ಬಿಳಿಗಿರಿರಂಗನ ಬೆಟ್ಟ ಸೇರಿದಂತೆ 3 ಕಡೆ ಹೊಸ ಪ್ರಭೇದದ ಜೀರುಂಡೆ ಪತ್ತೆ: ಇವುಗಳ ವಿಶೇಷತೆ ಏನು?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಸೆಪ್ಟೆಂಬರ್, 14: ಜೀವ ವೈವಿಧ್ಯಯದ ತಾಣವಾಗಿರುವ ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ 3 ಕಡೆ ಹೊಸ ಪ್ರಭೇದದ ಸಗಣಿ ಜೀರುಂಡೆ (DUNG BEETLE)ಗಳನ್ನು ಪತ್ತೆ ಹಚ್ಚಲಾಗಿದೆ. ಅವುಗಳ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್‌ನ ಕೀಟಶಾಸ್ತ್ರಜ್ಞರು 3 ಹೊಸ ಪ್ರಭೇದದ ಜೀರುಂಡೆಗಳನ್ನು ಪತ್ತೆ ಹಚ್ಚುವ ಮೂಲಕ ಜಾಗತಿಕವಾಗಿ 176 ಜಾತಿಯ ಜೀರುಂಡೆಗಳಿಗೆ ಇದೀಗ ಮೂರು ಜಾತಿಯ ಜೀರುಂಡೆಗಳು ಸೇರ್ಪಡೆಗೊಂಡಿದೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒನಿಟಿಸ್ ಕೆಥಾಯ್ ಎಂಬ ಜಾತಿಯ ಜೀರುಂಡೆ, ಅಸ್ಸಾಂನ ತೇಜ್‌ಪುರದಲ್ಲಿ ಒನಿಟಿಸ್ ಬೊಮೊರೆನ್ಸಿಸ್ ಎಂಬ ಮತ್ತೊಂದು ಹಾಗೂ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನಲ್ಲಿ ಮತ್ತೊಂದು ಜಾತಿಯ ಜೀರುಂಡೆ ಪತ್ತೆ ಹಚ್ಚಿ ಒನಿಟಿಸ್ ವಿಸ್ತಾರ ಎಂಬ ಹೆಸರಿಡಲಾಗಿದೆ.
ಏಟ್ರಿಯಲ್ಲಿ ಕೀಟಶಾಸ್ತ್ರಜ್ಞರಾಗಿ ಸಂಶೋದನೆಯಲ್ಲಿ ತೊಡಗಿರುವ ಪ್ರಿಯದರ್ಶನ್ ಧರ್ಮರಾಜನ್, ಕರಿಂಬುಂಕರ ಈ ಹೊಸ ಜೀರುಂಡೆಗಳನ್ನು ಪತ್ತೆಹಚ್ಚಿದ್ದು, ಬೆಂಗಳೂರಿನ ಹೆಸರಘಟ್ಟದಲ್ಲಿ ಪತ್ತೆಯಾದ ಜೀರುಂಡೆಗೆ ವಿಸ್ತಾರ, ಬಿಳಿಗಿರಿರಂಗನಬೆಟ್ಟದಲ್ಲಿ ಪತ್ತೆಯಾದುದಕ್ಕೆ ಕ್ಷೇತ್ರ ಸಹಾಯಕನಾಗಿದ್ದ ಕೇತಗೌಡ ಹೆಸರು ಹಾಗೂ ಅಸ್ಸಾಂನಲ್ಲಿ ಪತ್ತೆಯಾದ ಜೀರುಂಡೆಗೆ ಬ್ರಹ್ಮಪುತ್ರದ ಅಡ್ಡಾಲಾಗಿರುವ ಕೋಲಿಯಾ ಬೊಮೊರಾ ಎಂದು ಹೆಸರಿಸಲಾಗಿದೆ.
ಈ ಕುರಿತು ಕೀಟ ಶಾಸ್ತ್ರಜ್ಞ ಪ್ರಿಯದರ್ಶನ್ ಪ್ರತಿಕ್ರಿಯಿಸಿ, ಪೋಷಕಾಂಶಗಳ ಸೈಕ್ಲಿಂಗ್‌ನಲ್ಲಿ ಸಗಣಿ ಜೀರುಂಡೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಜೀರುಂಡೆಗಳು ಸಗಣಿಯಲ್ಲಿ ಆಹಾರ, ಸಂತಾನವೃದ್ಧಿ ಮತ್ತು ಗೂಡುಗಳನ್ನು ಮಾಡಿಕೊಳ್ಳಲ್ಲಿದ್ದು, ಹವಾಮಾನ ಬದಲಾವಣೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಮಣ್ಣಿನ ಗಾಳಿಯನ್ನು ಸುಧಾರಿಸುತ್ತದೆ. ದ್ವಿತೀಯ ಬೀಜ ಪ್ರಸರಣದಲ್ಲಿ ಸಹಾಯ ಮಾಡುತ್ತದೆ ಮತ್ತು ಪರಾವಲಂಬಿಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಹುಲಿಯನ್ನೇ ಹಿಮ್ಮೆಟ್ಟಿಸಿದ ಕಾಡೆಮ್ಮೆ: ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಾಡುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಹುಲಿಯೊಂದು ಎರಡು ಹಸುಗಳ ರಕ್ತ ಹೀರಿರುವ ಘಟನೆ ಜಿಲ್ಲೆಯ ವಡೆಯನಪುರ ಗ್ರಾಮದಲ್ಲಿ ನಡೆದಿತ್ತು. ಇನ್ನು ಇದೀಗ
ಬೇಟೆಯಾಡಲು ಬಂದ ಹುಲಿಯನ್ನೇ ಕಾಡೆಮ್ಮೆಯೊಂದು ಹಿಮ್ಮೆಟ್ಟಿಸಿರುವುದು ಬಂಡೀಪುರ ಸಫಾರಿಯಲ್ಲಿ ನಡೆದಿದೆ.
ಸುಮ್ಮೆನೆ ಯಾವುದೇ ಪ್ರಾಣಿಗರ ತಂಟೆಗೆ ಹೋಗದೇ ಮೇಯುತ್ತಿದ್ದ ಕಾಡೆಮ್ಮೆ ಮೇಲೆ ದಾಳಿ ಹುಲಿ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಹುಲಿಗೆ ಕಾಲಿನಿಂದ ಒದ್ದು ಕಾಡೆಮ್ಮೆ ಎದುರಿಸಿ ನಿಂತಿದೆ. ಇನ್ನು ಕಾಡೆಮ್ಮೆಯ ರೌದ್ರಾವತಾರ ಕಂಡ ಹುಲಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಸ್ಥಳದಿಂದ ಕಾಲ್ಕಿತ್ತಿದೆ.
ಇನ್ನು, ಈ ರೋಮಾಂಚಕ ಬೇಟೆ ದೃಶ್ಯವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 11) ಸಂಜೆ ಸಫಾರಿಯಲ್ಲಿ ಈ ಬೇಟೆ ಕಾಳಗ ನಡೆದಿದೆ ಎಂದು ತಿಳಿದುಬಂದಿದೆ. ಕಾಡೆಮ್ಮೆ ಬಲಿಷ್ಠ ಪ್ರಾಣಿಯಾದರೂ ಸಹ ಹುಲಿಯ ಪ್ರಮುಖ ಬೇಟೆಗಳಲ್ಲಿ ಒಂದಾಗಿದೆ. ಆದರೆ, ಹುಲಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಮಾತ್ರ ರೋಮಾಂಚಕಾರಿ ಆಗಿದೆ.












Click it and Unblock the Notifications