ಗುಂಡ್ಲುಪೇಟೆ: ತಿಂಗಳಾದರೂ ಕುಡಿಯಲು ನೀರಿಲ್ಲ ಎಂದು ಖಾಲಿ ಕೊಡ ಹಿಡಿದು ಪ್ರತಿಭಟನೆ
ಚಾಮರಾಜನಗರ, ಮಾರ್ಚ್, 17: ಕುಡಿಯುವ ನೀರು ಸರಬರಾಜು ಮಾಡಿ ತಿಂಗಳಾದ ಹಿನ್ನೆಲೆ ಮಹಿಳೆಯರು ಖಾಲಿ ಕೊಡ ಹಿಡಿದು ಆಕ್ರೋಶ ಹೊರ ಹಾಕಿರುವ ಘಟನೆ ಕರ್ನಾಟಕ ಗೃಹ ಮಂಡಳಿ ಕಾಲೋನಿಯಲ್ಲಿ ಭಾನುವಾರ (ಮಾರ್ಚ್ 17) ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಗೃಹ ಮಂಡಳಿ ಕಾಲೋನಿಯಲ್ಲಿ ತಿಂಗಳಿನಿಂದಲೂ ಕಬಿನಿ ನೀರು ಸರಬರಾಗುತ್ತಿಲ್ಲ. ಇದರಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಬಟ್ಟೆ, ಪಾತ್ರೆ, ಸ್ನಾನ ಸೇರಿದಂತೆ ಇನ್ನಿತರ ದಿನ ಬಳಕೆಗೆ ನೀರಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ ಎಂದು ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಪಂಚಾಯಿತಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ನೀರು ಪೂರೈಕೆಯಾಗದ ಕಾರಣ ಖಾಸಗಿ ಟ್ಯಾಂಕರ್‌ಗಳಲ್ಲಿ ದುಪ್ಪಟ್ಟು ಹಣ ನೀಡಿ ಕೊಂಡುಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ದುಡಿದ ಹಣವನ್ನು ಬಹುಪಾಲು ನೀರು ಖರೀದಿಗೆ ವ್ಯಯ ಮಾಡಬೇಕಾಗಿದೆ. ಇದು ಹೀಗೆ ಮುಂದುವರೆದರೆ ಊಟ ತಿಂಡಿಗೂ ಕೂಡ ಕಷ್ಟ ಪಡಬೇಕಾದ ಪರಿಸ್ಥಿತಿ ಬಂದೊದಗಲಿದೆ. ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯತಿ ಪಿಡಿಓ ಕೂಡಲೇ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.
ಈ ಕುರಿತು ನೇನೇಕಟ್ಟೆ ಗ್ರಾ.ಪಂ. ಪಿಡಿಓ ಶಿವಸ್ವಾಮಿ ಪ್ರತಿಕ್ರಿಯೆ ನೀಡಿ, ದಿನಬಳಕೆ ಗೃಹ ಮಂಡಳಿಗೆ ಪ್ರತ್ಯೇಕವಾಗಿ ಬೋರ್ ಕೊರೆಸಲು ಸಿದ್ಧತೆ ನಡೆಸಲಾಗಿದೆ. ಕೂಡಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳೆಯರಾದ ಸುಧಾ, ಪ್ರಿಯಾ, ರಮ್ಯ, ದಿವ್ಯಾ, ಚೇತನ್, ಕೆಂಪಣ್ಣ ಸೇರಿದಂತೆ ಕರ್ನಾಟಕ ಗೃಹ ಮಂಡಳಿಯ ನಿವಾಸಿಗಳು ಹಾಜರಿದ್ದರು.
ಮೂಲಸೌಲಭ್ಯ ಕೊಡದಿದ್ರೆ ಮತ ಕೇಳ್ಬೇಡಿ: ಮೂಲಸೌಕರ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಇಂಡಿಗನತ್ತ ಗ್ರಾಮಸ್ಥರು ಇಂದು (ಮಾರ್ಚ್ 14) ಸಭೆ ಸೇರಿ ಮೂಲಭೂತ ಸೌಲಭ್ಯ ನೀಡಿ. ಇಲ್ಲದಿದ್ದರೇ ಮತ ಕೇಳಲು ಬರಬೇಡಿ, ನಾವು ವೋಟು ಹಾಕುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ಮುಖಂಡ ಪುಟ್ಟ ತಂಬಡಿ ಎಂಬವರು ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ನಾಗಮಲೆ, ಇಂಡಿಗನತ್ತ, ತೋಕೆರೆ, ಪಡಸಲನತ್ತ ಮೆಂದಾರೆ, ತೇಕಾಣೆ ಗ್ರಾಮಗಳಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲಂದತಾಗಿದೆ.
ರಸ್ತೆ ಇಲ್ಲಾ, ವಿದ್ಯುತ್ ಇಲ್ಲಾ, ಕುಡಿಯುವ ನೀರಿನ ಸೌಲಭ್ಯವಿಲ್ಲ. ಖಾಸಗಿ ಜೀಪ್‌ಗಳಲ್ಲಿ ಬರುತ್ತಿದ್ದೆವು. ಈಗ ಅದಕ್ಕೂ ಅರಣ್ಯ ಇಲಾಖೆ ನಿರ್ಬಂಧ ಹೇರಿದ್ದು, ಜೀವನ ನಡೆಸುವುದೇ ದುಸ್ತರವಾಗಿದೆ. ಹಿಂದೆ ಅಧಿಕಾರಿಗಳು, ಸಚಿವರು ನೀಡಿದ್ದ ಭರವಸೆ ಭರವಸೆಯಾಗೇ ಉಳಿದಿದೆ ಎಂದು ಕಿಡಿಕಾರಿದರು.
ಮೂಲಸೌಕರ್ಯವೇ ಮರೀಚಿಕೆಯಾಗಿರುವ ಗ್ರಾಮಕ್ಕೆ ಸರ್ಕಾರ ನೀಡಿರುವ ಆಧಾರ್ ಕಾರ್ಡ್, ವೋಟರ್ ಐಡಿ, ಪಡಿತರ ಚೀಟಿಗಳನ್ನು ವಾಪಸ್ ಪಡೆದು ನಮಗೆ ಸಾಯಲು ವಿಷ ನೀಡಿ. ಇಲ್ಲದಿದ್ದರೆ ಮೂಲಭೂತ ಸೌಲಭ್ಯ ಕೊಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 5000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಾದಪ್ಪನ ಬೆಟ್ಟದ ತಪ್ಪಲಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications