ಮೂಲಸೌಲಭ್ಯಗಳ ಕೊರತೆ: ಮತದಾನಕ್ಕೆ ಮುಂದೆ ಬಾರದ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು
ಚಾಮರಾಜನಗರ, ಮೇ, 10: ರಾಜ್ಯದೆಲ್ಲೆಡೆ ವಿಧಾನಸಭೆ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದ್ದು, ಹಲವೆಡೆ ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಘಟನೆಯೂ ನಡೆದಿದೆ. ಅದೇ ರೀತಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು ಮೂಲಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ.
ಯಾವ ಜನಪ್ರತಿನಿಧಿಗಳು ಕೂಡ ನಮಗೆ ಮೂಲಸೌಕರ್ಯಗಳನ್ನು ಒದಗಿಸಿಲ್ಲ ಎಂದು ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ಎಲಚೆಟ್ಟಿ ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದಾರೆ. ಇದು ಕಾಡಂಚಿನ ಪ್ರದೇಶ ಆಗಿದ್ದು, ಇಲ್ಲಿ ಮೂಲಭೂತ ಸೌಕರ್ಯ ಹಾಗೂ ರಸ್ತೆ ನಿರ್ಮಾಣ ಮಾಡಿಸಿದಿರುವ ಹಿನ್ನೆಲೆ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೂಲಸೌಕರ್ಯಗಳನ್ನು ಒದಗಿಸುವವರೆಗೂ ನಾವು ಮತದಾನಕ್ಕೆ ಬರುವುದಿಲ್ಲ ಎಂದು ಚಿಕ್ಕ ಎಲಚೆಟ್ಟಿ ಗ್ರಾಮದ 101 ಮತದಾರರು ಪಟ್ಟು ಹಿಡಿದಿದ್ದಾರೆ.
ವಿ.ಸೋಮಣ್ಣ ದಂಪತಿ ಮತದಾನ
ಮತ್ತೊಂದೆಡೆ ಚಾಮರಾಜನಗರದಲ್ಲಿ ಮೊದಲ ಬಾರಿ ದಂಪತಿ ಸಮೇತ ಆಗಮಿಸಿ ಸಚಿವ ವಿ.ಸೋಮಣ್ಣ ಅವರು ಮತದಾನ ಮಾಡಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಸೋಮಣ್ಣ ಅವರು, ನಗರದ ಪೇಟೆ ಪ್ರೈಮರಿ ಶಾಲೆಯ ಬೂತ್ ನಂ 74ರಲ್ಲಿ ಮತದಾನ ಮಾಡಿದರು. 9:30ಕ್ಕೆ ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿದ ವಿ.ಸೋಮಣ್ಣ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿ ಗಮನ ಸೆಳೆದರು.












Click it and Unblock the Notifications