ಕೇವಲ 5 ದಿನದಲ್ಲಿ ಮಲೆ ಮಹದೇಶ್ವರನಿಗೆ ಹರಿದುಬಂತು 2.7 ಕೋಟಿ ಆದಾಯ, ಯಾವ ಉತ್ಸವದಿಂದ ಎಷ್ಟು ಆದಾಯ?
ಮಲೆ ಮಹದೇಶ್ವರ ಬೆಟ್ಟಕ್ಕೆ 5 ದಿನದಲ್ಲಿ 2.7 ಕೋಟಿ ರೂಪಾಯಿ ಆದಾಯ ಹರಿದು ಬಂದಿದ್ದು, ಯಾವ ಉತ್ಸವದಿಂದ ಎಷ್ಟು ಆದಾಯ ಬಂದಿದೆ ಎಂದು ಇಲ್ಲಿ ತಿಳಿಯಿರಿ.
ಚಾಮರಾಜನಗರ, ಫೆಬ್ರವರಿ, 24: ಕರ್ನಾಟಕ ಅಷ್ಟೇ ಅಲ್ಲದೇ ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರೆಗೆ ಭಕ್ತಸಾಗರವೇ ಹರಿದು ಬಂದಿತ್ತು. ಇದರಿಂದ ಪ್ರಾಧಿಕಾರಕ್ಕೆ ಭರ್ಜರಿ ಆದಾಯವೂ ಬಂದಿದೆ. ಹಾಗಾದರೆ ದೇವಾಸ್ಥಾನಕ್ಕೆ ಬಂದ ಆದಾಯ ಎಷ್ಟು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ 17 ರಿಂದ 21ರ ವರೆಗೆ ಮಹಾಶಿವರಾತ್ರಿ ನಡೆದಿದ್ದು, ಬರೋಬ್ಬರಿ 12 ಲಕ್ಷ ಮಂದಿ ಈ ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ದೇಗುಲಕ್ಕೆ ಆಗಮಿಸಿದ ಭಕ್ತರು ವಿವಿಧ ಉತ್ಸವಗಳು, ಲಾಡು ಪ್ರಸಾದ, ಹಾಗೂ ಇನ್ನಿತರ ಸೇವೆಗಳನ್ನು ನಡೆಸಿದ್ದರು. ಇದರಿಂದ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ 2.70 ಕೋಟಿ ರೂಪಾಯಿ ಆದಾಯ ಕೇವಲ 5 ದಿನದಲ್ಲೇ ಹರಿದುಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾದಪ್ಪ ದರ್ಶನಕ್ಕೆ ಬಂದ ಭಕ್ತರ ವಿವರ
ಉತ್ತರದಿಂದ ದಕ್ಷಿಣದ ತುತ್ತತುದಿಯಲ್ಲಿ ನೆಲವೂರಿ ಕುಳಿತಿರುವ ಆರಾಧ್ಯ ದೈವ ಮಾದೇಶ್ವರನ ದರ್ಶನವನ್ನು ಪಡೆಯಲು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಬಾರಿ ಅದು 12 ಲಕ್ಷ ದಾಟಿದೆ ಎಂದು ತಿಳಿದುಬಂದಿದೆ. ಮಾದಪ್ಪನ ಬೆಟ್ಟಕ್ಕೆ ಬೆಂಗಳೂರು, ರಾಮನಗರ, ಮಂಡ್ಯ, ಕನಕಪುರದ ಜನರು ಆಗಮಿಸಿದ್ದರು. ಈ ಬಾರಿ ಲಕ್ಷಾಂತರ ಮಂದಿ ಪಾದಯಾತ್ರೆ ಮೂಲಕ ಬಂದು ಮಲೆ ಮಹದೇಶ್ವರನ ಶಿವರಾತ್ರಿ ಜಾತ್ರೆಯನ್ನು ಕಣ್ತುಂಬಿಕೊಂಡಿದ್ದಾರೆ.
5 ದಿನಗಳ ಕಾಲ ನಿರಂತರ ಬಸ್ ಸೇವೆ
ಮಲೆಮಹದೇಶ್ವರ ಬೆಟ್ಟ ಜಾತ್ರೆಗಾಗಿ ಸಾರಿಗೆ ಸಂಸ್ಥೆಯ 5 ದಿನಗಳ ಕಾಲ ನಿರಂತರ 500 ಬಸ್ ಸೇವೆಯನ್ನು ಒದಗಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನಿರಂತರ ಭಕ್ತರ ದಂದೇ ಕಂಡುಬಂದಿತ್ತು. ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ನೆರೆಯ ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟೋಪತ್ಸವ ಸೇರಿದಂತೆ ಇತರೆ ಸೇವಗಳಲ್ಲಿ ಪಾಲ್ಗೊಂಡಿರುವುದರಿಂದಲೇ ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗಿದೆ.

ಯಾವ ಉತ್ಸವದಿಂದ ಎಷ್ಟು ಆದಾಯ?
ಜಾತ್ರಾ ಮಹೋತ್ಸವದಲ್ಲಿ ಚಿನ್ನದ ರಥ ಮತ್ತು ಉತ್ಸವಗಳಿಂದ 88,21, 257 ರೂಪಾಯಿ, ವಿವಿಧ ಸೇವೆಗಳಿಂದ 6, 71,700 ರೂ., ಮಿಶ್ರ ಪ್ರಸಾದದಿಂದ 11,56,250 ರೂ., ಮಾಹಿತಿ ಕೇಂದ್ರದಿಂದ 6,16,250 ರೂ., ಪುದುವಟ್ಟು ಸೇವೆ 1,45,072 ರೂ., ವಿಶೇಷ ಪ್ರವೇಶ ಶುಲ್ಕದಿಂದ 55,38,000 ರೂ, ಲಾಡು ಮಾರಾಟದಿಂದ 92,59,975 ರೂ. ಆದಾಯ ಸಂಗ್ರಹವಾಗಿದೆ.
ಹಾಗೆಯೇ ಕಲ್ಲು ಸಕ್ಕರೆಯಿಂದ 1,08,420 ರೂ., ತೀರ್ಥ ಪ್ರಸಾದಿಂದ 2,24,020 ರೂ., ದೇವರ ಪ್ರಸಾದ ಬ್ಯಾಗ್‌ನಿಂದ 1,49,670 ರೂ., ಅಕ್ಕಿ ಸೇವೆಯಿಂದ 2,64,450 ರೂ., ಹಾಗೂ ಇತರ ಸೇವೆಗಳಿಂದ 1,17,574 ರೂ. ಸೇರಿದಂತೆ ಒಟ್ಟು 2,70,72,638 ರೂ. ಆದಾಯ ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿಣಿ ಮಾಹಿತಿ ನೀಡಿದ್ದಾರೆ.












Click it and Unblock the Notifications