ಗುಂಡ್ಲುಪೇಟೆ: ಹಳ್ಳಕ್ಕೆ ಇಳಿದ ಕೆಎಸ್‌ಆರ್‌ಟಿಸಿ ಬಸ್
ಚಾಮರಾಜನಗರ, ಸೆಪ್ಟೆಂಬರ್, 27: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ (KSRTC) ಬಸ್ ಹಳ್ಳಕ್ಕೆ ಇಳಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಯರಿಯೂರು ಸಮೀಪ ಇಂದು (ಸೆಪ್ಟೆಂಬರ್ 27) ನಡೆದಿದೆ. ಇನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಯರಿಯೂರು ಗ್ರಾಮದ ಕಡೆಯಿಂದ ಬೊಮ್ಮಲಾಪುರ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 47 ಪ್ರಯಾಣಿಕರು ಇದ್ದರು. ಇನ್ನು ಈ ಬಸ್ ಕಂದಕಕ್ಕೆ ಉರುಳಿದ ವೇಳೆ ಕುಂದಕೆರೆ ಗ್ರಾಮದ ರಂಗಯ್ಯ (62) ಮಹಾದೇವಯ್ಯ(55 ) ಸೇರಿ ಮೂವರಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಅವರನ್ನು ಆಂಬುಲೆನ್ಸ್‌ನಲ್ಲಿ ಗುಂಡ್ಲುಪೇಟೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.

ಚಾಲಕ ಚಂದ್ರಶೇಖರಪ್ಪ ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದು, ಆಕಸ್ಮಿಕವಾಗಿ ತನ್ನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಕಂಡಕ್ಟರ್ ಪ್ರಸನ್ನ ಜೊತೆ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಇನ್ನು ಬಸ್ಸನ್ನು ಮೇಲೆತ್ತಲು ಕ್ರೇನ್ ತರಿಸಲಾಗುತ್ತಿದೆ ಎಂದು ಹೇಳಿದರು. ಸದ್ಯ ಈ ಪ್ರಕರಣ ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಲಾರಿಗೆ ಡಿಕ್ಕಿ ಹೊಡೆದ ಕಾರು: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಬಂಧವಿಲ್ಲ. ಆದರೆ ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಘಟನೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ತಿಳಿದುಬಂದಿತ್ತು.
ಮೂವರು ಸಾವು: ಟಿಪ್ಪರ್ ಲಾರಿ ಹರಿದು ಕೇರಳ ಮೂಲದ ಮೂವರು ದುರ್ಮರಣ ಹೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಸುಲ್ತಾನ್ ಬತ್ತೇರಿ ತಾಲೂಕಿನ ಮಲವಾಯಿಲ್ ಗ್ರಾಮದವರಾದ ಧನೇಶ್‍ಮೋಹನ್(29) ಪತ್ನಿ ಅಂಜು(24) ಮತ್ತು ಮಗು ವಿಚ್ಚು(2) ಮೃತರು.
ಕೇರಳ ಮೂಲದ ಪತಿ, ಪತ್ನಿ ಮತ್ತು ಮಗ ಮೂವರು ಒಂದೇ ಬೈಕ್‌ನಲ್ಲಿ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೂತನೂರು ಗುಡ್ಡದಿಂದ ಕಲ್ಲು ತುಂಬಿಕೊಂಡು ಬರುತ್ತಿದ್ದ ಕೆಎ-11-ಬಿ-8497 ನೋಂದಣಿಯ ಟಿಪ್ಪರ್ ಲಾರಿಯು ಮುಂಬದಿ ಹೋಗುತ್ತಿದ್ದ ಕೇರಳ ಮೂಲದ ಬೈಕ್‌ಗೆ ಗುದ್ದಿದ್ದಾನೆ. ಬಳಿಕ ಬೈಕ್ ಸವಾರನ ಮೇಲೆ ಲಾರಿ ಹರಿದು ದೇಹ ರಸ್ತೆಯಲ್ಲೇ ಬಿದ್ದಿದ್ದು, ಇನ್ನಿಬ್ಬರು ಲಾರಿ ಅಡಿಯಲ್ಲಿ ಬೈಕ್ ಸಮೇತ ಸಿಲುಕಿಕೊಂಡು 300 ಮೀಟರ್‌ನಷ್ಟು ದೂರಕ್ಕೆ ಎಳೆದುಕೊಂಡು ಬಂದಿದೆ.
ಇನ್ನು ಚಾಲಕ ಟಿಪ್ಪರ್ ಅನ್ನು ಕುಡಿದ ಮತ್ತಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಭಾರ ಹೊತ್ತ ವಾಹನ ಸಾಗುವಾಗ ಅಜಾರೂಕ ಚಾಲನೆ ಮಾಡಿದ್ದಾನೆ. ಬೈಕ್‍ಗೆ ಡಿಕ್ಕಿಯಾದ ನಂತರವೂ ಟಿಪ್ಪರ್ ಅನ್ನು ನಿಯಂತ್ರಿಸದ ಕಾರಣ 300 ಮೀಟರ್ ದೂರದವರೆಗೆ ಮೃತದೇಹಗಳನ್ನು ಟಿಪ್ಪರ್ ಎಳೆದೋಯ್ದಿದೆ ಎಂದು ಪ್ರತ್ಯೇಕ್ಷದರ್ಶಿಗಳು ಆಕ್ರೋಶ ಹೊರಹಾಕಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಿ ಟಿಪ್ಪರ್ ಮತ್ತು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಮಾಹಿತಿ ನೀಡಿದ ಹಿನ್ನೆಲೆ ಮೃತರ ವಾರಸುದಾರರು ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಅವರ ವಶಕ್ಕೆ ನೀಡಲಾಗುತ್ತದೆ. ಘಟನೆ ಸಂಬಂಧ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಗುಂಡ್ಲುಪೇಟೆ ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications