ನಾಗಮಂಗಲ ಗಲಭೆ: "ರೀ..ಪರಮೇಶ್ವರ್ ಯೂ ಆರ್ ಕಂಪ್ಲೀಟ್ಲಿ ರಾಂಗ್"
ಚಾಮರಾಜನಗರ, ಸೆಪ್ಟೆಂಬರ್, 12: ಗಣೇಶ ವಿಸರ್ಜನೆ ವೇಳೆ ಮಂಡ್ಯದ ನಾಗಮಂಗಲದಲ್ಲಿ ಕಿಡಿಗೇಡಿಗಳ ಗೊಂಪೊಂದು ಬೈಕ್ ಶೋ ರೂಂಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ವಿಕೃತಿ ಮೆರೆದಿರುವ ಘಟನೆ ನಡೆದಿದ್ದು, ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ಅವರ ಹೇಳಿಕೆಗೆ ಬಿಜೆಪಿ ಉಪಾಧ್ಯಕ್ಷ ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪರಮೇಶ್ವರ್ ಅವರು ಇದು ಒಂದು ಸಣ್ಣ ಘಟನೆ ಎಂದು ಹೇಳಿದ್ದಾರೆ. ನಾಚಿಕೆ ಆಗಲ್ವಾ ನಿಮಗೆ, ಅದು ಸಣ್ಣ ಘಟನೆಯಲ್ಲಾ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆಕ್ರೋಶ ಹೊರಹಾಕಿದರು.

ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶನ ಉತ್ಸವ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಅವರು ಕಲ್ಲು ತೂರಿದ್ದರಿಂದಲೇ ಕಾನೂನು ಭಂಗ ಆಗಿದೆ, ಕಲ್ಲು ತೂರಾಟ ನಡೆಸದಿದ್ದರೆ ಕಾನೂನಿಗೆ ಭಂಗ ಆಗುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಲ್ಲು ತೂರಾಟ ಮಾಡಿದವರನ್ನು ಕಂಡು ಹಿಡಿದು ಶಿಕ್ಷಿಸಬೇಕಾಗಿದ್ದು ಗೃಹ ಸಚಿವರ ಕರ್ತವ್ಯವಾಗಿದೆ. ಇಡೀ ನಾಗಮಂಗಲ ಹೊತ್ತಿ ಉರಿಯುತ್ತಿದೆ, ಇದೇನು ಸಣ್ಣ ಘಟನೆನಾ ಪರಮೇಶ್ವರ್? ನಿಮಗೇನಾಗಿದೆ ಅಂತಾ ನನಗೆ ಗೊತ್ತಾಗುತ್ತಿಲ್ಲ ಎಂದು ಪರಮೇಶ್ವರ್ ಸಣ್ಣ ಘಟನೆ ಎಂಬ ಹೇಳಿಕೆಗೆ ಆಕ್ರೋಶ ಹೊರಹಾಕಿದರು.
ನಮ್ಮ ಪಕ್ಷದ ನಾಯಕರು ನಾಗಮಂಗಲಕ್ಕೆ ಹೋಗಿದ್ದಾರೆ. ಜನರಲ್ಲಿ ಸಾಮರಸ್ಯವನ್ನು ಉಂಟುಮಾಡುವ ಉದ್ದೇಶದಿಂದ ನಮ್ಮ ನಾಯಕರ ತಂಡ ಭೇಟಿ ಕೊಟ್ಟಿದೆ. ಸಿಎಂ, ಗೃಹ ಸಚಿವರು ಕೂಡ ಹೋಗಬೇಕಿತ್ತು. ಗಣೇಶೋತ್ಸವ ಇಡೀ ದೇಶಾದ್ಯಂತ ನಡೆಯುತ್ತಿದ್ದು, ಕಿಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡಲಿದೆ ಎಂಬುದು ಇವರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು.?: ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲು ತೂರಾಟ ಘಟನೆ ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯವಾಗಿದ್ದು. ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಈ ಘಟನೆಯು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆ ತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಗಲಭೆ, ಗಲಾಟೆ, ಹಿಂಸಾಚಾರಗಳು ನಡೆಯದೆ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ನಾಡನ್ನು, ಧಾರ್ಮಿಕ ನೆಲೆಗಟ್ಟಿನಲ್ಲಿ ವಿಭಜಿಸಲು ಯತ್ನಿಸುವ ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ, ಸಂಯಮ ಕಾಪಾಡಿಕೊಳ್ಳುವ ಮೂಲಕ ನಮ್ಮೊಂದಿಗೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications