Lok sabha election 2024: ಚಾಮರಾಜನಗರದಲ್ಲಿ ಮೋದಿ ಅಲೆ-ಸಿದ್ದು ಹವಾ, ಕೈ, ಕಮಲದ ನಡುವೆ ಪೈಪೋಟಿ ಹೇಗಿದೆ ಗೊತ್ತಾ?

ಚಾಮರಾಜನಗರ, ಮಾರ್ಚ್‌, 07: ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿಯಿದೆ. ದಿನಾಂಕ ಘೋಷಣೆಗೆ ದಿನಗಳು ಸಮೀಪಿಸುತ್ತಿರುವಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಹಳೇ ಮೈಸೂರು ಭಾಗದ ಜಾನಪದ ಕಲೆಗಳ ತವರೂರು, ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ ಕ್ಷೇತ್ರ ಜೊತೆಗೆ ನಾಡು-ನುಡಿಯ ಹೋರಾಟದ ನೆಲ ಎನ್ನುವ ಕಿರೀಟವೂ ಚಾಮರಾಜನಗರಕ್ಕಿದೆ.

ಕಾಂಗ್ರೆಸ್, ಬಿಜೆಪಿಯಲ್ಲಿ ಅಕಾಂಕ್ಷಿಗಳು ಟಿಕೆಟ್‌ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯನ್ನೂ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ದಲಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಲಿಂಗಾಯತ, ನಾಯಕ, ಒಬಿಸಿ ಮತದಾರರು ಕೂಡ ನಿರ್ಣಾಯಕರಾಗಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು, ಮೈಸೂರಿನ 4 ವಿಧಾನಸಭಾ ಕ್ಷೇತ್ರಗಳು ಒಟ್ಟು 8 ಕ್ಷೇತ್ರಗಳು ಲೋಕಸಭಾ ವ್ಯಾಪ್ತಿಗೆ ಬರಲಿದೆ.

Lok sabha election 2024 How is the competition between Congress BJP and JDS in Chamarajanagar

ಅಂದಹಾಗೆ, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಲೋಕ ಕ್ಷೇತ್ರದಲ್ಲಿ ಕಳೆದ ಬಾರಿ ಮೊದಲ ಬಾರಿಗೆ ಕಮಲ ಅರಳಿತ್ತು. ಮತ್ತೇ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆಲುವು ದಾಖಲಿಸಿ ಮೊದಲ ಬಾರಿಗೆ ಕಮಲ ಅರಳಿಸಿತ್ತು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ವಿ.ಶ್ರೀನಿವಾಸಪ್ರಸಾದ್ ದಿ.ಧ್ರುವನಾರಾಯಣಗೆ ಪ್ರಬಲ ಪೈಪೋಟಿ ಕೊಟ್ಟು ‌ಮೊದಲ ಬಾರಿ ಬಿಜೆಪಿ ಪತಾಕೆ ಹಾರಿಸಿತ್ತು. ಈಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೇ ಬಿಜೆಪಿ ಗೆಲ್ಲಿಸಬೇಕಾದ ಹೊಣೆಗಾರಿಕೆ ಕಮಲ ಪಡೆಯದ್ದಾಗಿದೆ. ತನ್ನ ಭದ್ರಕೋಟೆಯನ್ನು ಮತ್ತೆ ತನ್ನ ವಶಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಗಿದೆ.

ಸಂಸದರು ಏನು ಅಂಥಾರೆ?: ನಾನು ಸೋಮಾರಿಯಾಗಿ ಕಾಲ ಕಳೆದಿಲ್ಲ, ಸಂಸದನಾಗಿ ತೃಪ್ತಿಕರವಾಗಿ ಕೆಲಸ ಮಾಡಿದ್ದೇನೆ.‌ ಸಾವಿರಾರು ಮಂದಿ ಕಷ್ಟ-ಸುಖಗಳಿಗೆ ಭಾಗಿಯಾಗಿದ್ದೇನೆ. ಅನಾರೋಗ್ಯದ ನಡುವೆಯೂ ಉತ್ತಮವಾಗಿ, ತೃಪ್ತಿಕರವಾಗಿ ಕೆಲಸ ಮಾಡಿದ್ದೇನೆ ಎನ್ನುತ್ತಾರೆ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್.

ಸಂಸದರ ಸಾಧನೆ

1. 5 ವರ್ಷದ ಅವಧಿಯಲ್ಲಿ 17.8 ಕೋಟಿ ಅನುದಾನ ತಂದು ಅಭಿವೃದ್ಧಿ
2. ಸಂವಿಧಾನದ ಬಗ್ಗೆ ಜಾಗೃತಿ, ಅರಿವು ಮೂಡಿಸುವ ಸಲುವಾಗಿ
ಶಾಲಾ ಮಕ್ಕಳಿಗೆ ಸಂವಿಧಾನ ಓದು ಪುಸ್ತಕ ವಿತರಣೆ
3. ವರ್ಷದಲ್ಲಿ 68 ರಸ್ತೆ ಅಭಿವೃದ್ಧಿ
4. ಸಾವಿರಾರು ಮಂದಿ ವಿಶೇಷ ಚೇತನರಿಗೆ ಆಧುನಿಕ ಸಾಧನಾ ಸಲಕರಣೆ ವಿತರಣೆ
5. ಅಮೃತ ಸ್ಟೇಷನ್ ಯೋಜನೆಯಡಿ ಚಾಮರಾಜನಗರ ರೈಲ್ವೆ ನಿಲ್ದಾಣ ಅಭಿವೃದ್ಧಿ

ಬಿಜೆಪಿ-ಜೆಡಿಎಸ್‌ ಪ್ಲಸ್

1. ಎಂಟು ಕ್ಷೇತ್ರಗಳ ಒಕ್ಕಲಿಗರ ಸುಮಾರು 1.50 ಲಕ್ಷ ಮತಗಳು‌ ಬಿಜೆಪಿಯತ್ತ ಬರುವುದರಿಂದ ಪ್ಲಸ್ ಆಗಲಿದೆ. ಇನ್ನು ಎಂಟರಲ್ಲಿ ಒಂದು ಕ್ಷೇತ್ರ ಹನೂರಿನಲ್ಲಿ ಜೆಡಿಎಸ್ ಇದ್ದು ಇನ್ನು ಟಿ.ನರಸೀಪುರ, ಹೆಚ್.ಡಿ.ಕೋಟೆ ನಂಜನಗೂಡಿನಿಂದ ಬಿಜೆಪಿಗೆ ಜೆಡಿಎಸ್ ಮತಗಳು ಬರುವುದು ಪ್ಲಸ್ ಆಗಬಹುದು.
2. ಮೋದಿ ಅಲೆ ಹಾಗೂ ಕುಮಾರಸ್ವಾಮಿ ಅಭಿಮಾನಿಗಳು ಹೆಚ್ಚಿರುವುದು
3. ಶ್ರೀರಾಮಮಂದಿರ ನಿರ್ಮಾಣದಿಂದ ಹೆಚ್ಚು ಯುವಕರನ್ನು ಸೆಳೆದಿರುವುದು
4. ಯಡಿಯೂರಪ್ಪಗೆ ಕ್ಷೇತ್ರದಲ್ಲಿ ಹಿಡಿತವಿದ್ದು, ಲಿಂಗಾಯತ ಮತ ಬ್ಯಾಂಕ್ ಭದ್ರ

ಬಿಜೆಪಿ- ಜೆಡಿಎಸ್ ಮೈನಸ್‌

1. ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕ್ಷೇತ್ರಕ್ಕೆ ಅತೀ ಕಡಿಮೆ ಭೇಟಿ
2. ಅನಾರೋಗ್ಯ ಹಿನ್ನೆಲೆ ಅಭಿವೃದ್ಧಿ ಕುಂಠಿತ ಎಂಬ ಸಾರ್ವಜನಿಕ ಟೀಕೆ
3. ಯಾವುದೇ ಹೊಸ ಯೋಜನೆಗಳನ್ನು ಗಡಿಜಿಲ್ಲೆಗೆ ತರದಿರುವುದು
4. ಅಳಿಯಂದಿರಿಗೆ ಟಿಕೆಟ್ ನೀಡಿದರೇ ಆಂತರಿಕ ಕಲಹ ಸಾಧ್ಯತೆ
5. ಲೋಕಸಭಾ ಕ್ಷೇತ್ರದಲ್ಲಿ ಓರ್ವನೂ ಬಿಜೆಪಿ ಶಾಸಕನಿಲ್ಲದಿರುವುದು

ಕಾಂಗ್ರೆಸ್ ಪ್ಲಸ್

1. ಕ್ಷೇತ್ರದಲ್ಲಿ ಸಿಎಂ ಕ್ಷೇತ್ರ ಬರಲಿದ್ದು, ಸಿದ್ದರಾಮಯ್ಯ ಹವಾ ಹೆಚ್ಚಿದೆ.
2. ಜಾರಿಗೊಳಿಸಿದ 5 ಗ್ಯಾರಂಟಿ ಯೋಜನೆಗಳ ಫಲ
3. 8 ಕ್ಷೇತ್ರದಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆ
4. ಸಂಸದ ಶ್ರೀನಿವಾಸ್ ಪ್ರಸಾದ್ ನಿಷ್ಕ್ರಿಯತೆ ಬಗ್ಗೆ ಹೆಚ್ಚು ಪ್ರಚಾರ ಮತ್ತು ಟೀಕೆ

ಕಾಂಗ್ರೆಸ್ ಮೈನಸ್

1. ಮೋದಿ ಅಲೆಯಲ್ಲಿ ಅಭ್ಯರ್ಥಿ ಗೆಲ್ಲಿಸಬೇಕಾದ್ದ ಕಠಿಣ ಸ್ಥಿತಿ
2. ಹಿಂದುತ್ವದ ವಿಚಾರದಲ್ಲಿ ಬ್ಯಾಲೆನ್ಸ್ ಮಾಡುವ ಅನಿವಾರ್ಯತೆ
3. ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮತ್ತು ಒಗ್ಗಟ್ಟಿನ ಕೊರತೆ
4. ಗ್ಯಾರಂಟಿ ಜಾರಿ ಭರದಲ್ಲಿ ಅಭಿವೃದ್ಧಿ ಕಾರ್ಯಗಳೇ ಸ್ಥಗಿತ ಎಂಬ ಆರೋಪ

2019ರ ಚುನಾವಣೆ ಅಂಕಿ-ಅಂಶ

ವಿ‌.ಶ್ರೀನಿವಾಸ್ ಪ್ರಸಾದ್(ಬಿಜೆಪಿ)5, 68,537
ಆರ್.ದೃವನಾರಾಯಣ್ (ಕಾಂಗ್ರೆಸ್) 5,66,720.
ಡಾ. ಶಿವಕುಮಾರ್ (ಬಿಎಸ್‌ಪಿ) 87,637
1817 ಮತಗಳಿಂದ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಗೆಲುವು

ಮತದಾರರ ವಿವರ

ಪುರುಷರು - 8.90 ಲಕ್ಷ
ಮಹಿಳೆಯರು - 9.10 ಲಕ್ಷ
ತೃತೀಯ ಲಿಂಗಿಗಳು - 114
ಒಟ್ಟು - 18,00,114

ಜಾತಿವಾರು ಅಂದಾಜು ಲೆಕ್ಕಾಚಾರ

ಎಸ್‌ಸಿ - 4.60 ಲಕ್ಷ
ನಾಯಕ - 3.20 ಲಕ್ಷ.
ಲಿಂಗಾಯತ - 4.20 ಲಕ್ಷ.
ಉಪ್ಪಾರ - 1.80 ಲಕ್ಷ.
ಕುರುಬ - 1.30 ಲಕ್ಷ.
ಒಕ್ಕಲಿಗ - 1.80 ಲಕ್ಷ.
ಮುಸ್ಲಿಂ - 90 ಸಾವಿರ.
ಇತರೆ - 1.50 ಲಕ್ಷ

2024ರಲ್ಲಿ ಯಾರಿಗೆ ಟಿಕೆಟ್- ಆಕಾಂಕ್ಷಿಗಳು ಯಾರು.?

* ಬಿಜೆಪಿ ಟಿಕೆಟ್ ಆಕಾಂಕ್ಷಿಗಳು

ಬಾಲರಾಜ್, ಮಾಜಿ ಶಾಸಕಡಾ.ಮೋಹನ್, ( ವಿ.ಶ್ರೀನಿವಾಸ್ ಪ್ರಸಾದ್ ಆಳಿಯ)
ಹರ್ಷವರ್ಧನ್ ( ವಿ.ಶ್ರೀನಿವಾಸಪ್ರಸಾದ್ ಅಳಿಯ)
ರಾಜು , ನಿವೃತ್ತ ಐಎಫ್ಎಸ್ ಅಧಿಕಾರಿ
ಕೋಟೆ ಶಿವಣ್ಣ, ಮಾಜಿ ಸಚಿವ
ಎಸ್.ಮಹದೇವಯ್ಯ, ಕಾಂಪೊಸ್ಟ್ ನಿಗಮದ ಮಾಜಿ ಅಧ್ಯಕ್ಷ
ವೆಂಕಟರಮಣಸ್ವಾಮಿ, ಬಿಜೆಪಿ ಮುಖಂಡ

* ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು

ಡಾ.ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ಇಲಾಖೆ ಸಚಿವ
ಡಿ.ಎನ್‌‌.ನಟರಾಜು, ಕಾಂಗ್ರೆಸ್ ಯುವ ಮುಖಂಡ
ಜಿ.ಸಿ.ಕಿರಣ್, ಕಾಂಗ್ರೆಸ್ ಮುಖಂಡ
ಸುನೀಲ್ ಬೋಸ್ ( ಸಚಿವ ಎಚ್.ಸಿ. ಮಹಾದೇವಪ್ಪ ಮಗ)
ಕಾಗಲವಾಡಿ ಎಂ.ಶಿವಣ್ಣ, ಮಾಜಿ ಸಂಸದ
ಜಿ.ಎನ್.ನಂಜುಂಡಸ್ವಾಮಿ, ಮಾಜಿ ಶಾಸಕ.
ಬಿಎಸ್ಪಿ ಟಿಕೆಟ್ ಆಕಾಂಕ್ಷಿಗಳು
ಹ.ರಾ.ಮಹೇಶ್
ನಾಗಯ್ಯ,

ಮೋದಿ ಅಲೆ- ಸಿದ್ದು ಹವಾ ಯಾರಿಗೆ ವಿಜಯಮಾಲೆ?

ಚಾಮರಾಜನಗರ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದ್ದು, ಈ ಚುನಾವಣೆಯಲ್ಲಿ ಕಮಲ ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ಮಾಡಲಿದೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರವನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಈ ಸಲ ಮರಳಿ ಪಡೆಯಲು ಅಖಾಡಕ್ಕಿಳಿಯಲಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಬಳಿಕ ಕದನ ಕುತೂಹಲ ಕೆರಳಲಿದೆ.

ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. 1962ರಲ್ಲಿ ಮೈಸೂರಿನಿಂದ ಪ್ರತ್ಯೇಕಗೊಂಡಿತು. ಅಂದಿನಿಂದಲೂ ಬಹುಪಾಲು ಕೈ ಅಭ್ಯರ್ಥಿಗಳೇ ಗೆದ್ದಿದ್ದಾರೆ. 2009, 2014ರಲ್ಲಿ ಆರ್. ಧ್ರುವನಾರಾಯಣ್ ಜಯಗಳಿಸಿದ್ದರು. ಹ್ಯಾಟ್ರಿಕ್ ನಿರೀಕ್ಷೆಯೊಂದಿಗೆ 2019ರಲ್ಲಿ 5,66720 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ 5,68537 ಮತಗಳನ್ನು ಗಳಿಸಿ ವಿಜಯ ಸಾಧಿಸಿದರು. ಗೆಲುವಿನ ಅಂತರ 1817 ಮತಗಳು ಮಾತ್ರ. ಕಾಂಗ್ರೆಸ್ ಕಣದಲ್ಲಿ ಬಿಜೆಪಿ ಖಾತೆ ತೆರೆಯಿತು.

ಆದರೆ ಈ ಸಲ 'ಕೈ' ಪಡೆ ಕ್ಷೇತ್ರವನ್ನು ಮರು ಪಡೆಯುವ ಛಲತೊಟ್ಟಿದೆ. ಕಮಲಪಾಳಯ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಸ್ಥಳೀಯವಾಗಿ ಚುನಾವಣಾ ಅಸ್ತ್ರಗಳಾಗುವಂತ ಯಾವ ವಿವಾದಗಳೂ ಇಲ್ಲಿಯವರೆಗೂ ಇಲ್ಲಿ ಜನ್ಮ ಪಡೆದಿಲ್ಲ. ಅಯೋಧ್ಯೆ ಶ್ರೀರಾಮಮಂದಿರ, ಪ್ರಧಾನ ಮಂತ್ರಿ ನರೇಂದ್ರಮೋದಿ ಅಲೆ ಬಿಜೆಪಿಗೆ ಪ್ಲಸ್‌ಪಾಯಿಂಟ್.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲಿನ ಅಭಿಮಾನ, ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇತೃತ್ವವಹಿಸಿರುವ ಮೊದಲ ಚುನಾವಣೆ ಎಂಬ ಕಾರಣಗಳೂ ಸೇರಿಕೊಂಡಿವೆ. ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ. ಸುತ್ತಮುತ್ತಲೆಲ್ಲಾ ಸಿದ್ದು ಹವಾ ಕೂಡ ಜೋರಾಗಿದೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಾಲಿನ ಬಹುದೊಡ್ಡ 'ಶಕ್ತಿ'.

ಈ ಕುರಿತು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಟರಾಜು ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿದ್ದು, ಈ ಬಾರಿ ಕಾಂಗ್ರೆಸ್ ಗೆಲ್ಲಲ್ಲಿದೆ. ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ, ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಸಂಸದನನ್ನಾಗಿ ಕಾಂಗ್ರೆಸ್ ಮಾಡಲಿದೆ ಎಂದು ವಿಶ್ವಾಸ ಹೊರಹಾಕಿದ್ದಾರೆ.

ಬಿಜೆಪಿ ಮುಖಂಡ ಮುಡ್ನಕೂಡು ಪ್ರಕಾಶ್ ಮಾತ‌ನಾಡಿ, ವ್ಯಕ್ತಿ ಗೌಣ ಕಮಲ ಗುರುತು ಮೋದಿ ಹೆಸರಿಗೆ ಮತ ಬೀಳಲಿದೆ. ಸಿದ್ದರಾಮಯ್ಯ ಪ್ರತಿಷ್ಠೆ, ಒಬ್ಬ ಬಿಜೆಪಿ ಶಾಸಕನೂ ಇಲ್ಲದಿರುವುದು ಗಣನೆಗೂ ಬರುವುದಿಲ್ಲ. ಬಿಜೆಪಿ ಈ ಬಾರಿ ಜಯಭೇರಿ ಬಾರಿಸಲಿದೆ ಎಂದು ಷರಾ ಬರೆದಿದ್ದಾರೆ. ಒಟ್ಟಿನಲ್ಲಿ ಗಡಿಜಿಲ್ಲೆ‌ ಕಿರೀಟ ತೊಡಲು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ವರಿಷ್ಠರು ಯಾರಿಗೆ ಟಿಕೆಟ್ ಕೊಡಲಿದ್ದಾರೆ. ಮತದಾರ ಯಾರಿಗೆ ಆಶೀರ್ವಾದ ಮಾಡಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+