ಚಾಮರಾಜನಗರ: ಕೈ ಟಿಕೆಟ್ ಆಕಾಂಕ್ಷಿಯಿಂದ ಭರ್ಜರಿ ಬಾಡೂಟ
ಚಾಮರಾಜನಗರ, ಫೆಬ್ರವರಿ, 02: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಆಪ್ತರ ಬಳಗಕ್ಕೆ ಭರ್ಜರಿ ಬಾಡೂಟ ಆಯೋಜನೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಿ.ಎನ್.ನಟರಾಜು ಅವರು ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ವಡ್ಡಗೆರೆಯ ಖಾಸಗಿ ಸಭಾಂಗಣದಲ್ಲಿ ಭರ್ಜರಿ ಔತಣಕೂಟ ನಡೆಸಿದ್ದಾರೆ. ಇನ್ನು ಈ ಔತಣಕೂಟದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಮುಖಂಡರು, ಅಭಿಮಾನಿ ಬಳಗ ಹಾಗೂ ಸಮುದಾಯಗಳ ಮುಖಂಡರು ಸೇರಿದಂತೆ ಸಹಸ್ರಾರು ಮಂದಿ ಭಾಗಿಯಾಗಿದ್ದಾರೆ.

ಮಟನ್, ಚಿಕನ್, ಮೊಟ್ಟೆ, ಮುದ್ದೆ, ಅನ್ನ- ಸಾರು ಸೇರಿದಂತೆ ವಿವಿಧ ಬಗೆಯ ಮಾಂಸ ಭಕ್ಷ್ಯಗಳನ್ನು ಉಣಬಡಿಸಲಾಗಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಕವಲಂದೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ತಮಗೆ ಈ ಬಾರಿ ಟಿಕೆಟ್ ಕೊಡಬೇಕು ಎಂದು ಪ್ರಬಲವಾಗಿ ಒತ್ತಾಯಿಸಿದ್ದರು.
ಬೊಂಬಾಟ್ ಮಾಂಸದೂಟ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯಲ್ಲಿ ಇತ್ತೀಚೆಗಷಟೇ ಪಂಕ್ತಿಸೇವೆ ನಿರ್ವಿಘ್ನದಿಂದ ನಡೆದಿತ್ತು.
ದೇಗುಲ ಆವರಣ ಬಿಟ್ಟು ಖಾಸಗಿ ಜಮೀನುಗಳಲ್ಲಿ ಬಿಡಾರ ಹೂಡಿದ್ದ ಭಕ್ತರು ಕುರಿ, ಕೋಳಿಯನ್ನು ಕೊಯ್ದು ಮಾಂಸದ ಅಡುಗೆ ಮಾಡಿ ಪಂಕ್ತಿಸೇವೆ ನಡೆಸಿದರು.
ಚಿಕ್ಕಲ್ಲೂರು ಕ್ಷೇತ್ರದಲ್ಲಿ 5 ಹಗಲು 5 ರಾತ್ರಿ ಜಾತ್ರೆ ನಡೆಯಲಿದ್ದು, 4ನೇ ದಿನದಂದು ಪಂಕ್ತಿ ಸೇವೆ ನಡೆಸಲಾಗುತ್ತದೆ. ಅದರಂತೆಯೇ ಲಕ್ಷಾಂತರ ಮಂದಿ ಭಕ್ತರು ದೇವರಿಗೆ ಅನ್ನ, ಮುದ್ದೆ, ಮಾಂಸದ ಭಕ್ಷ್ಯಗಳನ್ನು ಎಡೆ ಇಟ್ಟು ಪೂಜೆ ಸಲ್ಲಿಸಿ ಸಹಪಂಕ್ತಿ ಭೋಜನ ನಡೆಸಿದ್ದರು.
ಐತಿಹಾಸಿಕ, ಭಕ್ತಿ ಪರಾಕಾಷ್ಠೆಯ ಜಾತ್ರೆ ಎಂದೇ ಜನಜನಿತವಾಗಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಪಂಕ್ತಿಸೇವೆ ಸಲ್ಲಿಸಿ ತಮ್ಮ ನಂಬಿಕೆ, ಭಕ್ತಿ ಅಚಲ ಎಂಬ ಮುದ್ರೆ ಒತ್ತಿದ್ದರು.
ಕುರಿ, ಕೋಳಿಯ ಭಕ್ಷ್ಯ ತಯಾರಿಸಿ ದೇವರಿಗೆ ಎಡೆ ಇಟ್ಟು ಬಳಿಕ ಸಹಪಂಕ್ತಿ ಭೋಜನ ಮಾಡುವ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಿಸಿ ಹದ್ದಿನ ಕಣ್ಣಿಟ್ಟಿತ್ತು.
ಆಚರಣೆಯನ್ನು ಬಿಡಲೊಪ್ಪದ ಜನರು ಕಣ್ಮರೆಸಿ ಪ್ರಾಣಿಗಳನ್ನು ತಂದು ದೇವಾಲಯ ಆವರಣದಿಂದ ದೂರದ ಪ್ರದೇಶದಲ್ಲಿ ಅಡುಗೆ ತಯಾರಿಸಿ ಶ್ರದ್ಧೆ-ಭಕ್ತಿಯಿಂದ ಎಡೆ ಅರ್ಪಿಸಿದ್ದಾರೆ. ಜಿಲ್ಲೆ ಹೊರಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ಮಾಂಸದೂಟ ತಯಾರಿಸಿ ನೀಲಗಾರರ ಸಂಪ್ರದಾಯಕ್ಕೆ ಅನುಗುಣವಾಗಿ ಎಡೆ ಅರ್ಪಿಸಿ ರಾಚಪ್ಪಾಜಿ, ಸಿದ್ದಾಪ್ಪಾಜಿ ದೇವರಿಗೆ ಮದ್ಯ- ಮಾಂಸ ಅರ್ಪಿಸಿ ಭಕ್ತಿ ಪರಾಕಷ್ಟೆ ಮೆರೆದಿದ್ದರು.
ಜಾತ್ರೆಯಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಹಿನ್ನೆಲೆ ಜಾತ್ರೆಗೆ ಮಹಿಳಾ ಸಾಗರವೇ ಹರಿದುಬಂದಿತ್ತು. ಬಸ್‌ಗಳಿಗೆ ಹತ್ತಲು ಮಹಿಳೆಯರು ನಾ ಮುಂದೆ- ತಾ ಮುಂದೆ ಎಂದು ಕಿಟಕಿ, ಚಾಲಕರ ಡರ್‌ಗಳಲ್ಲಿ ಹತ್ತಿದ್ದರು. ಕಿಟಕಿಗಳಿಗೆ ಮಕ್ಕಳನ್ನು ತೂರಿಸಿ ಆಸನ ಹಿಡಿಯುವ ಸಾಹಸ ಮಾಡಿದ್ದರು.
ಒಟ್ಟಿನಲ್ಲಿ ಸಿದ್ದಪ್ಪಾಜಿ ಪವಾಡ ಮೆರೆದ ಕ್ಷೇತ್ರದಲ್ಲಿ ಭಕ್ತರು ಭಕ್ತಿ ಪರಾಕಷ್ಟೆ ಮೆರೆದಿದ್ದು ಪಂಕ್ತಿ ಸೇವೆ ನಡೆಸಿ ಗಮನ ಸೆಳೆದಿದ್ದರು.












Click it and Unblock the Notifications