Lok Sabha Election 2024: ಕೆ.ಶಿವರಾಂ ಪತ್ನಿ ರಾಜಕೀಯಕ್ಕೆ ಬರುವ ನಿರ್ಧಾರ ಮಾಡಿದ್ದೇಕೆ?-ಟಿಕೆಟ್ ನೀಡುತ್ತಾ ಬಿಜೆಪಿ?
ಚಾಮರಾಜನಗರ, ಮಾರ್ಚ್, 13: ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಇನ್ನು ಇತ್ತೀಚೆಗಷ್ಟೇ ಕೆ.ಶಿವರಾಂ ಅವರ ಪತ್ನಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಒತ್ತಾಯಗಳು ಕೇಳಿಬಂದಿದ್ದವು. ಇದಕ್ಕೆ ವಾಣಿ ಕೆ.ಶಿವರಾಮ್ ಅವರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನನ್ನ ಪತಿ ಕೆ.ಶಿವರಾಮ್ ಅವರು ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಹಾಗೂ ರಾಜಕಾರಣದಲ್ಲಿ ಜನ ಸೇವೆ ಮಾಡುವ ಹಂಬಲ ಹೊಂದಿದ್ದರು. ಹಾಗಾಗಿ, ಅವರ ಆಸೆ, ಗುರಿಯನ್ನು ಈಡೇರಿಸಲು ಹಠ, ಛಲದಿಂದ ರಾಜಕೀಯಕ್ಕೆ ಬರುವುದಾಗಿ ವಾಣಿ ಕೆ.ಶಿವರಾಂ ಘೋಷಣೆ ಮಾಡಿದರು.

ಚಾಮರಾಜನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಛಲವಾದಿ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಕೆ.ಶಿವರಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಹತ್ತು ವರ್ಷಗಳಿಂದ ಅವರಿಗೆ ರಾಜಕಾರಣದಲ್ಲಿ ಬಹಳಷ್ಟು ನಿರಾಶೆಯಾಗಿತ್ತು. ಪ್ರತಿ ಬಾರಿಯು ಟಿಕೆಟ್ ಕೈ ತಪ್ಪಿತ್ತು. ಅವರು ಈ ಬಾರಿ ನಾನು ಗೆದ್ದು ಸಂಸದನಾಗುತ್ತೇನೆ ಎಂಬ ಕನಸು ಕಟ್ಟಿಕೊಂಡಿದ್ದರು. ಜನ ಸೇವೆ ಮಾಡುವ ಆಸೆಯನ್ನಿಟ್ಟುಕೊಂಡಿದ್ದರು. ಟಿಕೆಟ್ ಕೈ ತಪ್ಪಿದಾಗಲೂ ಬೇಸರವಾಗದೇ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರು. ಆದರೆ ಯಾವುದೇ ಪಕ್ಷಗಳು ಅವರನ್ನು ಗುರುತಿಸದಿರುವುದು ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಪಕ್ಷಕ್ಕೆ ಹೋದರೂ ಸಿದ್ಧಾಂತವನ್ನು ಬಿಟ್ಟು ಹೋದವರಲ್ಲ. ಅವರು ಬಹಳ ಕಷ್ಟು ಪಟ್ಟು ಜನ ಸೇವೆ ಮಾಡಲು ಛಲವಾದಿ ಮಹಾಸಭಾ ಸಂಘಟನೆಯನ್ನು ಸ್ಥಾಪನೆ ಮಾಡಿದ್ದರು. ಇದನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ಎಲ್ಲರೂ ಸೇರಿ ಅವರನ್ನು ಜೀವಂತವಾಗಿಡುವ ಕೆಲಸವನ್ನು ಮಾಡೋಣ ಎಂದರು.
ನನಗೆ ರಾಜಕೀಯ ಶಕ್ತಿ ತುಂಬಿ : ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸುತ್ತಿದ್ದಾರೆ. ಬೆಂಗಳೂರಿನಿಂದ ಹೊರಟು ಊಟ, ತಿಂಡಿಯನ್ನು ಬಿಟ್ಟು ನಗರಕ್ಕೆ ಬರುತ್ತಿದ್ದರು. ರಾಜಕೀಯ ಅಧಿಕಾರ ಇದ್ದರೆ ಮಾತ್ರ ಜನ ಸೇವೆ ಮಾಡಲು ಸಾಧ್ಯ ಎಂಬ ಸತ್ಯವನ್ನು ಎಲ್ಲರೂ ಅರಿತು ಕೊಳ್ಳಬೇಕು.
ಶಿವರಾಂ ಅವರಿಗೆ ಬಹಳ ಅನ್ಯಾಯವಾಗಿದೆ. ಆ ಅನ್ಯಾಯವನ್ನು ಸರಿಪಡಿಸಲು ನಾನು ಮನೆಯಲ್ಲಿ ಕೂರದೇ, ನಿಮ್ಮೊಂದಿಗೆ ಇರುತ್ತೇನೆ. ನಮ್ಮ ಯಜಮಾನರ ಆಸೆ, ಗುರಿಯನ್ನು ನೆರವೇರಿಸಲು ರಾಜಕೀಯಕ್ಕೆ ಬರುತ್ತೇನೆ. ಹೀಗಾಗಿ ನನಗೊಂದು ಅವಕಾಶ ಕೊಡಿ. ನನಗೆ ರಾಜಕೀಯ ಶಕ್ತಿಯನ್ನು ತುಂಬುವ ಮೂಲಕ ಅವರನ್ನು ಜೀವಂತವಾಗಿ ಉಳಿಸಿಕೊಡಿ ಎಂದು ವಾಣಿ ಭಾವುಕರಾದರು.
ಈ ವೇಳೆ ಚಿತ್ರದುರ್ಗದ ಛಲವಾದಿ ಮಠಾಧ್ಯಕ್ಷ ಛಲವಾದಿ ಬಸವನಾಗಿಸ್ವಾಮೀಜಿ, ತಿ.ನರಸೀಪುರದ ಬುದ್ದ ವಿಹಾರದ ಬೋಧಿರತ್ನ ಬಂತೇಜಿ ಛಲವಾದಿ ಮಹಾಸಭಾದ ಅಧ್ಯಕ್ಷ ಅಣಗಳ್ಳಿ ಬಸವರಾಜು ಇದ್ದರು.












Click it and Unblock the Notifications