Kerala Landslide: ಸಾಲುಸಾಲು ಆ್ಯಂಬುಲೆನ್ಸ್‌ಗಳಲ್ಲಿ ಬಂದ ಶವಗಳಿಗೆ ಕೊನೇ ನಮನ ಸಲ್ಲಿಸಿದ ಸ್ಥಳೀಯರು, ಮುಂದುವರೆದ ರಕ್ಷಣಾ ಕಾರ್ಯ
ಚಾಮರಾಜನಗರ, ಜುಲೈ, 31: ಕೇರಳ ಭೂ ಕುಸಿತದಲ್ಲಿ ಮೃತಪಟ್ಟವರಿಗೆ ಮೇಪ್ಪಾಡಿಯಲ್ಲಿ ಸ್ಥಳೀಯರು ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.
ಭೂ ಕುಸಿತದಿಂದ ಹತ್ತಾರು ಕಿಲೋ ಮೀಟರ್ ದೂರದ ಚಾಲಿಯಾರ್ ನದಿಯಲ್ಲಿ ಸಿಲುಕಿದ್ದ ಶವಗಳನ್ನು ಹೊತ್ತುಬಂದ ಸಾಲು ಸಾಲು ಆ್ಯಂಬುಲೆನ್ಸ್‌ಗಳಿಗೆ ಸ್ಥಳೀಯರು ಸಾಲಾಗಿ ನಿಂತು ಪುಷ್ಪ ನಮನ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ.

ಯಾರೂ ಊಹಿಸದಂತೆ ಜರುಗಿದ ದುರಂತದಲ್ಲಿ ಮಡಿದವರಿಗೆ ಮೇಪ್ಪಾಡಿ ವೃತ್ತದಲ್ಲಿ ಹೂವು ಹಿಡಿದು ನಿಂತ ಹತ್ತಾರು ಮಂದಿ ಆ್ಯಂಬುಲೆನ್ಸ್‌ಗಳು ತೆರಳುವಾಗ ಪುಷ್ಪಾರ್ಚನೆ ಮಾಡಿ ಅಂತಿಮ ನಮನ ಸಲ್ಲಿಸುವ ಕರುಳು ಹಿಡಿದಂತಾಯಿತು. ಕೇರಳ ಭೂ ಕುಸಿತದಲ್ಲಿ ಕನ್ನಡಿಗರು ಸಹ ಮರಣ ಅಪ್ಪಿದ್ದು, ಶೋಧಕಾರ್ಯ ಮುಂದುವರೆದಿದೆ. ಚಾಮರಾಜನಗರ ಅಧಿಕಾರಿಗಳ ತಂಡ ಕೇರಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಾದಲ್ಲಿ ತೊಡಗಿಸಿಕೊಂಡಿದ್ದಾರೆ.
ಕುಟುಂಬವನ್ನು ರಕ್ಷಿಸಿದ ಹಸು: ಕೇರಳದ ಭೂ ಕುಸಿತದಲ್ಲಿ ಕ್ಷಣಮಾತ್ರದಲ್ಲಿ ಚಾಮರಾಜನಗರದ ಕುಟುಂಬ ಬಚಾವ್ ಆದ ಘಟನೆ ವೈನಾಡಿನ ಚೂರಲ್ ಮಲೆಯಲ್ಲಿ ನಡೆದಿದೆ.
ಚೂರಲ್ ಮಲೆಯಲ್ಲಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವವರು ಪಾರಾಗಿದ್ದು, ಮೆಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ.
ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಮೆಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್ ಮಲೆಯಲ್ಲಿದ್ದರು. ಚೂರಲ್ ಮಲೆಗೂ ಮೆಪಾಡಿಗೂ 6 ಕಿಮೀ ದೂರದಲ್ಲಿದ್ದು ಭೂ ಕುಸಿತ ಉಂಟಾಗುವ ಕೆಲವೇ ಸಮಯಕ್ಕೂ ಮುನ್ನ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ.
ಕುಟುಂಬ ಕಾಪಾಡಿದ ಹಸು: ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿ, ಅಳುವ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿದ್ದನ್ನು ಕಂಡು ಕೂಡಲೇ ವಿನೋದ್ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ.
ಬಳಿಕ ನೋಡ ನೋಡುತ್ತಿದ್ದಂತೆ ತಾವಿದ್ದ ಮನೆ, ವಾಹನ ಎಲ್ಲವೂ ಮಾಯವಾದಂತೆ ಭೂಮಿಯಡಿ ಹುದುಗಿಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ. ಕೂಡಲೇ ಮೆಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದರಿಂದ ಪ್ರವಿದಾ, ಶ್ರೀಲಜ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಬಂದು ಕಾರ್ ಮೂಲಕ ಚಾಮರಾಜನಗರಕ್ಕೆ ಮಂಗಳವಾರ ಸಂಜೆ ತಲುಪಿದ್ದಾರೆ.
ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತ್ತರನ್ನು ರಕ್ಷಣಾ ಪಡೆ ಮಂಗಳವಾರ ಸಂಜೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಾಕಿದ್ದ ಹಸು ದೇವರಂತೆ ಕುಟುಂಬಕ್ಕೆ ಅಪಾಯದ ಬಗ್ಗೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರು ಮಾಡಿದೆ.












Click it and Unblock the Notifications