ಸೀಮೆಎಣ್ಣೆ ಸುರಿದುಕೊಂಡು ಮಗುವಿನ ಸಮೇತ ತುಂಬು ಗರ್ಭಿಣಿ ಆತ್ಮಹತ್ಯೆ
ಚಾಮರಾಜನಗರ, ಏಪ್ರಿಲ್ 25:ತುಂಬು ಗರ್ಭಿಣಿಯೋರ್ವಳು ಎರಡು ವರ್ಷದ ಮಗುವಿನ ಮೇಲೆ ಸೀಮೆಎಣ್ಣೆ ಸುರಿದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೂರ್ವ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಮರಾಜನಗರದ ದೊಡ್ಡ ಮೋಳೆ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.ಗ್ರಾಮದ ಸೋಮಶೇಖರ್ ಎಂಬುವವರ ಪತ್ನಿ ಮಹಾಲಕ್ಷ್ಮಿ(25) ಹಾಗೂ ಎರಡುವರೆ ವರ್ಷದ ಮಗು ಪ್ರಣತಿ ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ.
ಮಹಾಲಕ್ಷ್ಮಿಗೆ ನಾಲ್ಕು ವರ್ಷದ ಹಿಂದೆ ದೊಡ್ಡ ಮೋಳೆ ಗ್ರಾಮದ ಸೋಮಶೇಖರನಿಗೆ ವಿವಾಹ ಮಾಡಿಕೊಡಲಾಗಿತ್ತು.ದಿನನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಎಂದು ಮನನೊಂದು ಈಕೆ ಬುಧವಾರ (ಏ.24) ಸಂಜೆ ಸೀಮೆಎಣ್ಣೆ ಸುರಿದುಕೊಂಡು ಮಗು ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಗಂಡ ಸೋಮಶೇಖರ್ ಹಾಗೂ ಅತ್ತೆ- ಮಾವ ಪರಾರಿಯಾಗಿದ್ದಾರೆ. ಇವರ ಪತ್ತೆಗಾಗಿ ಪೂರ್ವ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಲು ಬಲೆ ಬೀಸಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.












Click it and Unblock the Notifications