ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ನೂರಾರು ಕೋಟಿ ಅಕ್ರಮ ಆಸ್ತಿ ದಾಖಲೆ ನನ್ನತ್ರ ಇದೆ: ಮಾಜಿ ಸಂಸದ
ಚಾಮರಾಜನಗರ, ಆಗಸ್ಟ್, 19: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಿದ್ದಂತೆ ಸಿಡಿದೆದ್ದಿರುವ ಕಾಂಗ್ರೆಸ್ ಪಡೆ ಇಂದು ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ, ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರಮ ಆಸ್ತಿ ಬಾಂಬ್ ಸಿಡಿಸಿದರು.
ಡಿ ನೋಟಿಫೈ ವಿಚಾರವಾಗಿ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ, ನೂರಾರು ಹೆಕ್ಟೇರ್ ತೋಟಗಳನ್ನು ಡಿನೋಟಿಫೈ ಮಾಡಿ, ಕೋಟಿ.. ಕೋಟಿ ಹಣ ಮಾಡುತ್ತಿದ್ದರು. ಏನು ಸರ್ ಇವೆಲ್ಲಾ ಅಂತಾ ಕೇಳಿದ್ದಕ್ಕೆ ಏನು ಮಾಡೋದು ಪಕ್ಷಕ್ಕೆ ಹಣ ಬೇಕಲ್ಲ ಅಂತ ಹೇಳಿದ್ರು ಎಂದು ತಿಳಿಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಹಗರಣದ ದಾಖಲೆ ನನ್ನ ಬಳಿ ಇದೆ. ಡಿನೋಟಿಫೈ ಹಗರಣದ ವಿಚಾರವಾಗಿ ನನ್ನ ಬಳಿ ರೆಕಾರ್ಡ್ ಇದೆ. ಅದನ್ನು ಸಿಎಂ ಸಿದ್ದರಾಮಯ್ಯ ಇಲ್ಲವೇ ಡಿ.ಕೆ.ಶಿವಕುಮಾರ್‌ಗೆ ನೀಡಿ ದೂರು ದಾಖಲು ಮಾಡುವಂತೆ ಹೇಳುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದಿದ್ದು ಬಿಜೆಪಿಗರಿಗೆ ಹೊಟ್ಟೆಯುರಿ: ಬಹುಮತದಿಂದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಂದಿರುವುದನ್ನು ಕಂಡರೆ ಬಿಜೆಪಿಗೆ ಹೊಟ್ಟೆಯುರಿ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ಸೋಮವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ಹೊಟ್ಟೆ ಉರಿ ಆಗಿದೆ. ಬಿಜೆಪಿಯವರು ತಾವು ಸರ್ಕಾರ ರಚನೆ ಮಾಡ್ತೀವಿ ಅಂತ ಕನಸು ಕಾಣುತ್ತಿದ್ದರು. ಕುಮಾರಸ್ವಾಮಿಗೆ ಚುನಾವಣೆಯಲ್ಲಿ ಫಲಿತಾಂಶ ಅತಂತ್ರ ಸ್ಥಿತಿಯಲ್ಲಿ ಬರುತ್ತದೆ. ನಾನು ಸರ್ಕಾರ ರಚನೆ ಮಾಡುತ್ತೇನೆ ಅಂತಾ ಭ್ರಮೆಯಲ್ಲಿದ್ದರು. ಆದ್ರೆ ಆ ರೀತಿ ಆಗ್ಲಿಲ್ಲ, ಜನ ಕಾಂಗ್ರೆಸ್‌ಗೆ ಬಹುಮತ ನೀಡಿದರು. ಅದನ್ನ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಇವಾಗ ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರ ಬಿಳಿಸಬೇಕು ಅಂತಾ ಬಿಜೆಪಿ, ಜೆಡಿಎಸ್ ಇಬ್ಬರು ಕುತಂತ್ರ ಮಾಡುತ್ತಿದ್ದಾರೆ ಸಚಿವರು ಆರೋಪಿಸಿದರು.
ಗೆಹ್ಲೋಟ್ ಮೋದಿ ಹಾಗೂ ಅಮಿತ್ ಶಾ ಸೇವಕ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಇಂದು ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಅದರಂತೆಯೇ ಇತ್ತ ಕೋಟೆನಾಡು ಚಿತ್ರದುರ್ಗದಲ್ಲೂ ಸಚಿವರು, ಶಾಸಕರು, ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದು, ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಸೇವಕನಾಗಿರುವ ಕರ್ನಾಟಕ ರಾಜ್ಯಪಾಲರಾದ ಥಾವೋರ್ ಚಂದ್ ಗೆಹ್ಲೋಟ್‌ಗೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ರಾಜ್ಯಪಾಲರ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಬಿಜಿ ಗೋವಿಂದಪ್ಪ, ಎಸ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್ ಆಂಜನೇಯ, ಮಾಜಿ ಸಂಸದ ಬಿಎನ್ ಚಂದ್ರಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ರಸ್ತೆ ತಡೆದು ಪ್ರತಿಭಟನೆ: ಮುಡಾ ಹಗರಣ ರಾಜ್ಯಪಾಲರಿಂದ ಪ್ರಾಸಿಕ್ಯೂಶನ್‌ಗೆ ಅನುಮತಿ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರಿಂದ ರಾಷ್ಟ್ರೀಯ ಹೆದ್ದಾರಿ ತಡೆದು, ಹೆದ್ದಾರಿ ಮಧ್ಯೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಐಯ್ಯನಹಳ್ಳಿ ಬಳಿ ಸೇರಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಟೈಯರ್ ಗೆ ಬೆಂಕಿ ಹಚ್ಚಿ, ರಾಜ್ಯಪಾಲರು ಸತ್ತು ಹೋದ್ರು ಅಂತಾ ಬಾಯಿ ಬಡೆದುಕೊಂಡರು. ಅಲ್ಲದೆ ರಾಜ್ಯಪಾಲರ ವಿರುದ್ಧ ಗೋಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications