ಹನೂರು: ಜೊತೆಯಲ್ಲೇ ತೇರು ಎಳೆದು ಭಾವೈಕ್ಯತೆ ಸಾರಿದ ಕನ್ನಡಿಗರು & ತಮಿಳಿಗರು
ಚಾಮರಾಜನಗರ, ನವೆಂಬರ್, 28: ರಥೋತ್ಸವ ಎಂದರೆ ಸಂಭ್ರಮ, ಸಡಗರವಷ್ಟೇ ಅಲ್ಲ. ಭಾವೈಕ್ಯತೆ ಸಾರುವ ಹಬ್ಬವೂ ಹೌದು ಎಂಬುದಕ್ಕೆ ಕರ್ನಾಟಕದ ಗಡಿಯಲ್ಲಿರುವ ತಮಿಳುನಾಡಿನ ಗೇರುಮಾಳದಲ್ಲಿ ಇಂದು ನಡೆದ ರಥೋತ್ಸವವೇ ಸಾಕ್ಷಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಗಡಿಯಲ್ಲಿರುವ ತಮಿಳುನಾಡಿನ ಸತ್ಯಮಂಗಲ ತಾಲೂಕಿನ ಗೇರುಮಾಳ ಗ್ರಾಮದಲ್ಲಿರುವ ಜಡೇರುದ್ರಸ್ವಾಮಿ ದೇಗುಲದಲ್ಲಿ ಇಂದು ರಥೋತ್ಸವ ನಡೆದಿದ್ದು, ಕನ್ನಡಿಗರು ಮತ್ತು ತಮಿಳುರು ಸೇರಿ ಎಳೆಯುವ ತೇರು ಇದಾಗಿದೆ.

ಈ ರಥೋತ್ಸವದಲ್ಲಿ ತಮಿಳುನಾಡಿನ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಹಾಗೆಯೇ ಈ ಧಾರ್ಮಿಕ ಕಾರ್ಯದಲ್ಲಿ ಕನ್ನಡಿಗರೂ ಪಾಲ್ಗೊಂಡಿದ್ದಾರೆ. ತಮಿಳುನಾಡಿನ ಗಡಿಯಲ್ಲಿರುವ ಚಾಮರಾಜನಗರ ಮಾತ್ರವಲ್ಲದೆ, ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗಳ ಜನರೂ ಗೇರುಮಾಳದ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಮತ್ತೊಂದು ವಿಶೇಷವೇನೆಂದರೆ ಈ ಜಾತ್ರೆಯಲ್ಲಿ ಕನ್ನಡಿಗರು ಮತ್ತು ತಮಿಳಿಗರು ಸಮಾಗಮ ಆಗುವುದಲ್ಲದೇ, ಟಿಬೇಟಿಯನ್ನರೂ ಜೊತೆಗೂಡಿದ್ದು, ಒಡೆಯರಪಾಳ್ಯ ಟಿಬೆಟಿಯನ್ ನಿರಾಶ್ರಿತ ಕೇಂದ್ರದ ಟಿಬೇಟಿಯನ್ನರು ರಥೋತ್ಸವವನ್ನು ಕಣ್ತುಂಬಿಕೊಂಡಿದ್ದಾರೆ.
ಕನ್ನಡಿಗರು ಮತ್ತು ತಮಿಳಿಗರು ಕಟ್ಟಿದ ತೇರು
ಗೇರುಮಾಳದ ಜಡೆರುದ್ರಸ್ವಾಮಿ ತೇರು ಕನ್ನಡಿಗರು ಮತ್ತು ತಮಿಳಿಗರು ಸೇರಿ ಕಟ್ಟಿದ್ದಾರೆ. ರಥೋತ್ಸವದ ಹಿಂದಿನ ದಿನವಾದ ಸೋಮವಾರ ದೇಗುಲಕ್ಕೆ ಟಿಬೇಟಿಯನ್ನರು ಭೇಟಿ ನೀಡಿ ಹಿಂದೂ ಧಾರ್ಮಿಕ ಸಂಪ್ರದಾಯ, ಆಚರಣೆಗಳನ್ನು ನೋಡಿದರು. ಕನ್ನಡಿಗರು ಮತ್ತು ತಮಿಳಿಗರು ರಥ ಕಟ್ಟುವ ಕೆಲಸ ಮಾಡಿದರು. ಹೀಗೆ ಇಬ್ಬರೂ ಸೇರಿ ಕಟ್ಟಿದ ರಥವನ್ನು ಇಂದು ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಜಾತ್ರೆ ಸಂಪನ್ನ ಮಾಡಿದ್ದಾರೆ. ಕನ್ನಡಿಗರು ಮತ್ತು ತಮಿಳಿಗರು ಒಟ್ಟುಗೂಡಿ ತೇರು ಎಳೆಯುವುದು ಇಲ್ಲಿನ ವಿಶೇಷವಾಗಿದೆ.
ಬೇರೆ ರಾಜ್ಯ, ಅನ್ಯ ಭಾಷಿಕರೆಂಬ ಕಾರಣಕ್ಕೆ ಇಲ್ಲಿನ ಜನರಲ್ಲಿ ಮೂಡುವ ಕಂದಕವನ್ನು ಜಾತ್ರೆ ಹೋಗಲಾಡಿಸಿ, ಅದರಲ್ಲೂ ತಮಿಳುನಾಡಿನಲ್ಲಿ ನಡೆಯುವ ಜಾತ್ರೆಯಲ್ಲಿ ಕನ್ನಡಿಗರು ಸಂತೋಷದಿಂದ ಭಾಗವಹಿಸುವುದು ಸ್ನೇಹ ಸೌದಾರ್ಹತೆಗೆ ಉದಾರಣೆ ಎನ್ನಬಹುದು.
ಸ್ವರ್ಗದ ಸೌಂದರ್ಯ ಬಿಚ್ಚಿಡುವ ಕುಂದಬೆಟ್ಟ
ಬೆಟ್ಟಗುಡ್ಡ ಹತ್ತುವ ಸಾಹಸಪ್ರಿಯರಿಗಾಗಿಯೇ ಕೊಡಗಿನಲ್ಲಿ ಹತ್ತಾರು ಬೆಟ್ಟಗಳಿವೆ. ಅವುಗಳನ್ನೇರಲು ಇದು ಸಕಾಲವಾಗಿದೆ. ಇಡೀ ನಿಸರ್ಗವೇ ಹಸಿರಿನಿಂದ ತುಂಬಿದ್ದು, ಅದರ ನಡುವೆ ಬೆಟ್ಟಗುಡ್ಡಗಳನ್ನೇರುವುದು ಒಂಥರಾ ಮಜಾ.
ಕೊಡಗಿನಲ್ಲಿ ಹತ್ತು ಹಲವು ಬೆಟ್ಟಗಳಿದ್ದು, ಎಲ್ಲವೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿವೆ. ಮತ್ತು ಇವು ದೈವಿಕ ತಾಣವಾಗಿಯೂ ಗಮನಸೆಳೆಯುತ್ತವೆ. ಇಂತಹ ಬೆಟ್ಟಗಳ ನಡುವೆ ದಕ್ಷಿಣ ಕೊಡಗಿನಲ್ಲಿದ್ದು, ಪೊನ್ನಂಪೇಟೆ ತಾಲೂಕಿಗೆ ಸೇರಿರುವ ಕುಂದಬೆಟ್ಟ ಕೂಡ ಪ್ರವಾಸಿಗರ ಸೆಳೆಯುತ್ತಿದ್ದು, ಸಾಹಸಪ್ರಿಯರಿಗೆ ಚಾರಣ ತಾಣವಾಗಿಯೂ, ಭಕ್ತಾದಿಗಳಿಗೆ ಪವಿತ್ರ ತಾಣವಾಗಿಯೂ ಗಮನಸೆಳೆಯುತ್ತಿದೆ.
ಕುಂದಬೆಟ್ಟವು ಕೊಡಗಿನ ಪ್ರಮುಖ ಪಟ್ಟಣ ಮಡಿಕೇರಿಯಿಂದ 60 ಕಿಲೋ ಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಮೂರು ಸಾವಿರದ ಇನ್ನೂರು ಅಡಿ ಎತ್ತರವಿರುವ ಈ ತಾಣ ತನ್ನ ಸ್ನಿಗ್ಧ ಸೌಂದರ್ಯದಿಂದ ಜನರನ್ನು ಬೆರಗುಗೊಳಿಸುವುದರಲ್ಲಿ ಎರಡು ಮಾತಿಲ್ಲ. ಈ ಬೆಟ್ಟವನ್ನೇರುವುದೇ ಮರೆಯಲಾಗದ ಒಂದು ಅನುಭವ.
ಕೊಡವ ಭಾಷೆಯಲ್ಲಿ "ಕುಂದ್" ಎಂಬ ಪದವು ಬೆಟ್ಟ ಎಂಬ ಅರ್ಥವನ್ನು ನೀಡುತ್ತದೆ. ಬೆಟ್ಟವೊಂದು ಗ್ರಾಮದ ಹೃದಯ ಭಾಗದಲ್ಲಿ ಮೈದಾಳಿ ನಿಂತಿದ್ದರಿಂದಲೋ ಏನೋ ಈ ಗ್ರಾಮವನ್ನು ಕುಂದವೆಂದೇ ಕರೆಯುತ್ತಾರೆ. ಗ್ರಾಮದ ಕಣ್ಮಣಿಯೇ ಕುಂದಬೆಟ್ಟ. ಕಲು, ಮುಳ್ಳು ಅಂಕುಡೊಂಕಿನ ಹಾದಿಯ ಮೂಲಕ ಈ ಬೆಟ್ಟವನ್ನೇರುವುದು ಅಷ್ಟು ಸುಲಭವಲ್ಲ.
ಬೆಟ್ಟವನ್ನೇರುತ್ತಾ ಹೋದಂತೆಲ್ಲ ಸುತ್ತಲೂ ಹಸಿರನ್ನೊದ್ದು ಕುಳಿತ ಪರಿಸರ, ಬೀಸುವ ತಂಗಾಳಿ, ಬೆಟ್ಟವನ್ನೇರಲು ಹುರುಪು ನೀಡುತ್ತವೆ. ಬೆಟ್ಟದ ಮೇಲ್ಭಾಗವನ್ನು ತಲುಪಿ ಅಲ್ಲಿ ಒಂದು ಕ್ಷಣ ನಿಂತು ಸುತ್ತಲೂ ದೃಷ್ಟಿ ಹರಿಸಿದರೆ ಬೆಟ್ಟಗಳನ್ನೆಲ್ಲ ಒತ್ತೊತ್ತಾಗಿ ಜೋಡಿಸಿಟ್ಟಂತೆ ಕಾಣಬರುವ ಸುಂದರ ನೋಟ ನೋಡುಗನ ಮೈಮನ ತಣಿಸುತ್ತದೆ.
ದೂರದಲ್ಲಿ ಹರಡಿಕೊಂಡಿರುವ ಪರ್ವತ ಶ್ರೇಣಿಗಳು. ಹಸಿರನ್ನೊಳಗೊಂಡು ಗುಂಪುಗುಂಪಾಗಿ ಕಂಡು ಬರುವ ಕಾನನಗಳು. ಕಾಫಿ ತೋಟಗಳು. ಗದ್ದೆಯ ಬಯಲುಗಳು ಸೇರಿದಂತೆ ಪ್ರಕೃತಿಯ ವಿಹಂಗಮ ನೋಟ ಖುಷಿ ಕೊಡುತ್ತದೆ. ಎಲ್ಲೆಂದರಲ್ಲಿ ಹಸಿರನ್ನು ಚೆಲ್ಲಿದ ದೃಶ್ಯ ಪಟ್ಟಣದ ಜಂಜಾಟದಲ್ಲಿ ತೊಡಗಿಸಿಕೊಂಡವರಿಗೆ ಹೊಸ ಅನುಭವ ನೀಡುತ್ತದೆ.
ಇನ್ನು ಕುಂದಬೆಟ್ಟ ಚಾರಣಿಗರ ಮನ ತಣಿಸುವ ತಾಣ ಮಾತ್ರವಾಗಿರದೇ, ಪವಿತ್ರ ಕ್ಷೇತ್ರವೂ ಇದಾಗಿದೆ. ಇಲ್ಲಿ ಬೊಟ್ಲಪ್ಪ ಈಶ್ವರ ದೇವಾಲಯ, ಭೀಮ ಕಲ್ಲು, ದೇರಟೆ ಕಲ್ಲು, ನರಿಗುಡ್ಡೆ ಮೊದಲಾದ ವೀಕ್ಷಣಾರ್ಹ ಸ್ಥಳಗಳಿವೆ. ಇಲ್ಲಿರುವ ಬೊಟ್ಲಪ್ಪ ಈಶ್ವರ ದೇವಾಲಯ ಪುರಾತನದಾಗಿದ್ದು, ಈ ದೇವಾಲಯ ಹೇಗೆ ನಿರ್ಮಿತವಾಯಿತು ಎಂಬುದಕ್ಕೊಂದು ದಂತ ಕಥೆಯಿದೆ.
ವನವಾಸಕ್ಕೆ ತೆರಳಿದ ಪಾಂಡವರು ಕುಂದಬೆಟ್ಟಕ್ಕೆ ಬಂದಿದ್ದರಂತೆ. ಈ ಸಂದರ್ಭದಲ್ಲಿ ಒಂದೇ ರಾತ್ರಿಯಲ್ಲಿ ಭೀಮನು ಕಲ್ಲು ಹೊತ್ತು ತಂದು ದೇವಾಲಯವನ್ನು ಕಟ್ಟಿದನೆಂದೂ ಕೆಲಸ ಸಂಪೂರ್ಣ ಮುಗಿಯುವ ವೇಳೆಗೆ ಬೆಳಗಾದುದರಿಂದ ದೇವಾಲಯಕ್ಕೆ ಬಾಗಿಲು ನಿರ್ಮಿಸಲಿಕ್ಕಾಗಲಿಲ್ಲವಂತೆ. ಆದರೆ ಕೆಲವರ ಅಭಿಪ್ರಾಯದ ಪ್ರಕಾರ ಈ ದೇವಾಲಯವು ಕೊಡಗು ರಾಜರ ಕಾಲದಲ್ಲಿ ನಿರ್ಮಿತವಾಗಿದೆ ಎಂದು ಹೇಳಲಾಗುತ್ತಿದೆ.
ಈ ಮಾತಿಗೆ ಪೂರಕ ಎನ್ನುವಂತೆ ಶಿಲಾಸನದಲ್ಲಿ "ಮನೆಯ ಪಂಡ ಸಂಬ್ರಾಯ" ಎಂಬ ಹೆಸರಿರುವುದು ಕಂಡು ಬರುತ್ತದೆ. ಅದೇನೇ ಇರಲಿ ಈ ದೇವಾಲಯದ ಅಧಿದೇವತೆಯೂ ಆದ ಈಶ್ವರ ಸುತ್ತ ಮುತ್ತಲ ಗ್ರಾಮದ ರಕ್ಷಕನಾಗಿದ್ದಾನೆ.
ದೇವಾಲಯದ ಮುಂದೆ ಬೃಹತ್ ಶಿಲಾ ಬಂಡೆಯೊಂದು ಹರಡಿಕೊಂಡಿದ್ದು, ಈ ಬಂಡೆಯ ತುದಿಯಲ್ಲಿ ಒಂದು ಉಬ್ಬು ಕಲ್ಲಿದ್ದು ಇದರ ಮೇಲೆ ನಿಂತು ಮೂರು ಸುತ್ತು ಸುತ್ತಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆಯೆಂಬ ಪ್ರತೀತಿಯಿದೆ. ಹಿಂದೆ ಸುಬ್ರಹ್ಮಣ್ಯ ಸ್ವಾಮಿಯ ನವಿಲು ಈ ಕಲ್ಲಿನ ಮೇಲೆ ನಾಟ್ಯವಾಡಿತ್ತೆಂದೂ ಆದುದರಿಂದಲೋ ಏನೋ ಈ ಕಲ್ಲನ್ನು ದೇರಟೆಕಲ್ಲು ಎಂದು ಕರೆಯುತ್ತಾರೆ.
ದೇರಟೆ ಕಲ್ಲಿನ ವಿಶೇಷತೆ ಹಾಗಿದ್ದರೆ ದೇವಾಲಯದ ಹಿಂಭಾಗದಲ್ಲಿ ಮತ್ತೊಂದು ಬೃಹತ್ ಕಲ್ಲು ಕಂಡು ಬರುತ್ತದೆ. ಇದನ್ನು ಭೀಮನ ಕಲ್ಲು ಎಂದೇ ಕರೆಯುತ್ತಾರೆ. ಬೊಟ್ಲಪ್ಪ ಈಶ್ವರ ದೇವಾಲಯವನ್ನು ನಿರ್ಮಿಸುತ್ತಿದ್ದ ಸಂದರ್ಭ ಭೀಮನೇ ಆ ಬೃಹತ್ ಕಲ್ಲನ್ನು ಹೊತ್ತು ತಂದು ಅಲ್ಲಿಟ್ಟನಂತೆ. ಈ ಕಲ್ಲಿನಲ್ಲಿ ಕಾಲಿನ ಮಂಡಿಯ ಮತ್ತು ಕೈಬೆರಳುಗಳ ಗುರುತು ಕಂಡು ಬರುತ್ತದೆ.












Click it and Unblock the Notifications