ಚಾಮರಾಜನಗರದಲ್ಲಿ ಮೈಕ್ರೋ ಫೈನಾನ್ಸ್ ಕಾಟ: ಬೀದಿಗೆ ಬಿದ್ದ ರೈತನ ಕುಟುಂಬ!
ಚಾಮರಾಜನಗರ, ಜನವರಿ 28: ರಾಜ್ಯದಾದ್ಯಂತ ಒಂದರ ಮೇಲೊಂದರಂತೆ ಮೈಕ್ರೋ ಫೈನಾನ್ಸ್ ಕಪಿಮುಷ್ಠಿಯಲ್ಲಿ ಸಿಲುಕಿ ನರಕ ಅನುಭವಿಸುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಈ ಸಮಸ್ಯೆಯಿಂದ ಜನ ಹೊರ ಬರಲು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದರತ್ತ ಸಾಲಗಾರರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಆದರೆ ಸಾಲಕೊಟ್ಟ ಫೈನಾನ್ಸ್ ಸಂಸ್ಥೆಯವರು ಆದಷ್ಟು ಬೇಗ ಸಾಲ ವಸೂತಿ ಮಾಡಿಬಿಡಬೇಕೆನ್ನುವ ಹಠಕ್ಕೆ ಬಿದ್ದಿದ್ದು ಅದರಂತೆ ಮನೆಗೆ ಬೀಗ ಜಡಿದು ಕುಟುಂಬಗಳನ್ನು ಹೊರ ಹಾಕುವ ಮಟ್ಟಕ್ಕೆ ಹೋಗುತ್ತಿದ್ದಾರೆ.
ಸದ್ಯ ಇಡೀ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಗಳ ಸುದ್ದಿಗಳು ಸದ್ದು ಮಾಡುತ್ತಿದ್ದು, ಫೈನಾನ್ಸ್ ರವರ ಕಿರುಕುಳದಿಂದ ಮನೆ ಬಿಟ್ಟವರು, ಮನೆಕಳೆದುಕೊಂಡವರು, ಆತ್ಮಹತ್ಯೆ ಮಾಡಿಕೊಂಡವರು, ಹಲ್ಲೆಗೊಳಗಾದವರು ಹೀಗೆ ನೂರಾರು ಪ್ರಕರಣಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಕಂಪನಿಗಳ ಕಾಟದಿಂದ ತಪ್ಪಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿಗೆ ಹಲವು ಕುಟುಂಬಗಳು ಬಂದು ನಿಂತಿವೆ. ಮೈಕ್ರೋ ಫೈನಾನ್ಸ್ ಪ್ರಕರಣದಲ್ಲಿ ಸಿಲುಕಿ ನರಕ ಅನುಭವಿಸುತ್ತಿರುವವರಲ್ಲಿ ರೈತರು ಕೂಡ ಸೇರಿದ್ದಾರೆ. ಹೀಗಾಗಿ ರೈತ ಸಂಘಟನೆಗಳು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿವೆ.

ಮೈಕ್ರೋ ಫೈನಾನ್ಸ್ ಗಳು ಸಾಲ ನೀಡುವಾಗ ವಸೂಲಿ ಹೇಗೆ ಮಾಡಬೇಕು ಎಂಬುದು ಗೊತ್ತಿರುತ್ತದೆ. ಹೀಗಾಗಿ ಹಲವು ನಿಬಂಧನೆಗಳಿಗೆ ಸಹಿ ಹಾಕಿಸಿಕೊಂಡಿರುತ್ತಾರೆ. ಅದನ್ನೇ ಮುಂದಿಟ್ಟುಕೊಂಡು ವಸೂಲಿಗಿಳಿಯುತ್ತಿರುವುದರಿಂದ ಹಲವರು ಮನೆಯಿಂದ ಹೊರಗೆ ಬೀಳುವಂತಾಗಿದೆ. ಸದ್ಯ ರಾಜ್ಯದಲ್ಲಿ ಪ್ರಕರಣಗಳು ಸಕ್ರಿಯವಾಗಿರುವಾಗಲೇ ಚಾಮರಾಜನಗರದ ಸಂತೇಮರಹಳ್ಳಿ ಗ್ರಾಮದಲ್ಲಿ ರಾಜೇಶ್ ಎನ್ನುವವರು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ ಮನೆ ಸಾಲ ಪಡೆದು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಲಾಗದೆ ಮನೆಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿರುವುದು ಬೆಳಕಿಗೆ ಬಂದಿದೆ.
ಇದೀಗ ಮನೆ ನಿರ್ಮಾಣಕ್ಕೆ ಸಾಲಕೊಟ್ಟಿರುವ ಜನ ಸ್ಮಾಲ್ ಫೈನಾನ್ಸ್ ಸಂಸ್ಥೆಯವರು ಮನೆಯನ್ನು ಸೀಜ್ ಮಾಡಿದ್ದು ಪರಿಣಾಮ ಮನೆ ಮಾಲೀಕ ಎಂ. ರಾಜೇಶ್ ಹಾಗೂ ಅವರ ಪತ್ನಿ ಶ್ವೇತ ಮತ್ತು ಮಕ್ಕಳು ಬೀದಿಯಲ್ಲಿ ವಾಸ ಮಾಡುವ ಪರಿಸ್ಥಿತಿ ಬಂದಿದೆ. ಈ ಕುರಿತಂತೆ ತಮಗಾಗಿರುವ ಕಿರುಕುಳವನ್ನು ಕುಟುಂಬ ಹೊರ ಹಾಕಿದ್ದು ನ್ಯಾಯ ದೊರಕಿಸಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು ತಮಗಾದ ಕಿರುಕುಳದ ಬಗ್ಗೆ ಹೇಳಿರುವ ಕುಟುಂಬ, ಫೈನಾನ್ಸ್ ನವರ ಹತ್ತಿರ ರೈತ ಮುಖಂಡರನ್ನು ಕರೆದುಕೊಂಡು ಹೋಗಿ ಸ್ವಲ್ಪ ಹಣ ಪಾವತಿ ಮಾಡುವುದಾಗಿ ಹೇಳಿದ್ದು, ಆದರೂ ನಮಗೆ ಪೂರ್ಣ ಹಣ ಕಟ್ಟಬೇಕು ಎಂದು ನಮ್ಮ ಮನೆಯನ್ನು ಮುಟ್ಟುಗೊಲು ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ಜೀವನ ನಡೆಸುವುದು ಕಷ್ಟವಾಗಿದ್ದು, ಬದುಕೇ ಬೇಸರ ತಂದಿದೆ. ನಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದು ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಮನೆಯ ಹೊರಗಡೆ ಇರುವ ಶೌಚಾಲಯ ಹಾಗೂ ಸ್ನಾನದ ಮನೆಗೂ ಬೀಗ ಹಾಕಲಾಗಿದ್ದು ನಮಗೆ ದೈನಂದಿನ ಚುಟುವಟಿಕೆಗೂ ಸಹ ಪರಿತಪಿಸುವಂತಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ನಮಗೆ ನ್ಯಾಯ ಕೊಡಿಸಿ ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬಸ್ಥರು ಧರಣಿ ಮಾಡಬೇಕಾಗುತ್ತದೆ ಎಂದು ಹೇಳಿರುವ ರಾಜೇಶ್ ಕುಟುಂಬ ನಮಗೆ ಬೇರೆ ಯಾವುದೇ ದಾರಿ ತೋಚುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.












Click it and Unblock the Notifications