ಮಲೆ ಮಾದಪ್ಪನ ಬೆಟ್ಟದಲ್ಲಿ ಮದ್ಯ ಘಾಟು: ಇಬ್ಬರು ಮುಖ್ಯ ಪೇದೆಗಳ ಅಮಾನತು
ಚಾಮರಾಜನಗರ, ಸೆಪ್ಟೆಂಬರ್, 11: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡದ ಆರೋಪದ ಮೇಲೆ ಇಲ್ಲಿನ ಪೊಲೀಸ್ ಠಾಣೆಯ ಇಬ್ಬರು ಮುಖ್ಯ ಪೇದೆಗಳನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಆದೇಶ ಹೊರಡಿಸಿದ್ದಾರೆ.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಮುಖ್ಯಪೇದೆ ಅಣ್ಣಾದೊರೆ ಹಾಗೂ ಮುತ್ತುರಾಜು ಅಮಾನತುಗೊಂಡವರು. ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದಿದ್ದರೂ ಹಿರಿಯ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಪೇದೆ ಅಣ್ಣಾದೊರೆ ಅವರನ್ನು ಅಮಾನತ್ತು ಮಾಡಲಾಗಿದೆ. ಅಲ್ಲದೆ ಸ್ಥಳೀಯರು ದೂರು ನೀಡಿದ ಹಿನ್ನೆಲೆ ಇನ್ನೋರ್ವ ಮುಖ್ಯಪೇದೆ ಮುತ್ತುರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಎಎಸ್ಐ ಯಾಗಿದ್ದ ಚಿಕ್ಕಕಾಳೇಗೌಡ ಅವರನ್ನು ಬೇಗೂರು ಪೊಲೀಸ್ ಠಾಣೆಗೆ, ಪೇದೆಗಳಾದ ಅಮರೇಶ್ ಚಾಮರಾಜನಗರ ಪಟ್ಟಣ ಠಾಣೆ, ಜೆ.ಎಸ್.ಶ್ರೀಗಂಧ ಕೊಳ್ಳೇಗಾಲ ಪಟ್ಟಣ ಠಾಣೆ, ಗುರುಕಿರಣ್ ಜೆ, ಸಿ ಇ.ಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಹನೂರಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಎಸ್ಪಿ ಡಾ.ಬಿ.ಟಿ.ಕವಿತಾ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿದಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಮದ್ಯ ಮಾರಾಟ ಮಾಡಲು ತಡೆಯಲು ಸ್ಥಳೀಯ ಪೊಲೀಸ್ ಠಾಣೆಯಿಂದ ನಾಲ್ವರು ಸಿಬ್ಬಂದಿಗಳನ್ನು ಬೇರೆ ಠಾಣೆಗಳಿಗೆ ವರ್ಗಾಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಮದ್ಯ ಮಾರಾಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಅಂತರರಾಜ್ಯ ಶ್ರೀಗಂಧ ಮರಗಳ್ಳರ ಬಂಧನ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಪೊಲೀಸರು ಮೂವರು ಅಂತರರಾಜ್ಯ ಹಾಗೂ ಓರ್ವ ಪಕ್ಕದ ತಾಲ್ಲೂಕಿನ ಶ್ರೀಗಂಧ ಮರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಪೊಲೀಸರ ಕಾರ್ಯಾಚರಣೆ ಹೇಗಿತ್ತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹಿರಿಯೂರು ತಾಲ್ಲೂಕಿನ ಶ್ರೀರಂಗ ಬಡಾವಣೆ, ಇ- ಕುರಬರಹಳ್ಳಿ ಗ್ರಾಮದ ವಿ.ರಾಜು ಅವರು ತಮ್ಮ ಜಮೀನಿನಲ್ಲಿ 300 ಶ್ರೀಗಂಧ ಸಸಿಗಳನ್ನು ಬೆಳೆದಿದ್ದರು. ಇವುಗಳಲ್ಲಿ ದಿನಾಂಕ 3/9/2024ರಂದು ಹೊಲದಲ್ಲಿರುವ ಮೂರು ಶ್ರೀಗಂಧ ಮರಗಳನ್ನು ಕತ್ತರಿಸಿ ಮರದ ಮೇಲ್ಭಾಗವನ್ನು ಅಲ್ಲಿಯೇ ಬಿಟ್ಟು ಮರದ ಕಾಂಡದ ಭಾಗವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಮೂರು ಮರದ ತುಂಡುಗಳು ಸುಮಾರು 50ರಿಂದ 60 ಕೆಜಿ ತೂಕ ಇದ್ದು, ಅಂದಾಜು ಮೌಲ್ಯ ಒಂದು ಲಕ್ಷ ರೂಪಾಯಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪಿರ್ಯಾದಿದಾರ ದೂರು ನೀಡಿದ್ದರು.
ದೂರು ಸ್ಪೀಕರಿಸಿದ ಅಬ್ಬಿನಹೊಳೆ ಪಿಎಸ್ಐ ಬಾಹುಬಲಿ ಎಂ.ಪಡನಾಡ ಹಾಗೂ ಜಿ.ಮಂಜುನಾಥ್ ಸಿಬ್ಬಂದಿ ಒಳಗೊಂಡ ತಂಡವು ಆರೋಪಿಗಳ ಮಾಹಿತಿ ಸಂಗ್ರಹಿಸಿ ಪಕ್ಕದ ತಾಲ್ಲೂಕಿನ ಓರ್ವ ಹಾಗೂ ಅಂತರರಾಜ್ಯದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಕುಂದುರ್ಪಿ ಮಂಡಲ ವಡ್ಡೆಪಾಳ್ಯಂ ಗ್ರಾಮದ ಕೊಟ್ಟೂರಪ್ಪ (26), ಈರಣ್ಣ (27), ಓಬಣ್ಣ (43) ಹಾಗೂ ಚಳ್ಳಕೆರೆ ತಾಲೂಕಿನ ಜಾಜೂರಿನ ಸಿದ್ದಣ್ಣ (35) ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಆರೋಪಿಗಳು ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದು, ಸುಂದರಿಯರಿಂದ ಸುಮಾರು 60,000 ರೂಪಾಯಿ ಮೌಲ್ಯದ 30 ಕೆಜಿ 640 ಗ್ರಾಂ ತೂಕದ ಶ್ರೀಗಂಧ ಮರದ ತುಂಡುಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ 1 ಗರಗಸ, ಒಂದು ಬಾಚಿ, ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಅಬ್ಬಿನಹೊಳೆ ಠಾಣೆಯ ಪಿಎಸ್ಐ ಬಾಹುಬಲಿ ಎಂ.ಪಡನಾಡ, ಜಿ.ಮಂಜುನಾಥ್, ಸಿಬ್ಬಂದಿ ನಾಗರಾಜ್, ನಿಂಗರಾಜ್, ದೇವೇಂದ್ರಪ್ಪ, ದಾದಾ ಕಲಂದರ್, ನಾಗಣ್ಣ, ರುದ್ರೇಶ್ ಹಾಗೂ ನಾಗರಾಜ್ ಇವರುಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿದ್ದಾರೆ.












Click it and Unblock the Notifications