ರಾಹುಲ್ ಗಾಂಧಿಯದ್ದು ಮಾನವ ಜಾತಿ: ಶಾಸಕ ಯತ್ನಾಳ್‌ಗೆ ಸಚಿವರ ತಿರುಗೇಟು
ಚಾಮರಾಜನಗರ, ಸೆಪ್ಟೆಂಬರ್, 15: ರಾಹುಲ್ ಗಾಂಧಿ ಜಾತಿ ಬಗ್ಗೆ ಇತ್ತೀಚೆಗಷ್ಟೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದರು. ಇದಕ್ಕೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಸಚಿವ ಕೆ.ವೆಂಕಟೇಶ್ ಅವರು, ರಾಹುಲ್ ಗಾಂಧಿ ಅವರದ್ದು ಮಾನವ ಜಾತಿ ಎಂದು ಹೇಳುವ ಮೂಲಕ ಯತ್ನಾಳ್‌ಗೆ ತಿರುಗೇಟು ನೀಡಿದ್ದಾರೆ.
ಚಾಮರಾಜನಗರದ ಮೂಗೂರು ಕ್ರಾಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಜಾತಿ ಬಗ್ಗೆ ಟೀಕಿಸಿದ್ದ ಬಸನಗೌಡ ಯತ್ನಾಳ್ ಮಾತಿಗೆ ಕಿಡಿಕಾರಿದರು. ಯತ್ನಾಳ್ ತಮ್ಮ ತೀಟೆಗಾಗಿ ಆ ರೀತಿ ಮಾತನಾಡುತ್ತಿದ್ದಾರೆ. ನಮ್ಮದೆಲ್ಲ ಮಾನವ ಜಾತಿ,ಯತ್ನಾಳ್‌ಗೆ ಮಾತನಾಡುವ ತೀಟೆ, ಮಾತನಾಡುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಎಂದರು.

ಮುನಿರತ್ನ ಬಂಧನದ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಾತಿ ನಿಂದನೆ ಮಾಡಿದವರನ್ನು ಬಂಧಿಸುವುದು ತಪ್ಪಾ? ಬಿಜೆಪಿ ಎಲ್ಲವನ್ನೂ ರಾಜಕೀಯ ಉದ್ದೇಶ ಎನ್ನುತ್ತದೆ. ಸಿದ್ದರಾಮಯ್ಯ ಮೇಲೆ ಕೇಸ್ ಹಾಕಿದ್ದು ರಾಜಕೀಯ ಉದ್ದೇಶ ಅಲ್ವಾ? ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸಿಎಂ ಸಿದ್ದರಾಮಯ್ಯನವರು ಪ್ರಭಾವ ಬೀರಿ ಸೈಟ್ ತಗೊಂಡಿದ್ದಾರಾ? ಬಿಜೆಪಿ ಮಾಡಿದ್ದೆಲ್ಲಾ ಸರಿ, ನಾವು ಮಾಡೋದು ತಪ್ಪಾ.? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ಇ.ಡಿ, ಸಿಬಿಐ ಬಿಟ್ಟು ಎಲ್ಲರನ್ನೂ ಅರೆಸ್ಟ್ ಮಾಡಿಸಲಿಲ್ವಾ ಎಂದು ಕಿಡಿಕಾರಿದರು. ಇನ್ನು ಆತ್ಮ ಸಾಕ್ಷಿ ಇಟ್ಟುಕೊಂಡು ಮಾತನಾಡಿ, ರಾಜಕೀಯವಾಗಿ ಮಾತನಾಡಬೇಡಿ. ಕೇಂದ್ರದಲ್ಲಿ ಹಿಂದೆ ನಮ್ಮ ಸರ್ಕಾರ ಇದ್ದಾಗ ಇಡಿ, ಸಿಬಿಐ ಬಳಸಿ ಅರೆಸ್ಟ್ ಮಾಡಿಸಿದ್ವಾ? ಆದರೆ ಬಿಜೆಪಿಯವರು ಇಡಿ, ಸಿಬಿಐ ಬಳಸಿಕೊಂಡು ಹೊಸ ಪಾಠ ಶುರುಮಾಡಿದ್ದಾರೆ. ಮುನಿರತ್ನ ಜಾತಿ ನಿಂದನೆ ಮಾಡಿದ್ದಾರೆ, ಅದಕ್ಕೆ ಅರೆಸ್ಟ್ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದರು.
ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಪ್ರಕರಣ ಕೇಳಿ ಬಂದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಮತ್ತೊಂದೆಡೆ ಸಿಎಂ ರೇಸ್‌ನಲ್ಲಿ ನಾವೂ ಇದ್ದೇವೆ ಎನ್ನುವ ಕೂಗುಗಳು ಸ್ವಪಕ್ಷದಲ್ಲೇ ಕೇಳಿಬರುತ್ತಿವೆ. ಇನ್ನೂ ಇದೀಗ ಶಾಮನೂರು ಶಿವಶಂಕರಪ್ಪನವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸೆಪ್ಟೆಂಬರ್ 12ರಂದು ದಾವಣಗೆರೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ ಅವರು, ಸಿಎಂ ಬದಲಾವಣೆ ವಿಚಾರ ಬಂದ್ರೆ ನಾನು ಕೂಡ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಆದರೆ ಸೆಪ್ಟೆಂಬರ್ 13ರಂದು ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯ ಕೆಲವು ಮುಖಂಡರು ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ಸಿದ್ದರಾಮಯ್ಯನವರು ಸಿಎಂ ಆಗಿರುವುದರಿಂದಲೇ 5 ಗ್ಯಾರಂಟಿ ಯೋಜನೆಗಳನ್ನು ನೀಡಿದರು. ರಾಜ್ಯದಲ್ಲಿ ಆರ್ಥಿಕ ಸಮತೋಲ ಇದ್ದು, ಹಣಕಾಸು ಪರಿಸ್ಥಿತಿಯೂ ಉತ್ತಮವಾಗಿದೆ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗುತ್ತಿದೆ ಎಂದು ಹೇಳಿದರು.












Click it and Unblock the Notifications