Lok sabha election 2024: ಮೌಢ್ಯಕ್ಕೆ ಸೊಪ್ಪು ಹಾಕದೆ ಸಿಎಂ ಅಧಿಕಾರವಧಿಯಲ್ಲಿ ಎರಡನೇ ಬಾರಿ ಗಡಿಜಿಲ್ಲೆಗೆ ಸಿದ್ದರಾಯಮಯ್ಯ ಭೇಟಿ.
ಚಾಮರಾಜನಗರ, ಮಾರ್ಚ್, 11: ಚಾಮರಾಜನಗರಕ್ಕೆ ಈ ಹಿಂದೆ ಮುಖ್ಯಮಂತ್ರಿಗಳಾದವರು ಹಿಂದೇಟು ಹಾಕಿದರೇ ಸಿದ್ದರಾಮಯ್ಯ ಮಾತ್ರ ಮೌಢ್ಯಕ್ಕೆ ಸೊಪ್ಪು ಹಾಕದೇ ಎರಡನೇ ಸಿಎಂ ಅವಧಿಯಲ್ಲಿ ಎರಡನೇ ಬಾರಿಗೆ ಗಡಿಜಿಲ್ಲೆಗೆ ಮಂಗಳವಾರ (ಮಾರ್ಚ್ 12) ಭೇಟಿ ಕೊಡಲಿದ್ದಾರೆ.
ಸಿಎಂ ಆದ ಮೂರು ತಿಂಗಳಿಗೇ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಕೆಡಿಪಿ ಸಭೆ ನಡೆಸಿದ್ದ ಸಿದ್ದರಾಮಯ್ಯ ಈಗ ಎರಡನೇ ಬಾರಿ ಭೇಟಿ ನೀಡುತ್ತಿದ್ದು, ಮಾರ್ಚ್ 12ರ ಮಧ್ಯಾಹ್ನ 3ಕ್ಕೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು 20 ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದ್ದು, ಸಿಎಂ ಹಾಗೂ ಡಿಸಿಎಂ ಅವರಿಗೆ ಆನೆಯ ಕಲಾಕೃತಿ ಕೊಡಲು ಜಿಲ್ಲಾಡಳಿತ ನಿರ್ಧರಿಸಿದೆ. ಇನ್ನು ಫಲಾನುಭವಿಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದ್ದು, 30 ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ.
ಸಿಎಂ ಲೋಕಸಭಾ ಕ್ಷೇತ್ರ: ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರವೂ ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ ಎರಡು ಬಾರಿ ಪೂರ್ವಭಾವಿ ಸಭೆ ನಡೆಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸೂಚನೆ ಕೊಟ್ಟಿದ್ದಾರೆ. ಚಾಮರಾಜನಗರದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮೂವರು ಕೈ ಶಾಸಕರಿರುವ ಹಿನ್ನೆಲೆ ಸಮಾವೇಶಕ್ಕೆ ಭಾರೀ ಜನ ಸೇರುವ ನಿರೀಕ್ಷೆ ವ್ಯಕ್ತವಾಗಿದೆ.
ಮೊದಲ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಭೇಟಿ: ಮೊದಲ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ 15ಕ್ಕೂ ಅಧಿಕ ಬಾರಿ ಭೇಟಿ ಕೊಟ್ಟು 5 ವರ್ಷ ಸುಭದ್ರವಾಗಿ ಆಡಳಿತ ನಡೆಸಿ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ಅಳಿಸಿದ್ದರು. ಭೇಟಿ ನೀಡುವ ಜೊತೆಗೆ ಸಾವಿರಾರು ಕೋಟಿ ಅನುದಾನವನ್ನೂ ಗಡಿಜಿಲ್ಲೆಗೆ ಹರಿಸಿದ್ದರು.
ಧ್ರುವ ಸ್ಮರಣೆಯಲ್ಲಿ ಭಾಗಿ: ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆಯಲಿದೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಚಾಮರಾಜನಗರಕ್ಕೆ 11.30ಕ್ಕೆ ಆಗಮಿಸುವ ಸಿಎಂ, ಡಿಸಿಎಂ ಹಾಗೂ ಸಚಿವರು ಮೊದಲು ಹೆಗ್ಗವಾಡಿಗೆ ತೆರಳಿ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 3ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.












Click it and Unblock the Notifications