ಕಾವೇರಿ ಹೊರಹರಿವು ಹೆಚ್ಚಳ: ಭರಚುಕ್ಕಿ ಜಲಪಾತದ ಬಳಿ ಬೀಡು ಬಿಟ್ಟ 'ಗಜ' ಗ್ಯಾಂಗ್
ಚಾಮರಾಜನಗರ, ಜುಲೈ, 25: ಕಾವೇರಿ ಹೊರಹರಿವು ಹೆಚ್ಚಾದ ಹಿನ್ನೆಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಭರಚುಕ್ಕಿ ಜಲಪಾತದ ಆಸುಪಾಸು ಕಾಡಾನೆ ಹಿಂಡು ಬೀಡು ಬಿಟ್ಟು ಆತಂಕ ಸೃಷ್ಟಿಸಿದೆ.
ಶಿವನಸಮುದ್ರ ಗ್ರಾಮದ ಮನೆ ಮುಂದೆ ನಿಲ್ಲಿಸಿದ್ದ ತರಕಾರಿ ತುಂಬಿದ್ದ ಆಟೋವನ್ನು ಜಖಂಗೊಳಿಸಿ ತರಕಾರಿ ತಿಂದು, ತುಳಿದು ನಾಶ ಪಡಿಸಿದ್ದು ಮನೆಯೊಂದರ ಮೇಲೂ ದಾಳಿ ಮಾಡಿ ಛಾವಣಿಯನ್ನು ಧ್ವಂಸ ಮಾಡಿದೆ.

ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವ ಹಿನ್ನೆಲೆ ದಡದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ರೈತರ ಬೆಳೆಗಳಿಗೆ ಲಗ್ಗೆ ಇಟ್ಟು ಅಪಾರ ಅನಾಹುತ ಮತ್ತು ನಷ್ಟ ಉಂಟು ಮಾಡಿದೆ. ಶಿವನಸಮುದ್ರದ ಜಮೀನಿಗೆ ನುಗ್ಗಿ ಟೊಮ್ಯಾಟೊ, ಬೀನ್ಸ್, ಜೋಳದ ಬೆಳೆಗಳನ್ನು ಕಾಡಾನೆಗಳು ನಾಶ ಪಡಿಸಿವೆ.
ಭರಚುಕ್ಕಿಗೆ ತೆರಳುವ ಎರಡೂ ಬದಿಗಳಲ್ಲಿ ಆನೆಗಳ ಸುತ್ತಾಟವಿದ್ದು, ಪ್ರವಾಸಿಗರಿಗೂ ಇದರಿಂದ ಆತಂಕ ಎದುರಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ: ಬೆಳಗಾವಿ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆ ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಮಾರ್ಕೆಂಡೆಯ ನದಿ ನೀರಿನ ಹರಿವು ಹೆಚ್ಚಳ ಹಿನ್ನೆಲೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಅಂಬೇವಾಡಿಯ ರೈತ ಕುಟುಂಬಗಳು ವಾಸವಾಗಿದ್ದ ಮನೆಗಳನ್ನು ನದಿ ನೀರು ಸುತ್ತುವರೆದಿದ್ದು, ಇಲ್ಲಿನ ಜನರು ಜೀವವನ್ನು ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಮಳೆಗಾಲ ಸಮಯದಲ್ಲೂ ಈ ಭಾಗದ ರೈತ ಕುಟುಂಬಗಳಿಗೆ ಒಂದಲ್ಲ ಒಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇನ್ನು ಇದೀಗ ನದಿ ನೀರು ಮನೆಯೊಳಗೆ ನುಗ್ಗುವ ಭೀತಿ ಎದುರಾದ ಹಿನ್ನೆಲೆ ರೈತರು ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಮೆನೆಯಿಂದ ಬೇರೆಡೆಗೆ ಸ್ಥಳಾಂತರಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಈಗಾಗಲೇ ಈ ಭಾಗದ ಸಾವಿರಾರು ಹೆಕ್ಟೇರ್ ಜಮೀನು ಕೂಡ ಮಾರ್ಕಂಡೇಯ ನದಿ ನೀರಿನಲ್ಲಿ ಮುಳುಗಡೆಯಾಗಿದ್ದು, ಪರಿಣಾಮ ಭತ್ತ, ಕಬ್ಬು, ಮೆಣಸಿನಕಾಯಿ, ಮೆಕ್ಕೆಜೋಳ, ತರಕಾರಿ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಇನ್ನು ಬೆಳೆಗಳನ್ನು ಕಳೆದುಕೊಂಡ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಜಲಪಾತದ ಅದ್ಭುತ ದೃಶ್ಯ ಡ್ರೋಣ್ ಕಣ್ಣಲ್ಲಿ ಸೆರೆ: ಈಗಾಗಲೇ ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಪ್ರಮುಖ ಜಲಮೂಲಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ. ಇನ್ನು ಫಾಲ್ಸ್‌ಗಳು ಕೂಡ ಧುಮ್ಮಿಕ್ಕುತ್ತಿದ್ದು, ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗೆಯೇ ಇದೀಗ ವಿಶ್ವವಿಖ್ಯಾತ ದೂದ್ ಸಾಗರದ ಜಲಪಾತ ಧುಮ್ಮಿಕ್ಕುತ್ತಿದ್ದು, ಈ ಸುಂದರ ದೃಶ್ಯ ಡ್ರೋಣ್ ಕಣ್ಣಲ್ಲಿ ಸೆರೆಯಾಗಿದೆ.
100 ಅಡಿ ಅಗಲದ ದೂಧ್ ಸಾಗರ ಜಲಪಾತ ಬೆಳಗಾವಿ ವಾಸ್ಕೊ ಡ ಗಾಮಾ ರೈಲು ಮಾರ್ಗದ ಮಧ್ಯೆ ಇದ್ದು, ಬೆಳಗಾವಿಯಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಇದೀಗ ಭಾರೀ ಮಳೆ ಹಿನ್ನೆಲೆ ಮಹದಾಯಿ ನದಿ ನೀರು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಇದರ ನೀರೇ ಜಲಪಾತದ 1,017 ಅಡಿ ಮೇಲಿನಿಂದ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ.
ಮಹದಾಯಿ ನದಿ ನೀರು ಸಾಗರದಂತೆ ಹರಿದುಬರುತ್ತಿರುವ ಹಿನ್ನೆಲೆ ದೂದ್ ಸಾಗರ ಜಲಪಾತದಲ್ಲಿ ಜಲವೈಭವ ಸೃಷ್ಟಿಯಾಗಿದ್ದು, ಇದು ಡ್ರೋನ್ ಕಣ್ಣಿಗೆ ಸೆರೆಯಾಗಿದೆ. ಇನ್ನು ಈ ಸ್ವರ್ಗದಂತಹ ಅದ್ಭುತ ದೃಶ್ಯ ಎಂಥವರನ್ನು ತನ್ನೆಡೆಗೆ ಸೆಳೆದೇ ಬಿಡುತ್ತದೆ. ಕ್ಯಾಸ್ಟಲ್ ರಾಕ್ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರ ಹೋದರೆ ಈ ಜಲಪಾತ ಸಿಗುತ್ತದೆ.












Click it and Unblock the Notifications