ಗುಂಡ್ಲುಪೇಟೆಯಲ್ಲಿ ಚುನಾವಣಾ ಚಾಣಕ್ಯ ಅಮಿತ್ ಶಾ ರೋಡ್ ಶೋಗೆ ಕ್ಷಣಗಣನೆ
ಚಾಮರಾಜನಗರ, ಏಪ್ರಿಲ್, 24: ಚುನಾವಣಾ ಚಾಣಕ್ಯ ಅಮಿತ್ ಶಾ ರೋಡ್ ಶೋಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣ ಕೇಸರಿ ಕೋಟೆಯಾಗಿ ಮಾರ್ಪಟ್ಟಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಬಿಜೆಪಿ ಧ್ವಜಗಳು ರಾರಾಜಿಸುತ್ತಿದೆ. 11:40ರ ಸುಮಾರಿಗೆ ಅಮಿತ್ ಶಾ ಗುಂಡ್ಲುಪೇಟೆಯ ಡಿ.ದೇವರಾಜ ಅರಸು ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲ್ಲಿದ್ದು, ಅಲ್ಲಿಂದ ಬಿಜೆಪಿ ಪ್ರಚಾರ ವಾಹನದ ಮೂಲಕ ರೋಡ್ ಶೋ ನಡೆಸಲಿದ್ದಾರೆ.
ಇನ್ನು ರಾಷ್ಟ್ರೀಯ ಹೆದ್ದಾರಿ ಮೂಲಕ ಗುಂಡ್ಲುಪೇಟೆ ಹಳೇ ಬಸ್ ನಿಲ್ದಾಣ ತಲುಪುವ ಶಾ ಅಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ, ಅಮಿತ್ ಶಾ ಏರುವ ಪ್ರಚಾರ ವಾಹನ, ಹೆಲಿಪ್ಯಾಡ್‌ಗಳನ್ನು ಸಿಆರ್‌ಪಿಎಫ್ ಭದ್ರತಾ ಪಡೆ ತಮ್ಮ ವಶಕ್ಕೆ ಪಡೆದುಕೊಂಡು ಹದ್ದಿನ ಕಣ್ಣು ಇಟ್ಟಿದ್ದಾರೆ. ಅಲ್ಲದೆ ಅಮಿತ್ ಶಾ ಬೆಂಗಾವಲು ಪಡೆ ಪ್ರಚಾರ ವಾಹನದಲ್ಲಿ ಟ್ರಯಲ್ ನಡೆಸಿ, ಯಾವುದೇ ಅಹಿತಕರ ಘಟನೆಯಾಗದಂತೆ ಕ್ರಮ ಕೈಗೊಂಡಿದೆ.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಹಾಗೂ ಹಳೇ ಬಸ್ ನಿಲ್ದಾಣದ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಬಿಜೆಪಿ ಬಾವುಟಗಳನ್ನು ಹಾಕಲಾಗಿದ್ದು, ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಐಜಿಪಿ ಪ್ರವೀಣ್ ಮಧುಕರ್ ಪವರ್ ನೇತೃತ್ವದಲ್ಲಿ ಸುಮಾರು 800 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಶಾಸಕ ಸಿ.ಎಸ್.ನಿರಂಜನಕುಮಾರ್ ಸೇರಿದಂತೆ ಬಿಜೆಪಿ ಪ್ರಮುಖ ಅಮಿತ್ ಶಾಗೆ ಸಾಥ್ ನೀಡಲಿದ್ದಾರೆ.
ಬಿ.ವೈ ವಿಜಯೇಂದ್ರ ಚುನಾವಣಾ ಪ್ರಚಾರ
ಹಾಗೆಯೇ ಬಿಜೆಪಿ ಹಿರಿಯ ನಾಯಕ, ಸಚಿವ ಸೋಮಣ್ಣ ಮುಂಜಾನೆಯಿಂದಲೇ ಚಾಮರಾಜನಗರದಲ್ಲಿ ಮತಬೇಟೆ ನಡೆಸಿದರೆ, ಬಿಜೆಪಿ ಯುವ ನಾಯಕ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಇತ್ತೀಚೆಗಷ್ಟೇ ಹನೂರು ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು.
ಮಾರ್ನಿಂಗ್ ವಾಕಿಂಗ್‌ನಿಂದಲೇ ಸಚಿವ ಸೋಮಣ್ಣ ಶುಕ್ರವಾರ ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿದರು. ಚಾಮರಾಜನಗರದ ವಿವಿಧ ಬಡಾವಣೆಗಳು, ಟೀ ಅಂಗಡಿಗಳಿಗೂ ಭೇಟಿ ನೀಡಿದ ಸೋಮಣ್ಣ ತನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡರು, ಉಪ್ಪಾರ ಸೇರಿದಂತೆ ವಿವಿಧ ಸಮುದಾಯ ಮುಖಂಡರ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಪಕ್ಷ ಹಾಗೂತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.
ಚಾಮರಾಜನಗರದಲ್ಲಷ್ಟೇ ಅಲ್ಲದೇ ವರುಣಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗಿಳಿದಿರುವ ಸಚಿವ ಸೋಮಣ್ಣ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. 2006ರಲ್ಲಿ ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಪೆಟ್ಟು ತಿಂದಿದ್ದೇನೆ, ಬರಿ ಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ. ನನ್ನ ಕಾರಿನ ಗ್ಲಾಸ್ ಒಡೆದಿದ್ದರು. ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮಾಜ ಎದುರು ಹಾಕಿಕೊಂಡು ಅವರುಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದರು.
ಹಳೇ ಮೈಸೂರು ಭಾಗದಲ್ಲಿ ಶುಕ್ರವಾರದಿಂದ ಪ್ರಚಾರಕ್ಕೆ ಧುಮುಕಿರುವ ಬಿಜೆಪಿ ಯುವ ನಾಯಕ ವಿಜಯೇಂದ್ರ ಹನೂರು, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಹಾಗೂ ಉಮ್ಮತ್ತೂರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದ್ದರು.
ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಅವರನ್ನು ಮೂಲೆಗುಂಪೆ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಉತ್ತರಿಸಿದ ಬಿ.ವೈ.ವಿಜಯೇಂದ್ರ , ಯಡಿಯೂರಪ್ಪ ಅವರ ರಟ್ಟೆ ಇನ್ನೂ ಗಟ್ಟಿಯಾಗಿದೆ. ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ಅಂತಾ ಜನತೆಗೆ ಗೊತ್ತು. ಚುನಾವಣೆ ಸಂದರ್ಭದಲ್ಲಿ ಯಾರೋ ಒಬ್ಬರು ಕಾಂಗ್ರೆಸ್‌ಗೆ ಬಂದಿದ್ದಾರೆ ಅಂತಾ ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಅಂತ ಬಿಂಬಿಸಲು ಹೊರಟಿದ್ದಾರೆ. ಆದರೆ ಅದನ್ನು ಯಾರೂ ಒಪ್ಪಲ್ಲ ಎಂದಿದ್ದರು.












Click it and Unblock the Notifications