Four lane Road: ಹನೂರು- ಮಲೆ ಮಹದೇಶ್ವರ ಬೆಟ್ಟದರೆವೆಗೆ ಚತುಷ್ಪಥ ರಸ್ತೆ ನಿರ್ಮಾಣದಿಂದ ವೆಚ್ಚ ಎಷ್ಟು ಹಾಗೂ ಪ್ರಯೋಜನಗಳೇನು?
Four lane Road: ಹಲವು ಜಿಲ್ಲೆಗಳಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಹಾಗೆಯೇ ಇದೀಗ ಹನೂರು-ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹನೂರು-ಮಹದೇಶ್ವರ ಬೆಟ್ಟದವರೆಗೆ ಚತುಷ್ಟಥ ರಸ್ತೆ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು. ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಲಿದ್ದಾರೆ. ಇನ್ನು ಈ ಮಾರ್ಗದಲ್ಲಿ ಜಾತ್ರಾ ಮಹೋತ್ಸವ ಹಾಗೂ ಹಬ್ಬಗಳ ಸಂದರ್ಭಗಳಲ್ಲು ಅಪಘಾತಗಳು ನಡೆಯುತ್ತಲೇ ಇವೆ. ಇದನ್ನು ತಡೆಯುವ ಸಲುವಾಗಿ ಹನೂರು-ಮಲೆ ಮಹದೇಶ್ವರ ಬೆಟ್ಟದ ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಭಕ್ತಾದಿಗಳಿಗೆ ತುಂಬಾ ಅನುಕೂಲ ಆಗಲಿದೆ ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ-ಹನೂರು ಪಟ್ಟಣದವರೆಗೆ 108 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ರಸ್ತೆ ಅಭಿವೃದ್ಧಿ ಮಾಡಲಾಗಿದೆ. 2ನೇ ಹಂತದಲ್ಲಿ ಹನೂರು ಪಟ್ಟಣದಿಂದ ಪಾಲಾರ್‌ವರೆಗೆ ರಸ್ತೆ ಅಭಿವೃದ್ಧಿ ಮಾಡಲು ಈಗಾಗಲೇ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಅನುಮೋದನೆ ಸಿಕ್ಕ ಬಳಿಕವೇ ತರ ಕಾಮಗಾರಿ ಪ್ರಾರಂಭ ಆಗಲಿದೆ ಎಂದು ಹೇಳಿದರು.
ಪ್ರಾಧಿಕಾರದಿಂದ ಮಹತ್ವದ ನಿರ್ಧಾರ: ದೇಶದಲ್ಲಿ ತುಂಬಾ ಹೆದ್ದಾರಿಗಳಿವೆ. ಇದರಲ್ಲೂ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಎಂಬ ವಿಧಗಳಿವೆ. ಈ ರಸ್ತೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಬಿಡಾಡಿ ದನಗಳಿಂದ ಇಂತಹ ಪ್ರಕರಣಗಳು ಹೆಚ್ಚೆಚ್ಚು ಸಂಭವಿಸಿವೆ ಎನ್ನುವ ಬಗ್ಗೆ ವರದಿಯಾಗಿದ್ದವು. ಇದೀಗ ಇವುಗಳನ್ನು ನಿಯಂತ್ರಣಕ್ಕೆ ತರಲು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡಾಡಿ ದನಗಳಿಂದ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಹೆದ್ದಾರಿ ಬದಿಯಲ್ಲಿ ಪ್ರಾಯೋಗಿಕವಾಗಿ ಗೋಶಾಲೆ ತೆರೆಯಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಬಿಡಾಡಿ ದನಗಳ ಹಾವಳಿಯಿಂದ ಪ್ರಯಾಣಿಕರ ಸುಗಮ ಸಂಚಾರಕ್ಕೆ ತುಂಬಾ ತೊಂದರೆ ಆಗಿರುವ ಉದಾಹರಣೆಗಳಿವೆ. ದನಗಳು ಹಾಗೂ ಇತರೆ ಪ್ರಾಣಿಗಳಿಂದ ವಾಹನಗಳ ಸಂಚಾರಕ್ಕೆ ಆಗುತ್ತಿರುವ ತೊಂದರೆಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಂಗಳವಾರ (ಡಿಸೆಂಬರ್ 24) ತಿಳಿಸಿದೆ.
0.1ರಿಂದ 20.29 ಹೆಕ್ಟೇರ್ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುತ್ತದೆ. ದೇಶದ ಎಲ್ಲಾ ಹೆದ್ದಾರಿಗಳ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುತ್ತದೆ. ಪ್ರಾರಂಭದಲ್ಲಿ ಉತ್ತರಪ್ರದೇಶದ ಅಥವಾ ಹರಿಯಾಣದ ಗಡಿ ಭಾಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 334ಬಿ ವ್ಯಾಪ್ತಿಯಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಕುರಿತು ಗವಾರ್ ಕನ್‌ಕ್ಟ್ರಕ್ಷನ್ ಕಂಪನಿ ಜೊತೆಗೆ ಒಡಂಬಡಿಕೆ ಸಹಿ ಹಾಕಲಾಗಿದೆ ಎಂದು ತಿಳಿಸಿದೆ. ಇನ್ನು ಈ ಗೋಶಾಲೆಗಳಲ್ಲಿ ತುರ್ತು ಚಿಕಿತ್ಸೆ, ಮೇವು, ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೆ, ಅವುಗಳ ಆರೋಗ್ಯದ ಮೇಲೆ ನಿಗಾ ಇಡಲು ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದೆ.












Click it and Unblock the Notifications