Odisha Train Accident: ರೈಲು ದುರಂತದಲ್ಲಿ ಸಿಲುಕಿದ್ದ ಗುಂಡ್ಲುಪೇಟೆಯ ಇಬ್ಬರು ಯುವಕರು ಸೇಫ್
ಚಾಮರಾಜನಗರ, ಜೂನ್, 04: ಒಡಿಶಾ ರೈಲು ದುರಂತದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಇಬ್ಬರು ಯುವಕರು ಸಿಲುಕಿಕೊಂಡಿದ್ದು, ಅವರು ಇದೀಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಮಾಹಿತಿ ತಿಳಿದುಬಂದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಮಹೇಶ್ ಹಾಗೂ ಪವನ್ ಎಂಬ ಯುವಕರು ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಸದ್ಯ ಅವರಿಗೆ ಯಾವುದೇ ಹಾನಿ ಆಗಿಲ್ಲ ಎಂದು ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಈ ಯುವಕರು ತವರಿಗೆ ಮರಳಲು ರೈಲು ಇಲ್ಲದೇ ಪ್ರಯಾಸ ಪಡುತ್ತಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಜನರನ್ನು ಕರೆತರಲು ಹೋಗಿರುವ ಸಚಿವ ಸಂತೋಷ್ ಲಾಡ್ ಅವರೊಟ್ಟಿಗೆ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಯುವಕರಿಗೆ ನೆರವು ಕೊಡಿಸಿ, ಹಣವನ್ನು ನೆಟ್ ಬ್ಯಾಂಕಿಂಗ್ ಮೂಲಕ ರವಾನಿಸಿ ಪರ್ಯಾಯ ಮಾರ್ಗದಲ್ಲಿ ರಾಜ್ಯಕ್ಕೆ ಹಿಂತಿರುಗುವಂತೆ ಸಲಹೆ ಕೊಟ್ಟಿದ್ದಾರೆ.
ಈ ಇಬ್ಬರು ಯುವಕರು ಸೇನೆಯ ಪರೀಕ್ಷೆ ಬರೆಯಲು ತೆರಳಿದ್ದರು ಎಂದು ತಿಳಿದುಬಂದಿದೆ. ಯುಕವರು ಅಪಘಾತವಾದ ರೈಲಿನಲ್ಲೇ ಇದ್ದು, ಇವರಿಗೆ ಶಾಸಕ ಗಣೇಶ್ ಪ್ರಸಾದ್ ತುರ್ತಾಗಿ ಸ್ಪಂದಿಸಿ ನೆರವಾಗಿದ್ದಾರೆ. ಅಪಘಾತ ನಡೆದ ಸ್ಥಳದಿಂದ 100 ಕಿಲೋ ಮೀಟರ್ ದೂರದಲ್ಲಿ ಈಗ ಬಂದಿದ್ದು, ಆದಷ್ಟು ಬೇಗ ಮನೆಗೆ ತಲುಪುವ ಭರವಸೆ ಇದೆ ಎಂದು ಮಹೇಶ್ ಅವರ ತಂದೆ ಮಹಾದೇವನಾಯ್ಕ ಮಾಹಿತಿ ನೀಡಿದ್ದಾರೆ.
ಇನ್ನು ಯುವಕರು ಮಾತನಾಡಿದ್ದು, ನಾವು ಸೇನೆಯ ಪರೀಕ್ಷೆ ಬರೆಯಲು ಬಂದಿದ್ದೆವು. ರೈಲುಗಳು ರದ್ದಾಗಿದ್ದು, ಬೇರೆ ಮಾರ್ಗದಲ್ಲಿ ರಾಜ್ಯವನ್ನು ತಲುಪಬೇಕಿದೆ. ಶಾಸಕ, ಸಚಿವರು ನಮಗೆ ಅಭಯ ನೀಡಿದ್ದಾರೆ. ಅಲ್ಲದೆ ದುರಂತದ ಕ್ಷಣಗಳು ಇನ್ನೂ ನಮ್ಮ ಕಣ್ಣಮುಂದೆಯೇ ಇದೆ ಎಂದು ಯುವಕ ಮಹೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ
ಇನ್ನು ಒಡಿಶಾದ ಬಾಲಸೋರ್‌ನಲ್ಲಿ ರೈಲು ಅಪಘಾತ ನಡೆದ ಸ್ಥಳಕ್ಕೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಮೋದಿ ಕಟಕ್‌ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿಯಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮೋದಿ ಅವರು ಸ್ಥಳವನ್ನು ಪರಿಶೀಲಿಸಿದರು.
ಭುವನೇಶ್ವರದಿಂದ ಉತ್ತರಕ್ಕೆ 170 ಕಿಮೀ ದೂರದಲ್ಲಿರುವ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ ಘಟನೆ ನಡೆದ ಸ್ಥಳದ ಬಳಿ ಪ್ರಧಾನಿ ಮೋದಿ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ವಿಕ್ಷೀಸಿದರು. ನಂತರ ಅಪಘಾತದಲ್ಲಿ ಗಾಯಗೊಂಡು ಬದುಕುಳಿದವರನ್ನು ಭೇಟಿ ಮಾಡಲು ಅವರು ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಲಿದ್ದರು.
ಮೊನ್ನೆ ರಾತ್ರಿ ನಡೆದ ದುರಂತರದಲ್ಲಿ ಈವರೆಗೂ 280ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಪರಿಶೀಲಿಸಲು ನಿನ್ನೆ ಮುಂಜಾನೆ ಪ್ರಧಾನಿ ಮೋದಿ ಸಭೆ ಕರೆದಿದ್ದರು.
ಇನ್ನು ಶುಕ್ರವಾರ ಸಂಜೆ 7 ಗಂಟೆಗೆ ಬಾಲಸೋರ್‌ನಲ್ಲಿ ರೈಲಿನ ಒಂದು ಬೋಗಿ ಹಳಿತಪ್ಪಿದ ನಂತರ ಮೂರು ರೈಲುಗಳು ಡಿಕ್ಕಿ ಹೊಡೆದವು. ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ. ಹಾಗೆಯೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದರು. ನಂತರ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿಯಾಗಿದ್ದರು. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ನಿನ್ನೆ ಬೆಳಿಗ್ಗೆ ಬಾಲಸೋರ್‌ಗೆ ಭೇಟಿ ನೀಡಿದ್ದಾರೆ. ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು.












Click it and Unblock the Notifications