ಮನೆಯಿಂದಲೇ ಮತದಾನ: ಚಾಮರಾಜನಗರದಲ್ಲಿ ಹಕ್ಕು ಚಲಾಯಿಸಿದ 313 ಮಂದಿ
ಚಾಮರಾಜನಗರ, ಏಪ್ರಿಲ್ 30: ಚಾಮರಾಜನಗರ ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಕೋರಿಕೆ ಸಲ್ಲಿಸಿದ್ದ 329 ಎಂಭತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರ ಮತದಾರರ ಪೈಕಿ 313 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 50 ಹಿರಿಯ ನಾಗರಿಕರು, 25 ವಿಶೇಷಚೇತನರು ಮತ ಚಲಾಯಿಸಿದ್ದು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 49 ಹಿರಿಯ ನಾಗರಿಕರು, 31 ವಿಶೇಷಚೇತನರು ಮತ ಚಲಾಯಿಸಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 51 ಹಿರಿಯ ನಾಗರಿಕರು, 26 ವಿಶೇಷಚೇತನರು ಮತ ಚಲಾಯಿಸಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ 59 ಹಿರಿಯ ನಾಗರಿಕರು, 22 ವಿಶೇಷಚೇತನರು ಮತ ಚಲಾಯಿಸಿದ್ದಾರೆ.

ಕೋರಿಕೆ ಅರ್ಜಿ ಸಲ್ಲಿಸಿ ನೊಂದಣಿಯಾದ ಅವಧಿಯ ಬಳಿಕ 8 ಮಂದಿ ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಬ್ಬರು ಮನೆಯಲ್ಲಿ ಲಭ್ಯವಿಲ್ಲದೆ ಹೊರಗೆ ತೆರಳಿದ್ದಾರೆ. ಮೂವರು ನಿರಾಕರಿಸಿದ್ದಾರೆ. ಈ ಎಲ್ಲಾ ಉಳಿದ ಎಂಟು ಮಂದಿಗೆ ಮೇ 6ರಂದು ಮತ್ತೊಮ್ಮೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮತದಾನ, ಮತ ಎಣಿಕೆ ಹಿನ್ನೆಲೆ : ಮದ್ಯ ಮಾರಾಟ ನಿಷೇಧ
ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಹಾಗೂ ಮತ ಎಣಿಕೆಯು ಶಾಂತ ರೀತಿಯಲ್ಲಿ ಮತ್ತು ಮುಕ್ತವಾಗಿ ನಡೆಸಲು ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿ (ಪರವಾನಗಿ) ಗಳನ್ನು ಮೇ 8ರಂದು ಸಂಜೆ 5ರಿಂದ ಮತದಾನ ದಿನವಾದ ಮೇ 10ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಆದೇಶ ಹೊರಡಿಸಿದ್ದಾರೆ.

ಹಾಗೂ ಮತ ಎಣಿಕೆ ನಿಮಿತ್ತ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೆ ಮದ್ಯದ ಅಂಗಡಿ ಮುಚ್ಚಲು ಹಾಗೂ ಯಾವುದೇ ರೀತಿಯ ಮದ್ಯದ ಸಾಗಾಣಿಕೆ, ಮಾರಾಟ, ಶೇಖರಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಒಣ ದಿನಗಳೆಂದು ಘೋಷಿಸಿ, ಒಣದಿನಗಳ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಸನ್ನದು ಹೊಂದಿರುವ ಬಾರ್, ಕ್ಲಬ್, ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಇತ್ಯಾದಿಗಳಲ್ಲಿ ಹಾಗೂ ಹೋಟೆಲ್, ಡಾಬಾ ಅಥವಾ ಯಾವುದೇ ತರಹದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಣ ದಿನಗಳೆಂದು ಘೋಷಿಸಿರುವ ಸಮಯದಲ್ಲಿ ಮದ್ಯ ಸಾಗಾಣಿಕೆ, ಮಾರಾಟ, ಶೇಖರಣೆ, ಹಂಚಿಕೆಯು ಅಪರಾಧವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications