ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಜಗತ್ತಿನ ಅತಿದೊಡ್ಡ ಮಾನವ ಸರಪಳಿ-ಮಾಹಿತಿ, ವಿವರ ಇಲ್ಲಿದೆ
ಚಾಮರಾಜನಗರ, ಸೆಪ್ಟೆಂಬರ್, 15: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಗತ್ತಿನ ಅತಿದೊಡ್ಡ ಮಾನವ ಸರಪಳಿಗೆ ಚಾಮರಾಜನಗರ ಕೂಡ ಬೆಸೆದುಕೊಂಡಿತು. ಚಾಮರಾಜನಗರ ಮತ್ತು ಮೈಸೂರು ಗಡಿಭಾಗವಾದ ಮೂಗುರು ಕ್ರಾಸ್‌ನಲ್ಲಿ ಆರಂಭಗೊಂಡ ಮಾನವ ಸರಪಳಿ ನಗರದ ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆ ಬಳಿ ಕೊನೆಗೊಂಡಿತು. ಹಾಗಾದರೆ ಯಾವೆಲ್ಲ ರಾಜ್ಯಗಳ ಸಂಸ್ಕೃತಿಯ ದರ್ಶನ ಮಾಡಲಾಯಿತು ಎಂದು ಇಲ್ಲಿ ತಿಳಿಯಿರಿ.
ವಿವಿಧ ರಾಜ್ಯಗಳ ಸಂಸ್ಕೃತಿ ದರ್ಶನ: ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮಾನವ ಸರಪಳಿ ಹಾದು ಹೋಗಿದ್ದ ಮಾರ್ಗದಲ್ಲಿ ಭಾರತದ ಒಂದೊಂದು ರಾಜ್ಯದ ಧಿರಿಸು ಧರಿಸಿ ವಿವಿಧೆತೆಯಲ್ಲಿ ಏಕತೆಯ ಸಂಸ್ಕೃತಿ ಪ್ರತಿಬಿಂಬಿಸಿದರು. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಹೀಗೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪು ಧರಿಸಿ ಆಯಾ ರಾಜ್ಯದ ಭೂಪಟ ಹಿಡಿದು ನಾವೆಲ್ಲ ಒಂದು ಎನ್ನುವ ಸಂಕೇತವನ್ನು ಸೂಚಿಸಿದರು.

ಜಾನಪದ ಸಂಸ್ಕೃತಿ ಅನಾವರಣ: ಚಾಮರಾಜನಗರ ಜಾನದಪಗಳ ತವರೂರು ಆಗಿದ್ದು, ಮಾನವ ಸರಪಳಿಯ ಪ್ರಮುಖ ವೃತ್ತಗಳಲ್ಲಿ ಜಾನಪದ ನೃತ್ಯ ಪ್ರಸ್ತುತ ಪಡಿಸಲಾಯಿತು. ಸೋಲಿಗರ ಗೊರುಕನ, ಜೇನುಕುರುಬರ ನೃತ್ಯ, ಗೊರವರ ಕುಣಿತ, ಹುಲಿ ವೇಷ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಗಮನ ಸೆಳೆದವು.
1 ಕಿಮೀ ಧ್ವಜ-ಸಾಂಪ್ರದಾಯಿಕ ಧಿರಿಸು: ಪ್ರಜಾಪ್ರಭುತ್ವದ ಸಂಭ್ರಮಾಚರಣೆ ಹಿನ್ನೆಲೆ ಸರ್ಕಾರಿ ನೌಕರರು, ಕಾಲೇಜಿನ ಉಪನ್ಯಾಸಕರು, ಸಾರ್ವಜನಿಕರು, ರೈತರು, ಕನ್ನಡ ಪರ ಹೋರಾಟಗಾರರು ಪ್ರತಿನಿಧಿಸಿದರು. ಮಹಿಳೆಯರು ಹಸಿರು ಸೀರೆ, ಪುರುಷರು ಬಿಳಿ ಪಂಚೆ, ಶರ್ಟ್, ಶಲ್ಯ ಧರಿಸಿ ಮಿಂಚಿದರು. ರೈತರು ಹಸಿರು ಟವೆಲ್, ಕನ್ನಡಪರ ಹೋರಾಟಗಾರರು ನಾಡ ಧ್ವಜ, ಹೋರಾಟಗಾರರು ನೀಲಿ ಶಲ್ಯ ಹೊದ್ದಿದ್ದರು. ಇನ್ನು ರಾಮಸಮುದ್ರದಲ್ಲಿ 1 ಕಿಲೋ ಮೀಟರ್ ಉದ್ದದ ಭಾರತ ಧ್ವಜ ಹಿಡಿದು ರಾಷ್ಟ್ರಗೀತೆ ಹಾಡಿದ್ದು ಗಮನ ಸೆಳೆದಿತು.
ನಿರೀಕ್ಷಿತ ಮಟ್ಟದಲ್ಲಿ ಸೇರದ ಜನ: ಗಡಿಜಿಲ್ಲೆ ಚಾಮರಾಜನಗರಲ್ಲಿ 25 ಕಿಲೋ ಮೀಟರ್ ಉದ್ದದ ಮಾನವ ಸರಪಳಿ ಕಾರ್ಯಕ್ರಮದಲ್ಲಿ 19.5 ಸಾವಿರ ಮಂದಿ ಸೇರುತ್ತಾರೆ ಎನ್ನಲಾಗಿತ್ತು. ಆದರೆ, ಜಿಲ್ಲಾಡಳಿತದ ನಿರೀಕ್ಷೆ ಹುಸಿಯಾಗಿ ಮಾನವ ಸರಪಳಿ ಅಲ್ಲಲ್ಲಿ ನಿರೀಕ್ಷಿತ ಪ್ರಮಾಣದ ಜನರು ಸೇರದೇ ಇದ್ದದ್ದು ಕಂಡುಬಂದಿತು. ಇದಕ್ಕೆ ಸಚಿವ ಕೆ.ವೆಂಕಟೇಶ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಜನರು ಗ್ರಾಮಾಂತರ ಪ್ರದೇಶದಿಂದ ಬರುತ್ತಿದ್ದನ್ನು ನಾನೇ ನೋಡಿದೆ. ಇಷ್ಟು ಜನರು ಸೇರಿರುವುದೇ ದೊಡ್ಡದು, ಜನರನ್ನು ಪ್ರೋತ್ಸಾಹಿಸೋಣ ಎಂದರು.












Click it and Unblock the Notifications