ಚಾಮರಾಜನಗರ: ಈ ಊರಲ್ಲಿ ದೇವರಿಗೆ ಕೆಂಡದ ನೈವೇದ್ಯ, ಕೈ, ಬಟ್ಟೆ ಸುಡುವುದಿಲ್ಲವಂತೆ.!
ಚಾಮರಾಜನಗರ, ಮಾರ್ಚ್, 26: ಜಾನಪದ ನಾಡು ಚಾಮರಾಜನಗರವು ವೈವಿಧ್ಯಮಯ ಜಾತ್ರೆ, ಆಚರಣೆಯಿಂದ ಗಮನ ಸೆಳೆಯುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೆಯೇ ನಿಗಿನಿಗಿ ಕೆಂಡ ದೇವರಿಗೆ ನೈವೇದ್ಯವಾಗಿ ಅರ್ಪಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಣಹಳ್ಳಿ ಗ್ರಾಮದಲ್ಲಿ ಸತ್ಯವತಿ ದೇವರ ದೇಗುಲವಿದ್ದು, ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದೆ. ಸಾಮಾನ್ಯವಾಗಿ ಕೆಂಡವನ್ನು ಹಾಯುವುದು ಎಲ್ಲೆಡೆ ಸಾಮಾನ್ಯ. ಆದರೆ ಇಲ್ಲಿ, ಕೆಂಡವನ್ನು ಬರಿಗೈಯಲ್ಲಿ ಕೊಳಗಕ್ಕೆ ತುಂಬಿ ಬಳಿಕ ಬಿಳಿ ಬಟ್ಟೆಗೆ ಕೆಂಡ ಸುರಿದು ದೇವರಿಗೆ ನೈವೇದ್ಯ ಇಡುವುದು ಇಲ್ಲಿನ ವಿಶೇಷವಾಗಿದೆ.

ರೋಮಾಂಚಕಕಾರಿಯಾದ ಈ ದೃಶ್ಯವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡು ಅತೀಂದ್ರಿಯ ಶಕ್ತಿಗೆ ತಲೆ ಬಾಗಿದ್ದಾರೆ. ಬರಿಗೈಯಲ್ಲಿ ಕೆಂಡ ಸುರಿದರೂ ಅರ್ಚಕನ ಕೈ ಸುಡುವುದಿಲ್ಲವಂತೆ, ಬಟ್ಟೆಯ ಜೋಳಿಗೆಗೆ ಏನೂ ಆಗುವುದಿಲ್ಲ. ಈ ಜಾತ್ರೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಎಲ್ಲರನ್ನೂ ಅಚ್ಚರಿಗೆ ನೂಕುವ ಈ ಆಚರಣೆ ಸತ್ಯವತಿ ದೇವರ ಪವಾಡ ಎಂಬುದು ಜನರ ನಂಬಿಕೆಯಾಗಿದೆ.
ಭಕ್ತಿ ಶ್ರದ್ಧೆಯಿಂದ ನೆರವೇರಿದ ಕೊಂಡೊತ್ಸವ: ಈ ದೇವಾಲಯಕ್ಕೆ ಮಹಿಳೆಯರು ತೆರಳಿದರೇ ಕಲ್ಲಾಗುತ್ತಾರೆ ಎಂಬ ನಂಬಿಕೆ ಇರುವುದರಿಂದ ಹಾಗೂ ಮಹಿಳೆಯರಿಂದ ಅಂತರ ಕಾಯ್ದುಕೊಂಡು ದೇವರು ತಪಸ್ಸಿಗೆ ಕುಳಿತಿರುವ ಐತಿಹ್ಯ ಇರುವ ಈ ದೇವಾಲಯದಲ್ಲಿ ಸಡಗರದಿಂದ ಜಾತ್ರೆ ನಡೆಯುತ್ತಿದೆ.
ಚಾಮರಾಜನಗರ ಗಡಿಭಾಗದಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ಜಾತ್ರೆ ಆರಂಭಗೊಂಡಿದ್ದು, ಮಂಗಳವಾರ ಬೆಳಗ್ಗೆ ಭಕ್ತಿ ಶ್ರದ್ಧೆಯಿಂದ ಕೊಂಡೊತ್ಸವ ನೆರವೇರಿದೆ.
ಒಂದು ರೀತಿ ಪುರುಷ ಭಕ್ತರ ಜಾತ್ರೆ ಇದಾಗಿದ್ದು, ಜಾತ್ರೆಗೆ, ದೇವರ ದರ್ಶನಕ್ಕೆ ಮಹಿಳೆಯರ ಪ್ರವೇಶ ಇರುವುದಿಲ್ಲ. ಎರಡು ರಾಜ್ಯಗಳಿಂದ ಕೊಂಗಳ್ಳಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನಸ್ವಾಮಿಯ ಮಹಾನ್ ತಪಸ್ಸು ಮಾಡಲು ಈ ಪ್ರದೇಶ ಆರಿಸಿಕೊಂಡಿದ್ದರಿಂದ ದೇಗುಲಕ್ಕೆ ಮಹಿಳೆಯರ ಪ್ರವೇಶ ಇಲ್ಲ. ವರ್ಷಕ್ಕೆಮ್ಮೆ ಮಾತ್ರ ಊರಿನಲ್ಲಿ ಉತ್ಸವ ನಡೆಯಲಿದ್ದು, ಗ್ರಾಮಕ್ಕೆ ದೇವರ ಉತ್ಸವ ಮೂರ್ತಿ ತೆರಳಿದ ವೇಳೆ ಮಾತ್ರ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸುವ ವಿಶಿಷ್ಠ ಸಂಪ್ರದಾಯ ಇಲ್ಲಿನದ್ದಾಗಿದೆ.












Click it and Unblock the Notifications