಡು ದಿನಗೊಳಗೆ ನನ್ನ ನಿರ್ಧಾರ ತಿಳಿಸುತ್ತೇನೆ. ಮಾದಿಗ ಸಮುದಾಯ ಪ್ರತಿ ಸಾರಿ ಬಿಜೆಪಿಗೆ ಮತ ಹಾಕುತ್ತಾ ಬಂದರು ಕೂಡ ಸಮುದಾಯವನ್ನು ಕಡೆಗಣಿಸುತ್ತಿರುವುದು ಸಮುದಾಯಕ್ಕೆ ಬಹಳ ನೋವು ಉಂಟು ಮಾಡಿದೆ. ಯಾವ ಸಮುದಾಯಕ್ಕೆ ಮಾನ್ಯತೆ ಕೊಡಬೇಕಿತ್ತೋ ಅಂತಹ ಸಮುದಾಯಕ್ಕೆ ಮಾನ್ಯತೆ ಕೊಡುತ್ತಿಲ್ಲ. ಮತ ಕೊಡದ ಸಮುದಾಯಕ್ಕೆ ಮಣೆ ಹಾಕಲಾಗುತ್ತಿದೆ ಎಂದು ದೂರಿದರು.
ಬಿಜೆಪಿ ಮುಖಂಡ ಬಸವನಪುರ ರಾಜಶೇಖರ ಮಾತನಾಡಿ, ಮಾದಿಗ ಸಮುದಾಯ ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಹಾಕುವ ಮೂಲಕ ಬೆಂಬಲಿಸಿಕೊಂಡು ಬಂದಿದ್ದೇವೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯದಿಂದ 1.45 ಲಕ್ಷ ಮತಗಳಿದ್ದರೂ ಕೂಡ, ಬಿಜೆಪಿ ಸಮುದಾಯವನ್ನು ಕಡೆಗಣಿಸಿದೆ.
ಅಲ್ಲದೆ ಸಮುದಾಯದ ಮಾಜಿ ಸಚಿವರಾದ ಕೋಟೆ ಎಂ.ಶಿವಣ್ಣ ಅವರಿಗೆ ಟಿಕೆಟ್ ನೀಡದೆ ಕಡೆಗಣಿಸಿದೆ. ಈ ಚುನಾವಣೆಯಲ್ಲಿ ಅವರಿಗೆ ಒಂದು ಉತ್ತಮ ಸ್ಥಾನಮಾನ ನೀಡಿ ಗೌರಯುತವಾಗಿ ನಡೆಸಿಕೊಳ್ಳಬೇಕು, ಇಲ್ಲದಿದ್ದರೆ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಮುದಾಯ ಮುಖಂಡರು ತೀರ್ಮಾನಕೈಗೊಳ್ಳುವುದಾಗಿ ಹೇಳಿದರು.
ಕೈ ಟಿಕೆಟ್ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗೆ ಮುಂದುವರೆದಿದೆ. ಹಾಗಾದರೆ ಯಾರೆಲ್ಲ ರೇಸ್‌ನಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಾಂಗ್ರೆಸ್ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲೂ ಚಾಮರಾಜನಗರದ ಎಂಪಿ ಟಿಕೆಟ್ ಫೈನಲ್ ಆಗಿಲ್ಲ. ಸಿಎಂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಅಳೆದು-ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಸಚಿವ ಮಹಾದೇವಪ್ಪ ಅವರನ್ನು ಲೋಕ ಅಖಾಡಕ್ಕೆ ಇಳಿಸಬೇಕು ಎನ್ನುವುದು ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಅವರ ಒಲವಾಗಿದ್ದರೇ, ತನ್ನ ಬದಲು ಮಗ ಸುನೀಲ್ ಬೋಸ್‌ಗೆ ಟಿಕೆಟ್ ಕೊಡುವಂತೆ ಮಹದೇವಪ್ಪ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ, ಕ್ಷೇತ್ರ ಇನ್ನೂ ಕಗ್ಗಂಟಾಗೇ ಉಳಿದಿದೆ.
ತನ್ನ ಬದಲು ಮಗ ಸುನೀಲ್ ಬೋಸ್‌ಗೆ ಟಿಕೆಟ್ ಕೊಡುವಂತೆ ಸಚಿವ ಮಹದೇವಪ್ಪ ಲಾಬಿ ನಡೆಸುತ್ತಿದ್ದು, ಸಿದ್ದರಾಮಯ್ಯ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ. ಕೊನೆಗೇ ಅಚ್ಚರಿ ಅಭ್ಯರ್ಥಿಯಾಗಿ ಶಾಸಕ ದರ್ಶನ್ ಧ್ರುವನಾರಾಯಣ ಕಣಕ್ಕಿಳಿದರೂ ಅಚ್ಚರಿಯಿಲ್ಲ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.
ಸಿಎಂ ವ್ಯಾಪ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕಾದ ಅನಿವಾರ್ಯತೆ ಇದ್ದು, ಈಗಾಗಲೇ ಮೊದಲ ಬಾರಿಗೆ ಕಮಲ ಅರಳಿ ಬೀಗಿದೆ. ಮತ್ತೇ ಕೈ ವಶ ಮಾಡಿಕೊಳ್ಳಬೇಕಾದ ಅನಿವಾರ್ಯತೆ, ಸಿಎಂ ಕ್ಷೇತ್ರದಲ್ಲಿ ಗೆಲ್ಲಿಸಬೇಕಾದ ಅನಿವಾರ್ಯತೆ ಎರಡೂ ಇದೆ. ಟಿಕೆಟ್ ರೇಸ್‌ನಲ್ಲಿ ಸುನೀಲ್ ಬೋಸ್, ದರ್ಶನ್ ಧ್ರುವನಾರಾಯಣ ಡಿ.ಎನ್.ನಟರಾಜು, ಜಿ.ಎನ್.ನಂಜುಂಡಸ್ವಾಮಿ ಇದ್ದು, ಎಲ್ಲರೂ ಲಾಬಿ ನಡೆಸುತ್ತಿದ್ದಾರೆ.
ಅಂತಿಮವಾಗಿ ಸಿದ್ದರಾಮಯ್ಯ ಸೂಚಿಸಿದವರಿಗೆ ಎಂಪಿ ಟಿಕೆಟ್ ಸಿಗಲಿದ್ದು, ಯಾರಾಗುತ್ತಾರೆ ಹುರಿಯಾಳು ಎಂಬುದೇ ಇನ್ನೂ ಸಸ್ಪೆನ್ಸ್ ಆಗೇ ಉಳಿದಿದೆ. ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು, ಮಹದೇವಪ್ಪ ಅವರೇ ಚುನಾವಣೆಗೆ ನಿಲ್ಲುವರೋ, ಇಲ್ಲವೇ ಮಗನಿಗೆ ಟಿಕೆಟ್ ಕೊಡಿಸುತ್ತಾರೋ, ಧ್ರುವನಾರಾಯಣ ಪುತ್ರ ದರ್ಶನ್ ಅಚ್ಚರಿ ಅಭ್ಯರ್ಥಿಯಾಗಿ ಹೊರಹೊಮ್ಮುವರೇ ಕಾದು ನೋಡಬೇಕಿದೆ.












Click it and Unblock the Notifications