ಚಿರತೆಯನ್ನೇ ಬೆದರಿಸಿ ಕುರಿ ಬಿಡಿಸಿಕೊಂಡು ಬಂದ ಕುರಿಗಾಯಿ.! ಮುಂದೇನಾಯ್ತು?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಸೆಪ್ಟೆಂಬರ್, 14: ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಣಿಗಳ ನಡುವೆ ಸಂಘರ್ಷ, ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಅಟ್ಟಾಸಿಕೊಂಡು ಹೋಗುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಕುರಿಗಾಯಿಯೊಬ್ಬ ಚಿರತೆಯನ್ನು ಅಟ್ಟಾಡಿಸಿ, ಬೆದರಿಸಿ ಚಿರತೆ ಹೊತ್ತೊಯ್ದಿದ್ದ ಕುರಿಯನ್ನು ಬಚಾಬ್ ಮಾಡಿ ತಂದ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಮುದುಮಲೆ ಗುಡ್ಡದ ಸಮೀಪ ಘಟನೆ: ಶುಕ್ರವಾರ (ಸೆಪ್ಟೆಂಬರ್ 13) ಈ ರೋಚಕ ಘಟನೆ ನಡೆದಿದೆ. ಕೆಂಪನಪಾಳ್ಯ ಗ್ರಾಮದ ಮುದುಮಲೆ ಗುಡ್ಡದ ಸಮೀಪ ಚಿರತೆಯೊಂದು ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ ಒಂದು ಕುರಿಯನ್ನು ಎತ್ತುಕೊಂಡು ಹೋಗುತ್ತಿತ್ತು.

ಚಿರತೆ ಸೆರೆ: ಈ ವೇಳೆ ಕುರಿಗಾಯಿ ಮಂಜು ಎಂಬಾತ ಅದನ್ನು ಗಮನಿಸಿ ಬೆನ್ನಟ್ಟಿಕೊಂಡು, ಹೆದರಿಸಿದ ವೇಳೆ ಗಾಬರಿಗೊಂಡ ಚಿರತೆಯು ಕುರಿಯನ್ನು ಬಿಟ್ಟು ನೀರಿನ ಪೈಪಿನೊಳಗೆ ಸೇರಿಕೊಂಡಿದೆ. ಬದುಕಿದೆಯಾ ಬಡ ಜೀವವೇ ಎಂದು ಕುರಿಯನ್ನು ಕರೆತಂದಿದ್ದಾನೆ. ಬಳಿಕ, ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿ ಬೋನಿನ ಮೂಲಕ ಚಿರತೆ ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
2 ಹಸುಗಳ ರಕ್ತ ಹೀರಿದ ವ್ಯಾಘ್ರ: ಹಾಡಹಗಲೇ ಹುಲಿ ದಾಳಿ ಮಾಡಿ ಎರಡು ಹಸುಗಳನ್ನು ಬಲಿ ಪಡೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ವಡೆಯನಪುರ ಗ್ರಾಮದಲ್ಲಿ ನಡೆದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ವಡೆಯನಪುರ ಗ್ರಾಮದ ರವೀಶ್ ಎಂಬವರಿಗೆ ಸೇರಿದ ಹಸುಗಳು ಇವಾಗಿವೆ. ಮೇಯಲು ಬಿಟ್ಟಿದ್ದ ವೇಳೆ ರೈತನ ಎದುರೇ ಹಾಡಹಗಲು ಹುಲಿ 3 ಹಸುಗಳ ಮೇಲೆ ದಾಳಿ ಮಾಡಿದ್ದು ಎರಡು ಅಸುನೀಗಿದ್ದು, ಒಂದು ಹಸುವಿನ ಸ್ಥಿತಿ ಚಿಂತಾಜನಕವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ವಡೆಯನಪುರದಲ್ಲಿ ಚಿರತೆಯೊಂದು ಬೋನಿಗೆ ಸೆರೆಯಾಗಿತ್ತು. ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದ ರೈತರು ಈಗ ಹುಲಿ ದಾಳಿ ಕಂಡು ಬೆಚ್ಚಿಬಿದ್ದಿದ್ದಾರೆ. ಗ್ರಾಮದ ಸಮೀಪವೇ ಹುಲಿ ದಾಳಿ ನಡೆದಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟಿದ್ದಾರೆ. ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.












Click it and Unblock the Notifications