ಮಲೆಮಹದೇಶ್ವರ ಬೆಟ್ಟಕ್ಕೆ ಜನ ಸಾಗರ: ಭಕ್ತಾಧಿಗಳಿಗಾಗಿ 500 ಬಸ್ ವ್ಯವಸ್ಥೆ, ಬೈಕ್‌ಗಳಿಗೆ ನಿರ್ಬಂಧ
ಮಲೆಮಹದೇಶ್ವರ ಬೆಟ್ಟ ಜಾತ್ರೆಗಾಗಿ ಸಾರಿಗೆ ಸಂಸ್ಥೆಯು 5 ದಿನಗಳ ಕಾಲ ನಿರಂತರ 500 ಬಸ್ ಸೇವೆಯನ್ನು ಕೊಡಲು ಮುಂದಾಗಿದೆ. ಜೊತೆಗೆ ಸುರಕ್ಷಿತ ಕ್ರಮವಾಗಿ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ
ಚಾಮರಾಜನಗರ, ಫೆಬ್ರವರಿ 16: ದಕ್ಷಿಣ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ 17 ರಿಂದ 21 ರ ವರೆಗೆ ಮಹಾಶಿವರಾತ್ರಿ ಜಾತ್ರೆ ನಡೆಯಲಿದ್ದು ಭಕ್ತಸಾಗರವೇ ಹರಿದು ಬರುತ್ತಿದೆ. ಮಾದಪ್ಪನ ಬೆಟ್ಟಕ್ಕೆ ಬೆಂಗಳೂರು, ರಾಮನಗರ, ಮಂಡ್ಯ, ಕನಕಪುರದ ಜನರು ಕಾವೇರಿ ಸಂಗಮದಲ್ಲಿ ನದಿ ದಾಟಿ ಬರುತ್ತಿದ್ದು ನದಿಯಲ್ಲಿ ಜನಪ್ರವಾಹ ಆದಂತೆ ಭಾಸವಾಗುತ್ತಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಶಿವರಾತ್ರಿ ಜಾತ್ರೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಭಕ್ತರು ನದಿ ದಾಟಿ ಬರುತ್ತಿದ್ದ ಸ್ಥಳೀಯರು ಮಜ್ಜಿಗೆ, ಪಾನಕ ವಿತರಿಸುತ್ತಿದ್ದಾರೆ. ಕಳೆದ ಬಾರಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವೇಳೆ ಕಾವೇರಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿ ಮೂವರು ಭಕ್ತರು ನಾಪತ್ತೆಯಾಗಿದ್ದ ಹಿನ್ನೆಲೆ ಈ ಬಾರಿ ರಾಮನಗರ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ನದಿಯ ನೀರು ಏಕಾಏಕಿ ಅಧಿಕ ಪ್ರಮಾಣದಲ್ಲಿ ಹೆಚ್ಚಾದ ಪರಿಣಾಮ ಕೆಲವು ಭಕ್ತರು ನೀರಿನಲ್ಲಿ ತೇಲಿ ಹೋಗಿದ್ದರೆ, ಇನ್ನೂ ಕೆಲವರು ನಾಪತ್ತೆಯಾಗಿದ್ದರು. ಈ ಬಾರಿ ಇಂತಹ ಘಟನೆಗಳು ಮರುಕಳಿಸಿದಂತೆ ಹಾಗೂ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊರಹರಿವನ್ನು ನಿಲ್ಲಿಸಲಾಗಿದ್ದು ಪಾದಯಾತ್ರಿಗಳ ಸುರಕ್ಷತೆಗೆ 20 ನುರಿತ ಈಜುಗಾರರು ನೇಮಿಸಲಾಗಿದೆ.

500 ಬಸ್ ಸೌಕರ್ಯ: ಬೈಕ್‌ಗಳಿಗೆ ನಿರ್ಬಂಧ
ಮಲೆಮಹದೇಶ್ವರ ಬೆಟ್ಟ ಜಾತ್ರೆಗಾಗಿ ಸಾರಿಗೆ ಸಂಸ್ಥೆಯ 5 ದಿನಗಳ ಕಾಲ ನಿರಂತರ 500 ಬಸ್ ಸೇವೆಯನ್ನು ಕೊಡಲು ಮುಂದಾಗಿದೆ. ಜೊತೆಗೆ, ಸುರಕ್ಷಿತ ಕ್ರಮವಾಗಿ ದ್ವಿಚಕ್ರ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ. 17 ರಿಂದ 21 ರವರೆಗೆ ಬೈಕ್‌ಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದ್ದು ಇಬ್ಬರು ಡಿವೈಎಸ್ಪಿ, 11 ಮಂದಿ ಪಿಐ, 30 ಮಂದಿ ಪಿಎಸ್ಐ, 68 ಮಂದಿ ಎಎಸ್ಐ, 375 ಪೊಲೀಸ್ ಕಾನ್ಸ್‌ಟೇಬಲ್, 32 ಮಂದಿ ಮಹಿಳಾ ಕಾನ್ಸ್‌ಟೇಬಲ್, 4 ಡಿಎಆರ್, 1 ಕೆಎಸ್ಆರ್ ಪಿ ತುಕಡಿ ಹಾಗೂ 230 ಹೋಂಗಾರ್ಡ್ ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.












Click it and Unblock the Notifications