ಕೇವಲ 33 ದಿನಗಳಲ್ಲಿ ₹2.90 ಕೋಟಿ ಒಡೆಯನಾದ ಮಲೆ ಮಾದಪ್ಪ, ಅಂಕಿಅಂಶಗಳ ವಿವರ ಇಲ್ಲಿದೆ
ಚಾಮರಾಜನಗರ, ಜನವರಿ, 04: ನಾಡಿನ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ (ಜನವರಿ 03) ನಡೆದ ಹುಂಡಿ ಹಣ ಎಣಿಕೆಯಲ್ಲಿ ಕೇವಲ 33 ದಿನಗಳಿಗೆ 2.90 ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ರಾತ್ರಿ 10ರ ವರೆಗೂ ನಡೆಯಿತು.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಹುಣ್ಣಿಮೆ, ಅಮಾವಾಸ್ಯೆ, ಕ್ರಿಸ್ ಮಸ್ ರಜೆ, ಹೊಸ ವರ್ಷ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
33 ದಿನಗಳ ಅವಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ 2,90,00,732 ರೂಪಾಯಿ ಸಂಗ್ರಹವಾಗಿದೆ. 102 ಗ್ರಾಂ ಚಿನ್ನ ಮತ್ತು 3.300 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದಲ್ಲದೆ ಅಮೇರಿಕಾದ 22 ಡಾಲರ್, ಕೆನಡಾದ 100, ಥಾಯ್ಲ್ಯಾಂಡ್ 2 ಡಾಲರ್ ವಿದೇಶಿ ನೋಟುಗಳು, ಚಲಾವಣೆಯಲ್ಲಿಲ್ಲದ ₹2,000 ಮುಖಬೆಲೆಯ 12 ನೋಟುಗಳು ಹುಂಡಿಯಲ್ಲಿ ಸಿಕ್ಕಿವೆ.
2.10 ಕೋಟಿ ರೂಪಾಯಿ ಸಂಗ್ರಹ
ಪ್ರಸಿದ್ಧ ಯಾತ್ರಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ (ನವೆಂಬರ್ 08) ಹುಂಡಿ ಏಣಿಕೆ ನಡೆದಿದ್ದು, 28 ದಿನಗಳ ಅವಧಿಯಲ್ಲಿ 2.10 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿತ್ತು.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಈ ಎಣಿಕೆ ಕಾರ್ಯವು ಸಂಜೆ 7.30ರ ಗಂಟೆಯವರೆಗೂ ನಡೆದಿತ್ತು.
2.28 ಕೋಟಿ ರೂಪಾಯಿ ಸಂಗ್ರಹ
ಹಾಗೆಯೇ ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ 2.28 ಕೋಟಿ ರೂಪಾಯಿ ಸಂಗ್ರಹ ಆಗಿತ್ತು.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಕಾರ್ಯ 12 ತಾಸಿನಷ್ಟು ನಡೆದಿದ್ದು, 39 ದಿನಗಳಲ್ಲಿ ಬರೋಬ್ಬರಿ 2,28,63,914 ರೂಪಾಯಿ ಹಣ ಸಂಗ್ರಹ ಆಗಿತ್ತು
ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಜೊತೆಗೆ ಹುಣ್ಣಿಮೆ, ಅಮಾವಾಸ್ಯೆ, ಹಾಗೂ ಸರ್ಕಾರಿ ರಜೆ ದಿನಗಳು, ಸಾಮೂಹಿಕ ವಿವಾಹ, ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದರು.
ಈ ಮೂಲಕ 2.28 ಕೋಟಿ ರೂಪಾಯಿ ನಗದು, 92.5 ಗ್ರಾಂ ಚಿನ್ನ ಹಾಗೂ 2.7 ಕೆ.ಜಿ. ಬೆಳ್ಳಿ ಸಂಗ್ರಹವಾಗಿತ್ತು.












Click it and Unblock the Notifications