ಪುಂಡಾಟ ಮಾಡಿದ್ರೆ ಗಡಿಪಾರು ಗ್ಯಾರಂಟಿ; ಚಾಮರಾಜನಗರದಲ್ಲಿ ರೌಡಿಗಳಿಗೆ ಎಸ್ಪಿ ಖಡಕ್ ಎಚ್ಚರಿಕೆ
ಚಾಮರಾಜನಗರ, ಡಿಸೆಂಬರ್, 02: ಚಾಮರಾಜನಗರದ ಎಸ್ಪಿ ಕಚೇರಿಯಲ್ಲಿ ಭಾನುವಾರ (ಡಿಸೆಂಬರ್ 1) ಮಧ್ಯಾಹ್ನ 3 ಗಂಟೆಗೆ ರೌಡಿ ಪರೇಡ್ ನಡೆಸಲಾಯಿತು. ಈ ವೇಳೆ ಎಸ್ಪಿ ಡಾ. ಬಿ.ಟಿ.ಕವಿತಾ ಅವರು ಕೊಳ್ಳೇಗಾಲ ಮತ್ತು ಚಾಮರಾಜನಗರ ಉಪ ವಿಭಾಗದ ಠಾಣೆಗಳ ವ್ಯಾಪ್ತಿಯ 150ಕ್ಕೂ ಅಧಿಕ ಮಂದಿ ರೌಡಿಗಳ ವಿಚಾರಣೆ ನಡೆಸಿದರು.
ಸನ್ನಡತೆಯಿಂದ ಇದ್ದರೇ ರೌಡಿಶೀಟ್‌ನಿಂದ ತೆಗೆಯುತ್ತೇವೆ. ಪುಂಡಾಟ ಬಿಡಬೇಕು, ಇಲ್ಲದಿದ್ದರೇ ಗಡಿಪಾರು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಸೂಚಿಸಿದ ದಿನದಂದು ಬಂದು ಸಹಿ ಮಾಡಬೇಕು, ಪದೇಪದೇ ಗೈರಾಗುತ್ತಿದ್ದರೇ ರೌಡಿಶೀಟ್‌ನಿಂದ ತೆಗೆಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಇಬ್ಬರ ಬಂಧನ: ಅಕ್ರಮವಾಗಿ ಕೇರಳ ಲಾಟರಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೋಸ್ಟ್‌ನಲ್ಲಿ ನಡೆದಿದೆ. ಹಾಗಾದರೆ ಎಷ್ಟು ಲಾಟರಿಗಳು ಹಾಗೂ ಇದರ ಮೌಲ್ಯ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ನಿವಾಸಿ ವೆಂಕಟೇಶ್ ಹಾಗೂ ಹಂಗಳದ ನಾಗರಾಜು ಬಂಧಿತ ಆರೋಪಿಗಳು. ಕೇರಳದಿಂದ ಅಕ್ರಮವಾಗಿ ಲಾಟರಿ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗುಂಡ್ಲುಪೇಟೆ ಪೊಲೀಸರು 2,14,610 ಮೌಲ್ಯದ 5,319 ಲಾಟರಿ ಟಿಕೆಟ್‌ಗಳು ಹಾಗೂ ಬಂಧಿತರ ಬಳಿಯಿದ್ದ 1,500 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇನ್ನೂ ಈ ಬಗ್ಗೆ ಇಬ್ಬರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಹಂದಿ ಮಾಂಸ ಸಂಗ್ರಹ: ತೋಟದ ಮನೆಯಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸ ಶೇಖರಣೆ ಮಾಡಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ ಹಾಗೂ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ತಮಿಳುನಾಡು ಮೂಲದ ಕಾರ್ತಿಕ್ ಪೆರುಮಾಳ್, ತಂಗರಾಜು ಪೆರುಮಾಳ್, ಮಾದೈಯನ್ ಪಳನಿ, ಗೋಪಿನಾಥಂ ಗ್ರಾಮದ ತಂಗರಾಜು ಬಂಧಿತ ಆರೋಪಿಗಳಾಗಿದ್ದಾರೆ.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಉಪ ವಿಭಾಗದ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಅರಣ್ಯ ಅಧಿಕಾರಿ ಕಾಂತರಾಜು ಎಸ್.ಚೌಹಾಣ್ ಹಾಗೂ ಸಿಬ್ಬಂದಿ ಗಸ್ತಿನಲ್ಲಿದ್ದರು. ಈ ವೇಳೆ ಪೊನ್ನಾಚಿ ಗ್ರಾಮದ ಪಿ.ಕೆ.ಬಸವರಾಜು ಅವರ ತೋಟದ ಮನೆಯಲ್ಲಿ ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಕತ್ತರಿಸಿ ಸಂಗ್ರಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಲೆ ಮಹದೇಶ್ವರ ವನ್ಯಜೀವಿ ಉಪ ವಿಭಾಗದ ಎಸಿಎಫ್ ಶಿವರಾಮು ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳು ಹಾಗೂ ಹಂದಿ ಮಾಂಸವನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications